ಅಯೋಧ್ಯೆ ವಿವಾದ: ಸುಪ್ರೀಂ ಕೋರ್ಟಿನಲ್ಲಿ ನಾಳೆ ವಿಚಾರಣೆ ಅಂತ್ಯ
ನವದೆಹಲಿ, ಅಕ್ಟೋಬರ್ 15: ಎರಡೂವರೆ ದಶಕಕ್ಕೂ ಹೆಚ್ಚು ಕಾಲದಿಂದ ವಿವಾದದ ಕೇಂದ್ರಬಿಂದುವಾಗಿರುವ ಅಯೋಧ್ಯೆಯ ರಾಮಜನ್ಮಭೂಮಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟಿನಲ್ಲಿ ನಡೆಯುತ್ತಿರುವ ವಿಚಾರಣೆ ನಾಳೆ ಅಂತ್ಯಗೊಳ್ಳಲಿದೆ.
ವಿಚಾರಣೆ ಆರಂಭವಾಗಿ ಅಕ್ಟೋಬರ್ 16 ಕ್ಕೆ 40 ದಿನವಾಗಲಿದೆ. ಅಕ್ಟೋಬರ್ 18 ರಂದು ವಿಚಾರಣೆಯನ್ನು ಮುಗಿಸಬೇಕು ಎಂದು ಸುಪ್ರೀಂ ಕೋರ್ಟ್ ತನ್ನ ಪೀಠಕ್ಕೆ ಸೂಚನೆ ನೀಡಿತ್ತು.
1992 ರ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಸಮಯದಲ್ಲಿ ಒಟ್ಟು 67 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗಿತ್ತು. ಅದರಲ್ಲಿ ಕೇವಲ 2.7 ಎಕರೆ ಭೂಮಿಯಷ್ಟೇ ವಿವಾದಾತ್ಮಕ ಸ್ಥಳವಾಗಿದ್ದು, ಉಳಿದವು ವಿವಾದಮುಕ್ತವಾಗಿವೆ.

2010 ರಲ್ಲಿ ಅಲಹಾಬಾದ್ ಹೈಕೋರ್ಟ್ 2.77 ಎಕರೆ ವಿಸ್ತೀರ್ಣದ ಭೂಮಿಯನ್ನು ಸದ್ಯಕ್ಕೆ ಸುನ್ನಿ ವಕ್ಫ್ ಬೋರ್ಡ್, ನಿರ್ಮೋಹಿ ಅಖಾರ ಹಾಗು ರಾಮ್ ಲಲ್ಲಾ ಸಮಾನಾಗಿ ಹಂಚುವಂತೆ ಆದೇಶಿಸಿತ್ತು. ಆದರೆ ಇದೀಗ ಈ ಹಕ್ಕಿಗೆ ಸಂಬಂಧಿಸಿದ ವಿಚಾರಣೆ ಸುಪ್ರೀಂ ಕೋರ್ಟಿನಲ್ಲಿ ನಡೆಯುತ್ತಿದ್ದು, ಅಕ್ಟೋಬರ್ 16 ಕ್ಕೆ ವಿಚಾರಣೆ ಮುಕ್ತಾಯವಾಗಲಿದೆ.
ಆದರೆ ಪ್ರಕರಣದ ತೀರ್ಪು ಯಾವಾಗ ಹೊರಬೀಳಲಿದೆ ಎಂಬ ಬಗ್ಗೆ ಸುಪ್ರೀಂ ಕೋರ್ಟ್ ಇದುವರೆಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.
ಅಯೋಧ್ಯೆ ವಿವಾದವನ್ನು ಸಂಧಾನದ ಮೂಲಕವೇ ಬಗೆಹರಿಸಿಕೊಳ್ಳುವಂತೆ ಈ ಮೊದಲು ಸುಪ್ರೀಂ ಕೋರ್ಟ್ ಹೇಳಿತ್ತು. ಆದರೆ ಸಂಧಾನ ವಿಫಲವಾದ ಹಿನ್ನೆಲೆಯಲ್ಲಿ ಆ.6 ರಿಂದ ಸುಪ್ರೀಂ ಕೋರ್ಟ್ ಪ್ರತಿದಿನವೂ ಈ ಪ್ರಕರಣದ ವಿಚಾರಣೆ ನಡೆಸಿದೆ.












Click it and Unblock the Notifications