ಅಧಿಕಾರದ ಸನಿಹಕ್ಕೆ ವಿಜಯ್‌: ತಮಿಳುನಾಡು ಲೆಕ್ಕಾಚಾರ ಉಲ್ಟಾಪಲ್ಟಾ, ಡಿಎಂಕೆ ಕಳಾಹೀನ, ಕುಸಿದ ಎಐಎಡಿಎಂಕೆ

ಚುನಾವಣಾ ರಾಜಕಾರಣದಲ್ಲಿ ಎದುರಿಸಿದ ಮೊದಲ ಎಸೆತದಲ್ಲಿಯೇ ಸ್ಟಾರ್ ನಟ ವಿಜಯ್ ಸಿಕ್ಸರ್‌ ಬಾರಿಸಿದ್ದಾರೆ. ತಮಿಳುನಾಡು ವಿಧಾನಸಭಾ ಚುನಾವಣೆ ಫಲಿತಾಂಶಗಳು ಸಮೀಕ್ಷೆ, ಲೆಕ್ಕಾಚಾರಗಳನ್ನು ಉಲ್ಟಾಪಲ್ಟಾ ಮಾಡುತ್ತಿವೆ. ಬೆಳಿಗ್ಗೆ 10:40 ರ ಹೊತ್ತಿನ ಮತಎಣಿಕೆ ಮಾಹಿತಿಯ ಪ್ರಕಾರ ವಿಜಯ್ ನೇತೃತ್ವದ ಟಿವಿಕೆ (ತಮಿಳಗ ವೆಟ್ರಿಕ ಕಳಗಂ) ಬರೋಬ್ಬರಿ 106 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು ತಮಿಳುನಾಡಿನ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ-ಬಿಜೆಪಿ ಮೈತ್ರಿ 78 ಸ್ಥಾನ ಪಡೆದಿದ್ದು ಎರಡನೇ ಸ್ಥಾನದಲ್ಲಿದ್ದರೆ ಮತ್ತು ಹಾಲಿ ಮುಖ್ಯಮಂತ್ರಿ ಸ್ಟಾಲಿನ್ ನೇತೃತ್ವದ ಡಿಎಂಕೆ-ಕಾಂಗ್ರೆಸ್ ಮೈತ್ರಿ 46 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು ಮೂರನೇ ಸ್ಥಾನಕ್ಕೆ ಕುಸಿದಿದೆ.

ಕೇವಲ ಮತಎಣಿಕೆಯ ಮುನ್ನಡೆಯನ್ನಷ್ಟೇ ಆಧರಿಸಿ ಅಂತಿಮ ಫಲಿತಾಂಶದ ಬಗ್ಗೆ ನಿರ್ಣಕ್ಕೆ ಬರುವುದು ತಪ್ಪು. ಆದರೂ 234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ಅಧಿಕಾರ ಹಿಡಿಯಲು ಮ್ಯಾಜಿಕ್‌ ನಂಬರ್ 118. ಅಂದರೆ ಅಧಿಕಾರಕ್ಕೂ ವಿಜಯ್‌ಗೂ ನಡುವೆ ಈ ಹೊತ್ತಿನಲ್ಲಿ ಇರುವುದು ಕೇಲವೇ ಸ್ಥಾನಗಳು ಮಾತ್ರ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಬಿಜೆಪಿ ಪಾಲಿಗೆ ಮಗ್ಗುಲ ಮುಳ್ಳಾಗಿ ಸದಾ ಚುಚ್ಚುವ ಡಿಎಂಕೆಯನ್ನು ಅಧಿಕಾರದಿಂದ ದೂರ ಇರಿಸಲು ಸ್ಟಾಲಿನ್‌ ಬೆಂಬಲಕ್ಕೆ ಎಐಎಡಿಎಂಕೆ ಮೈತ್ರಿಕೂಟವು ನಿಂತರೆ ಮೊದಲ ಚುನಾವಣೆಯಲ್ಲಿಯೇ ಅಧಿಕಾರ ಹಿಡಿಯುವುದು ವಿಜಯ್‌ಗೆ ಕಷ್ಟವೇನೂ ಆಗಲಾರದು.

