ದಾವಣಗೆರೆ ಉಪ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರಿಗೆ ಹಿನ್ನೆಡೆ, ಬಿಜೆಪಿ - ಎಸ್‌ಡಿಪಿಐ ಪೈಪೋಟಿ
Samarth Shamanur: ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶದೊಂದಿಗೆ ಕರ್ನಾಟಕದ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶವೂ ಸಹ ಇಂದೇ ಪ್ರಕಟವಾಗುತ್ತಿದೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಪ್ರಾರಂಭಿಕ ಹಂತದಲ್ಲೇ ಬಿಜೆಪಿ ಮುನ್ನಡೆ ಸಾಧಿಸಿರುವುದು ಕುತೂಹಲ ಮೂಡಿಸಿದೆ. ಈ ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎನ್ನುವ ಆಗ್ರಹವು ಕೇಳಿ ಬಂದಿತ್ತು. ಆದರೆ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡುವುದಕ್ಕೆ ಕಾಂಗ್ರೆಸ್ ಪಕ್ಷವು ನಿರಾಕರಿಸಿತ್ತು.
ಇದೀಗ ಮುಸ್ಲಿಂ ಸಮುದಾಯದ ಮತಗಳು ವಿಭಜನೆಯಾಗಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಇದಕ್ಕೆ ಮುಖ್ಯ ಕಾರಣ ಪ್ರಾರಂಭಿಕ ಹಂತದಲ್ಲೇ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿಗೆ ಮುನ್ನಡೆ ಆಗಿದೆ.

ಕರ್ನಾಟಕದ ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ಮೇ 4ರ ಸೋಮವಾರ ಪ್ರಾರಂಭವಾಗಿದೆ. ಹಿರಿಯ ಕಾಂಗ್ರೆಸ್ ಶಾಸಕರಾದ ಎಚ್.ವೈ. ಮೇಟಿ (ಬಾಗಲಕೋಟೆ) ಮತ್ತು ಶಾಮನೂರು ಶಿವಶಂಕರಪ್ಪ (ದಾವಣಗೆರೆ ದಕ್ಷಿಣ) ಅವರ ನಿಧನದಿಂದಾಗಿ ಈ ಉಪಚುನಾವಣೆಗಳು ನಡೆದಿದ್ದವು. ಈ ಉಪ ಚುನಾವಣೆಯನ್ನು ಕಾಂಗ್ರೆಸ್ ಪಕ್ಷವು ಪ್ರತಿಷ್ಠೆಯಾಗಿ ಪರಿಗಣಿಸಿದೆ. ಅದೇ ಸಮಯದಲ್ಲಿ ಕಳೆದ ಬಾರಿ ನಡೆದ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ್ದ ಬಿಜೆಪಿಯು ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಸಮರ್ಥ್ ಮಲ್ಲಿಕಾರ್ಜುನ್ ಹಾಗೂ ಬಿಜೆಪಿ ಪಕ್ಷದಿಂದ ಹೊಸ ಮುಖ ಶ್ರೀನಿವಾಸ್ ಟಿ. ದಾಸಕರಿಯಪ್ಪ ಅವರಿಗೆ ಟಿಕೆಟ್ ನೀಡಲಾಗಿದೆ. ಆದರೆ ದಾವಣಗೆರೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಹಲವು ಕಾರಣಗಳಿಗೆ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ.
ಸರಿಯಾದ ಪ್ರಚಾರ ಮಾಡಿಲ್ಲ ಅಥವಾ ಸಹಕಾರ ನೀಡಿಲ್ಲ ಎಂದು ಕಾಂಗ್ರೆಸ್ ಪಕ್ಷವು ಈಗಾಗಲೇ ವಿವಿಧ ಮುಸ್ಲಿಂ ನಾಯಕರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದೆ. ಅಲ್ಲದೆ ಕೆಲವರು ಪಕ್ಷದ ಪ್ರಾಥಮಿಕ ಸ್ಥಾನದಿಂದಲೇ ವಜಾ ಮಾಡಲಾಗಿದೆ. ಇದೀಗ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಒಂದೊಮ್ಮೆ ದಾವಣಗೆರೆಯಲ್ಲಿ ಬಿಜೆಪಿ ಗೆದ್ದರೆ ಇನ್ನಷ್ಟು ಕಾಂಗ್ರೆಸ್ ನಾಯಕರು ಸೇರಿದಂತೆ ಸಚಿವರೂ ಸಹ ತಮ್ಮ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ.
Samarth Shamanur: ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರಿಗೆ ಹಿನ್ನೆಡೆ
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರವು ಕಾಂಗ್ರೆಸ್ ಪಕ್ಷ ಭದ್ರಕೋಟೆಯಾಗಿದೆ. ಅಲ್ಲದೆ ಶಾಮನೂರು ಶಿವಶಂಕರಪ್ಪ ಅವರು ಆಡಳಿತ ನಡೆಸಿದ ಹಾಗೂ ಶಾಮನೂರು ಕುಟುಂಬದ ಹಿಡಿತ ಈ ಭಾಗದಲ್ಲಿದೆ. ಆದರೆ, ಈ ಬಾರಿ ಶಾಮನೂರು ಕುಟುಂಬ ಹಾಗೂ ಕಾಂಗ್ರೆಸ್ ಪಕ್ಷದ ಲೆಕ್ಕಾಚಾರಗಳು ತಲೆಕೆಳಗಾದಂತಾಗಿದೆ.
ಈ ಕ್ಷೇತ್ರದ ಉಪ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದ್ದು, 2ನೇ ಸುತ್ತಿನ ಅಂತ್ಯಕ್ಕೆ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ 211 ಮತಗಳ ಮುನ್ನಡೆ ಸಾಧಿಸಿದ್ದಾರೆ. ಸಮರ್ಥ್ ಶಾಮನೂರಿ ಅವರಿಗೆ ಹಿನ್ನೆಡೆಯಾಗಿದೆ. 3 ನೇ ಸ್ಥಾನದಲ್ಲಿ ಎಸ್‌ಡಿಪಿಐ ಪಕ್ಷವಿದೆ. ಈ ಬಾರಿ ಈ ಕ್ಷೇತ್ರದಲ್ಲಿ ಮತ ವಿಭಜನೆ ಆಗಿರುವುದು ಪ್ರಾರಂಭಿಕ ಹಂತದಲ್ಲಿ ಕಂಡು ಬರುತ್ತಿದೆ.












Click it and Unblock the Notifications