Krishnaraja Elections: ಅಘೋಷಿತ ಬ್ರಾಹ್ಮಣರ ಕ್ಷೇತ್ರದಲ್ಲಿ ಎಸ್.ಎ.ರಾಮದಾಸ್ ಅಜೇಯ?
ಸಾಂಸ್ಕೃತಿಕ ನಗರಿ ಮೈಸೂರಿನ ದಕ್ಷಿಣ ಭಾಗದ ಪ್ರದೇಶಗಳನ್ನು ಒಳಗೊಂಡಿರುವ ಕೃಷ್ಣರಾಜ ವಿಧಾನಸಭಾ ಕ್ಷೇತ್ರ ಹಲವು ರಾಜಕೀಯ ಏರಿಳಿತಗಳಿಗೆ ಸಾಕ್ಷಿಯಾಗುತ್ತಾ ಬಂದಿದೆ.1967ರಲ್ಲಿ ಮೈಸೂರು ನಗರ ಕ್ಷೇತ್ರದಿಂದ ಪ್ರತ್ಯೇಕವಾಗಿ ಕೃಷ್ಣರಾಜ ಕ್ಷೇತ್ರ ಉದಯವಾಯಿತು. ಅಂದಿನಿಂದ ಈ ಕ್ಷೇತ್ರದಲ್ಲಿ ಒಟ್ಟು ನಾಲ್ಕು ಬಾರಿ ಬಿಜೆಪಿ ಅಭ್ಯರ್ಥಿ, 3 ಬಾರಿ ಜನತಾ ಪರಿವಾರದ ಅಭ್ಯರ್ಥಿ ಹಾಗೂ 3 ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಕೃಷ್ಣರಾಜ ಕ್ಷೇತ್ರ ಹೊಸ ಕ್ಷೇತ್ರವಾಗಿ ರಚನೆಯಾದ ನಂತರ 1967ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಸ್.ಚನ್ನಯ್ಯ ಶಾಸಕರಾಗಿ ಆಯ್ಕೆಯಾದರು. ನಂತರ 1974ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಕೆ.ವೆಂಕಟಲಿಂಗಯ್ಯ ಜಯಗಳಿಸಿದ್ದರು.

ಪ್ರತಿ ಚುನಾವಣೆಯಲ್ಲೂ ಹಳೇ ಮೈಸೂರು ಭಾಗದಲ್ಲಿ ಪ್ರಾಬಲ್ಯ ಸಾಧಿಸಲು ಲೆಕ್ಕಾಚಾರ ಹಾಕುವ ರಾಜಕೀಯ ಪಕ್ಷಗಳಿಗೆ ಕೃಷ್ಣರಾಜ ಕ್ಷೇತ್ರ ಪ್ರಮುಖವಾದದ್ದು. ಹಾಲಿ ಈ ಕ್ಷೇತ್ರವನ್ನು ಎಸ್.ಎ.ರಾಮದಾಸ್ ಪ್ರತಿನಿಧಿಸುತ್ತಿದ್ದಾರೆ. ಮೈಸೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಒಂದು ವೈಶಿಷ್ಠ್ಯತೆ ಏನೆಂದರೆ, ಇಲ್ಲಿ ಚುನಾವಣೆಗೆ ನಿಂತಿದ್ದ ಘಟಾನುಘಟಿ ನಾಯಕರೇ ಠೇವಣಿ ಕಳೆದುಕೊಂಡಿದ್ದಾರೆ.
ಶಾಸಕರಾಗಿದ್ದ ಎಚ್.ಗಂಗಾಧರನ್, ಕೆ.ಎನ್.ಸೋಮಸುಂದರಂ, ಮಾಜಿ ಸಚಿವ ಎಸ್.ರಮೇಶ್, ಬಿಜೆಪಿ ಅಭ್ಯರ್ಥಿಯಾಗಿದ್ದ ನಿವೃತ್ತ ಪೊಲೀಸ್ ಅಧಿಕಾರಿ ವೀರಭದ್ರಯ್ಯ, ಜೆಡಿಎಸ್ ಅಭ್ಯರ್ಥಿ ಶಿವಬಸಪ್ಪ ಸೇರಿದಂತೆ ಹಲವು ಘಟಾನುಘಟಿ ನಾಯಕರು ಈ ಕ್ಷೇತ್ರದಿಂದ ಸ್ಪರ್ಧಿಸಿ ಠೇವಣಿ ಕಳೆದುಕೊಂಡಿರುವುದು ವಿಶೇಷ.