Tamilnadu Assembly election

ಪತ್ನಿ ಸಂಗೀತಾ ಜೊತೆಗಿನ ಸಾಂಸಾರಿಕ ಬಿಕ್ಕಟ್ಟು, ಕೊನೇ ಗಳಿಗೆಯಲ್ಲಿ ತ್ರೀಶಾ ಜೊತೆಗಿನ ಸಂಬಂಧ ಮತ್ತೊಮ್ಮೆ ಬಹಿರಂಗವಾದ ಮುಜುಗರ, ಜನನಾಯಗನ್ ಸಿನಿಮಾ ಬಿಡುಗಡೆ ವಿವಾದ, ಕರೂರು ಕಾಲ್ತುಳಿತ ಪ್ರಕರಣದಲ್ಲಿ ಅನುಭವಿಸಿದ ಮುಜುಗರ ಸೇರಿದಂತೆ ವಿಜಯ್‌ ಈ ಚುನಾವಣೆಯಲ್ಲಿ ಕಳಾಹೀನ ಸ್ಥಿತಿಯಲ್ಲಿರುತ್ತಾರೆ ಎನ್ನಲು ಹಲವು ಕಾರಣಗಳಿದ್ದವು. ಆದರೆ ಈ ಎಲ್ಲದರ ಹೊರತಾಗಿಯೂ ಜನರು ನೆಚ್ಚಿನ ನಟನ ಕೈಹಿಡಿದು ಅಚ್ಚರಿಯ ಫಲಿತಾಂಶಕ್ಕೆ ಮುನ್ನುಡಿ ಬರೆದಿದ್ದಾರೆ. ಸ್ವತಃ ವಿಜಯ್ ಅವರು ತಿರುಚ್ಚಿ ಪೂರ್ವ ಮತ್ತು ಪೆರಂಬದೂರು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಡಿಎಂಕೆ ಎದುರಿಸಿದ್ದ ಆಡಳಿತ ವಿರೋಧಿ ಅಲೆಯೇ ಟಿವಿಕೆಗೆ ವರದಾನವಾಗಿದೆ ಎನ್ನುವ ವಿಶ್ಲೇಷಣೆ ಎಲ್ಲೆಡೆ ತೇಲಿ ಬರುತ್ತಿದೆ. ಚುನಾವಣೆ ಇದ್ದಾಗಲಷ್ಟೇ ಸಕ್ರಿಯರಾಗುವ ಎಐಎಡಿಎಂಕೆ ನಾಯಕರ ನಿಷ್ಕ್ರಿಯ ಪ್ರವೃತ್ತಿಗೂ ಬುದ್ಧಿ ಕಲಿಸಲು ಜನರು ನಿರ್ಧರಿಸಿದ್ದರು. ಈ ಎರಡೂ ವಿದ್ಯಮಾನಗಳ ಲಾಭ ವಿಜಯ್ ನೇತೃತ್ವದ ಟಿವಿಕೆ ಪಕ್ಷಕ್ಕೆ ಸಿಕ್ಕಿದೆ.

ವಿಜಯ್ ಮುನ್ನಡೆಗೆ ಕಾರಣವಾದ 5 ಮುಖ್ಯ ಅಂಶಗಳು ಇವು

1) ಅಭಿಮಾನಿಗಳ ಶ್ರೀರಕ್ಷೆ: ವಿಜಯ್ ಅವರಿಗೆ ತಮಿಳುನಾಡು ಸೇರಿದಂತೆ ಭಾರತದಾದ್ಯಂತ ಅಪಾರ ಅಭಿಮಾನಿ ಬಳಗ ಇದೆ. ಸ್ವಭಾತಃ ಭಾವುಕರಾಗಿರುವ ತಮಿಳುನಾಡಿನ ಜನರು ಸಿನಿಮಾ ನಟರನ್ನು ಅಧಿಕಾರಕ್ಕೆ ತರುವುದು ಹೊಸ ವಿದ್ಯಮಾನವೇನೂ ಅಲ್ಲ.

