ಚುನಾವಣಾ ಕರ್ತವ್ಯದಲ್ಲಿದ್ದ 135 ಜನ ಕೋವಿಡ್‌ಗೆ ಬಲಿ
ಲಕ್ನೋ, ಏಪ್ರಿಲ್ 27; ಉತ್ತರ ಪ್ರದೇಶದಲ್ಲಿ ಪಂಚಾಯಿತಿ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ 135 ಜನರು ಕೋವಿಡ್‌ಗೆ ಬಲಿಯಾಗಿದ್ದಾರೆ. ಅಲಹಾಬಾದ್ ಹೈಕೋರ್ಟ್ ಈ ಕುರಿತು ರಾಜ್ಯ ಚುನಾವಣಾ ಆಯೋಗಕ್ಕೆ ನೋಟಿಸ್ ನೀಡಿದೆ.
ನ್ಯಾಯಮೂರ್ತಿ ಸಿದ್ಧಾರ್ಥ ವರ್ಮಾ ಮತ್ತು ಅಜಿತ್ ಕುಮಾರ್ ಅವರಿದ್ದ ವಿಭಾಗೀಯ ಪೀಠ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದೆ. ಚುನಾವಣಾ ಕಾರ್ಯದಲ್ಲಿದ್ದ ಸಿಬ್ಬಂದಿಗಳ ರಕ್ಷಣೆ ಬಗ್ಗೆ ಏಕೆ ಗಮನಹರಿಸಲಿಲ್ಲ? ಎಂದು ಆಯೋಗವನ್ನು ಕೇಳಿದೆ.
ಚುನಾವಣಾ ಕಾರ್ಯದಲ್ಲಿ ತೊಡಗಿದ್ದ ಶಿಕ್ಷಕರು, ಶಿಕ್ಷ ಮಿತ್ರರು ಸೇರಿದಂತೆ 135 ಜನರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಪತ್ರಿಕೆ ವರದಿ ಮಾಡಿತ್ತು. 26/4/2021ರಂದು ಈ ವರದಿ ಸಂಚಲನ ಮೂಡಿಸಿತ್ತು.

ವರದಿಯ ಬಗ್ಗೆ ತಿಳಿದ ಬಳಿಕ ಕೋರ್ಟ್ ಚುನಾವಣಾ ಆಯೋಕ್ಕೆ ನೋಟಿಸ್ ನೀಡಿದೆ. ಪೊಲೀಸ್ ಮತ್ತು ಚುನಾವಣಾ ಆಯೋಗ ಸಿಬ್ಬಂದಿಯ ಆರೋಗ್ಯ ಕಾಪಾಡಲು ಯಾವ ಕ್ರಮ ಕೈಗೊಂಡಿತ್ತು? ಎಂದು ಸಹ ಪ್ರಶ್ನೆ ಮಾಡಿದೆ.
ಮುಂಬರುವ ಹಂತದ ಪಂಚಾಯಿತಿ ಚುನಾವಣೆ ವೇಳೆಯಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಬಳಕೆ ಸೇರಿದಂತೆ 20/4/2021ರಂದು ಹೊರಡಿಸಿರುವ ಮಾರ್ಗಸೂಚಿ ಪಾಲನೆ ಮಾಡಲು ಆಯೋಗ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿದೆ.












Click it and Unblock the Notifications