ಇದೇ ಕಾರಣಕ್ಕೆ ಪ್ರತಿಬಾರಿ ಚುನಾವಣೆಯಲ್ಲಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಯಾರಿಗೆ ಎಂದು ಭವಿಷ್ಯ ನುಡಿಯುವುದು ತುಸು ಕಷ್ಟ ಎನ್ನಬಹುದು. ಕೃಷ್ಣರಾಜ ಕ್ಷೇತ್ರ ಉದಯವಾದ ನಂತರ ಈವರೆಗೂ ಎಸ್.ಎ.ರಾಮದಾಸ್ ಒಬ್ಬರೇ 4 ಬಾರಿ ಶಾಸಕರಾಗಿ ಇಲ್ಲಿಂದ ಆಯ್ಕೆಯಾಗಿದ್ದಾರೆ. ಅಲ್ಲದೇ ಕ್ಷೇತ್ರದ ಶಾಸಕರಾಗಿ ಮೊದಲ ಬಾರಿಗೆ ಸಚಿವರು ಕೂಡ ಆಗಿದ್ದರು ಎಸ್.ಎ.ರಾಮದಾಸ್.

ಈ ಬಾರಿ ಕೂಡ ಗೆಲುವಿನ ಉತ್ಸಾಹದಲ್ಲಿ ಬಿಜೆಪಿ
1994 ಹಾಗೂ 1999ರಲ್ಲಿ ಸತತ 2 ಬಾರಿ ಎಸ್.ಎ.ರಾಮದಾಸ್ ಅವರು ಈ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇದಾದ ಬಳಿಕ 2004ರಲ್ಲಿ ಸೋಲು ಕಂಡರೂ 2008ರಲ್ಲಿ ಮತ್ತೆ ಶಾಸಕರಾಗಿ ಆಯ್ಕೆಯಾಗಿದ್ದರು. ನಂತರ 2013ರಲ್ಲೂ ಸೋಲುಕಂಡು 2018ರಲ್ಲಿ 4ನೇ ಬಾರಿಗೆ ಎಸ್.ಎ.ರಾಮದಾಸ್ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಹಾಗೇ ಈ ಬಾರಿ ಕೂಡ ಗೆಲುವಿನ ಉತ್ಸಾಹದಲ್ಲಿದ್ದಾರೆ.
ಕೃಷ್ಣರಾಜ ಕ್ಷೇತ್ರ
ಕೃಷ್ಣರಾಜ ಕ್ಷೇತ್ರದಿಂದ ಎಸ್.ಎ.ರಾಮದಾಸ್ 4 ಬಾರಿ ಶಾಸಕರಾಗಿ ಆಯ್ಕೆಯಾಗಿರುವುದನ್ನು ಬಿಟ್ಟರೆ ಎಚ್.ಗಂಗಾಧರನ್ ಮತ್ತು ಎಂ.ಕೆ.ಸೋಮಶೇಖರ್ ತಲಾ 2 ಬಾರಿ ಗೆಲುವು ಕಂಡಿದ್ದಾರೆ. ಇನ್ನು ಡಿ.ಸೂರ್ಯನಾರಾಯಣ, ವೇದಾಂತ ಹೆಮ್ಮಿಗೆ, ಕೆ.ಎನ್.ಸೋಮಸುಂದರಂ ತಲಾ ಒಂದು ಬಾರಿ ಗೆಲುವು ಕಂಡಿದ್ದಾರೆ. 1967ರಲ್ಲಿ ಎಸ್.ಚನ್ನಯ್ಯ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದರು.