2) ಪರ್ಯಾಯದ ಭರವಸೆ: ತಮಿಳುನಾಡಿನಲ್ಲಿ ಬಹುಕಾಲದಿಂದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳಷ್ಟೇ ಅಧಿಕಾರದಲ್ಲಿದ್ದವು. ಅದಕ್ಕೆ ಪರ್ಯಾಯವಾಗಿ ಸ್ಥಳೀಯ ನಾಯಕನೊಬ್ಬ ಬೇಕು ಎಂದು ತಮಿಳುನಾಡಿನ ಜನರ ಆಸೆಯಾಗಿತ್ತು. ಈ ಸ್ಥಾನದಲ್ಲಿ ವಿಜಯ್ ಕಾಣಿಸಿಕೊಂಡರು. ಅಭಿಮಾನಿಗಳು ಆಶೀರ್ವದಿಸಿದರು.

3) ಡಿಜಿಟಲ್ ತಾಕತ್ತು: ತಮ್ಮ ಬಹುತೇಕ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ವಿಜಯ್ ಅವರು ಯುವ ಸಮೂಹದಲ್ಲಿ ಹೆಚ್ಚಿನ ಬೆಂಬಲಿಗರನ್ನು ಹೊಂದಿದ್ದಾರೆ. ಹೊಸ ತಲೆಮಾರಿನ ಮತದಾರರನ್ನು ತಲುಪಲು ಇನ್‌ಸ್ಟಾಗ್ರಾಮ್ ಸೇರಿದಂತೆ ಡಿಜಿಟಲ್ ಸಾಧನಗಳನ್ನು ಸಶಕ್ತವಾಗಿ ಬಳಸಿಕೊಳ್ಳುವ ಕಾರ್ಯತಂತ್ರ ರೂಪಿಸಿದರು. ಅವರ ಮುನ್ನಡೆಗೆ ಈ ಕಾರ್ಯತಂತ್ರದ ಕೊಡುಗೆ ಬಹಳ ದೊಡ್ಡದು.

4) ಗ್ಯಾರೆಂಟಿಗಳ ಭರವಸೆ: ಈವರೆಗೆ ಒಮ್ಮೆಯೂ ಆಡಳಿತ ನಡೆಸಿದ ಅನುಭವ ಇಲ್ಲದ ವಿಜಯ್‌ ಅವರಿಗೆ ಭರವಸೆ ಕೊಡುವಲ್ಲಿ ಸಾಧ್ಯಾಸಾಧ್ಯತೆಗಳ ಹಿಂಜರಿಕೆ ಇರಲಿಲ್ಲ. ವರ್ಷಕ್ಕೆ 6 ಎಲ್‌ಪಿಜಿ ಸಿಲಿಂಡರ್, 200 ಯೂನಿಟ್ ವಿದ್ಯುತ್, ಮಹಿಳೆಯರಿಗೆ ತಿಂಗಳಿಗೆ 2,500 ರೂಪಾಯಿ ಮಾಸಾಶನ, ನಿರುದ್ಯೋಗಿಗಳಿಗೆ 4000 ರೂಪಾಯಿ ಮಾಸಾಶನ, ಕುಟುಂಬಕ್ಕೆ 25 ಲಕ್ಷ ಆರೋಗ್ಯ ವಿಮೆ, ಅಡಮಾನವಿಲ್ಲದ ಶಿಕ್ಷಣ ಸಾಲ, ಸೇರಿದಂತೆ ಹಲವು ಭರವಸೆಗಳನ್ನು ಚುನಾವಣೆ ಸಂದರ್ಭದಲ್ಲಿ ನೀಡಿದ್ದರು.

5) ತಳಮಟ್ಟದ ಸಂಘಟನೆ: ತಮಿಳುನಾಡಿನ ಹಲವು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಿಜಯ್ ಅವರು ಹಲವು ವರ್ಷಗಳಿಂದ 'ಮಕ್ಕಳ್ ಇಯಕ್ಕಂ' (ಅಭಿಮಾನಿ ಸಂಘ) ಮೂಲಕ ಬಲಿಷ್ಠ ಸಂಘಟನೆ ರೂಪಿಸಿದ್ದರು. ಚುನಾವಣಾ ಸಮಯದಲ್ಲಿ ಮತಗಳನ್ನು ಕ್ರೋಢೀಕರಿಸಲು ಇದು ನೆರವಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+