ಲಂಡನ್: ವಿಮಾನದಿಂದ ಗಾರ್ಡನ್ ಒಳಗೆ ಬಿತ್ತು ವ್ಯಕ್ತಿಯ ದೇಹ
ಲಂಡನ್, ಜುಲೈ 2: ಹಾರುತ್ತಿದ್ದ ವಿಮಾನವೊಂದರಿಂದ ವ್ಯಕ್ತಿಯೊಬ್ಬನ ದೇಹ ಲಂಡನ್‌ನ ಮನೆಯೊಂದರ ಉದ್ಯಾನದಲ್ಲಿ ಬಿದ್ದ ಘಟನೆ ನಡೆದಿದೆ.
ಕೀನ್ಯಾದ ನೈರೋಬಿಯಿಂದ ಹೊರಟಿದ್ದ ಕೀನ್ಯಾ ಏರ್‌ವೇಸ್ ವಿಮಾನವು ಹೀಥ್ರೂ ವಿಮಾನ ನಿಲ್ದಾಣದಲ್ಲಿ ಇಳಿಯುವ ಮೊದಲೇ ವ್ಯಕ್ತಿಯ ದೇಹ ನೆಲಕ್ಕೆ ಬಿದ್ದಿದೆ. ವಿಮಾನದ ಅಡಿಭಾಗದ ಕ್ಯಾರಿಯೇಜ್‌ನಲ್ಲಿ ಆತ ಅಡಗಿ ಕುಳಿತಿದ್ದ ಎಂದು ಶಂಕಿಸಲಾಗಿದೆ.
ಭಾನುವಾರ ಮಧ್ಯಾಹ್ನ 3.41ರ ಸುಮಾರಿಗೆ ದಕ್ಷಿಣ ಲಂಡನ್‌ನ ಕ್ಲಾಫಮ್‌ನಲ್ಲಿರುವ ತೋಟದಲ್ಲಿ ವ್ಯಕ್ತಿಯ ದೇಹ ಬಿದ್ದಿದೆ. ಆತ ಯಾರು? ಯಾವ ದೇಶದವನು ಎಂಬ ಮಾಹಿತಿ ಗೊತ್ತಾಗಿಲ್ಲ. ವಿಮಾನದ ಕಂಪಾರ್ಟ್‌ಮೆಂಟ್ ಒಂದರಲ್ಲಿ ಚೀಲ, ನೀರು ಮತ್ತು ಸ್ವಲ್ಪ ಆಹಾರ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮನೆಯ ಹೊರಭಾಗದ ಉದ್ಯಾನದಲ್ಲಿ ಕೆಲವೇ ಮೀಟರ್ ದೂರದಲ್ಲಿ ಏನೋ ಬಿದ್ದ ಶಬ್ಧ ನೆರೆಮನೆಯವರಿಗೆ ಕೇಳಿಸಿತ್ತು. ಮನೆಯ ಕಿಟಕಿಯಿಂದ ನೋಡಿದಾಗ ಯಾರೋ ಮಲಗಿದ್ದಂತೆ ಕಾಣಿಸಿತ್ತು. ಆತನ ಉಡುಪು ನೀಟಾಗಿತ್ತು. ಹತ್ತಿರ ಹೋಗಿ ನೋಡಿದಾಗಲೇ ಉದ್ಯಾನದ ಗೋಡೆಗೆ ರಕ್ತ ಹರಡಿರುವುದು ಕಂಡಿತು. ಆತನ ತಲೆ ಬಿದ್ದಿದ್ದ ರೀತಿ ಭಯಾನಕವಾಗಿತ್ತು. ಕೂಡಲೇ ಮನೆಯ ಮಾಲೀಕರಿಗೆ ಮಾಹಿತಿ ನೀಡಿದ್ದಾಗಿ ಅವರು ತಿಳಿಸಿದ್ದಾರೆ.
ವಿಮಾನದ ಅಡಿ ಭಾಗದಲ್ಲಿರುವ ಕ್ಯಾರಿಯೇಜ್‌ನಲ್ಲಿ ಅಡಗಿಕುಳಿತು ಪ್ರಯಾಣಿಸುವ ಘಟನೆಗಳು ಅನೇಕ ಬಾರಿ ನಡೆದಿವೆ. ವಿಮಾನವು ಇನ್ನೇನು ಇಳಿಯಲು ರನ್ ವೇ ಸಮೀಪಿಸುತ್ತಿದೆ ಎನ್ನುವ ಸಂದರ್ಭದಲ್ಲಿ ಅವರು ಕೆಳಕ್ಕೆ ಜಿಗಿಯುತ್ತಾರೆ. ಅಧಿಕಾರಿಗಳ ಕೈಗೆ ಸಿಗದೆ ಕಳ್ಳಮಾರ್ಗದಿಂದ ವಲಸೆ ಹೋಗುವ ಈ ರೀತಿಯ ಚಟುವಟಿಕೆಗಳು ಇಂದಿಗೂ ನಡೆಯುತ್ತಿವೆ.
2015ರ ಜೂನ್‌ನಲ್ಲಿ ಇದೇ ರೀತಿ ಮನೆಯೊಂದರ ಮಹಡಿ ಮೇಲೆ ದೇಹವೊಂದು ಪತ್ತೆಯಾಗಿತ್ತು. ದಕ್ಷಿಣ ಆಫ್ರಿಕಾದ ಜೊಹಾನ್ಸ್‌ಬರ್ಗ್‌ನಿಂದ ಬಂದ ಬ್ರಿಟಿಷ್ ಏರ್‌ವೇಸ್‌ನಿಂದ ಇಬ್ಬರು ಜಿಗಿದಿದ್ದರು. ಅವರಲ್ಲಿ ಒಬ್ಬ ಚಿಂತಾಜನಕ ಸ್ಥಿತಿಯಲ್ಲಿ ಪತ್ತೆಯಾಗಿದ್ದ. 2012ರ ಆಗಸ್ಟ್‌ನಲ್ಲಿ ಕೇಪ್‌ಟೌನ್‌ನಿಂದ ಹೀಥ್ರೂಗೆ ಬಂದಿದ್ದ ವಿಮಾನದ ಅಂಡರ್ ಕ್ಯಾರಿಯೇಜ್‌ನಲ್ಲಿ ವ್ಯಕ್ತಿಯ ದೇಹ ಪತ್ತೆಯಾಗಿತ್ತು.












Click it and Unblock the Notifications