ಜನತಾಪಕ್ಷದಿಂದ ಶಾಸಕರಾಗಿ ಆಯ್ಕೆ
ನಂತರ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಡಿ.ಸೂರ್ಯನಾರಾಯಣ 1972ರಲ್ಲಿ ಗೆಲುವು ಕಂಡರು. 1978ರಲ್ಲಿ ಜನತಾಪಕ್ಷದ ಅಭ್ಯರ್ಥಿಯಾಗಿ ಎಚ್.ಗಂಗಾಧರನ್ ಶಾಸಕರಾಗಿ ಆಯ್ಕೆಯಾದರು. ನಂತರ 1983ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ ಎಚ್.ಗಂಗಾಧರನ್ 2ನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು. 1985ರಲ್ಲಿ ವೇದಾಂತ ಹೆಮ್ಮಿಗೆ ಜನತಾಪಕ್ಷದಿಂದ ಶಾಸಕರಾಗಿ ಆಯ್ಕೆಯಾದರು.
ರಾಮದಾಸ್ ಬಿಜೆಪಿಯಿಂದ ಸ್ಪರ್ಧಿಸಿ 4ನೇ ಬಾರಿಗೆ ಶಾಸಕರಾಗಿ ಆಯ್ಕೆ
1989ರಲ್ಲಿ ಕಾಂಗ್ರೆಸ್ ನಿಂದ ಸೋಮಸುಂದರಂ ಗೆದ್ದರು. ಇನ್ನು 1994 ಹಾಗೂ 1999ರಲ್ಲಿ ಸತತ 2 ಬಾರಿ ಎಸ್.ಎ.ರಾಮದಾಸ್ ಕೃಷ್ಣರಾಜ ಕ್ಷೇತ್ರದಲ್ಲಿ ಕಮಲ ಅರಳಿಸಿದ್ದರು. 2004ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಎಂ.ಕೆ.ಸೋಮಶೇಖರ್ ಗೆಲುವು ಕಂಡರೆ, ಮತ್ತೆ 2008ರಲ್ಲಿ ಎಸ್.ಎ.ರಾಮದಾಸ್ ಜಯಗಳಿಸಿದ್ದರು. ನಂತರ 2013ರಲ್ಲಿ ಎಂ.ಕೆ.ಸೋಮಶೇಖರ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ 2ನೇ ಬಾರಿಗೆ ಶಾಸಕರಾದರು. 2018ರಲ್ಲಿ ಎಸ್.ಎ.ರಾಮದಾಸ್ ಬಿಜೆಪಿಯಿಂದ ಸ್ಪರ್ಧಿಸಿ 4ನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು.
ಅಘೋಷಿತ ಬ್ರಾಹ್ಮಣರ ಕ್ಷೇತ್ರ - ಕೃಷ್ಣರಾಜ
ಕೃಷ್ಣರಾಜ ಕ್ಷೇತ್ರದಿಂದ ಬಿಜೆಪಿಯಿಂದ ಎಸ್.ಎ.ರಾಮದಾಸ್ ಮತ್ತೆ ಸ್ಪರ್ಧಿಸುವ ಸಾಧ್ಯತೆಯಿದೆ. ಜೆಡಿಎಸ್ ತನ್ನ ಅಭ್ಯರ್ಥಿಯನ್ನಾಗಿ ಮಲ್ಲೇಶ್ ಎಂದು ಘೋಷಿಸಿಯಾಗಿದೆ. ಕಾಂಗ್ರೆಸ್ ಇನ್ನೂ ತನ್ನ ಅಭ್ಯರ್ಥಿಯನ್ನಾಗಿ ಅಧಿಕೃತವಾಗಿ ಘೋಷಿಸಿಲ್ಲ. ಅಘೋಷಿತ ಬ್ರಾಹ್ಮಣರ ಕ್ಷೇತ್ರ ಎಂದೇ ಕರೆಯಲ್ಪಡುವ ಇಲ್ಲಿ, ಹಾಲೀ ಶಾಸಕರ ವಿರುದ್ದ ಆ ಸಮುದಾಯದವರು ಬೇಸರ ವ್ಯಕ್ತಪಡಿಸಿ ಯಡಿಯೂರಪ್ಪನವರಿಗೆ ದೂರನ್ನೂ ಸಲ್ಲಿಸಿದ್ದರು. ಚುನಾವಣೆಗೆ ಈ ಅಂಶ ನಿರ್ಣಾಯಕವಾಗುವ ಸಾಧ್ಯತೆಯಿಲ್ಲದಿಲ್ಲ.












Click it and Unblock the Notifications