ತುಂಗಭದ್ರಾ ಡ್ಯಾಂನಿಂದ ನೀರು ಬಿಡುಗಡೆ; ಪರಿಷ್ಕೃತ ವೇಳಾಪಟ್ಟಿ
ಕೊಪ್ಪಳ, ಫೆಬ್ರವರಿ 08: ಕರ್ನಾಟಕದಲ್ಲಿ ಬರ ಪರಿಸ್ಥಿತಿ ಉಂಟಾಗಿದೆ. ತುಂಗಭದ್ರಾ ಡ್ಯಾಂನಿಂದ ವಿಜಯನಗರ ಕಾಲುವೆಗಳಿಗೆ ಬೆಳೆದು ನಿಂತ ಬೆಳೆಗಳನ್ನು ಸಂರಕ್ಷಿಸಲು ಹಾಗೂ ಕುಡಿಯುವ ನೀರಿಗಾಗಿ ಜಲಾಶಯದಲ್ಲಿ ಲಭ್ಯವಾಗಬಹುದಾದ ನೀರಿನ ಪ್ರಮಾಣಕ್ಕೆ ಅನುಗುಣವಾಗಿ ಕಾಲುವೆಗಳಿಗೆ ನೀರು ಹರಿಸಲು ತೀರ್ಮಾನಿಸಲಾಗಿತ್ತು.
ಈ ಕುರಿತು ನೀರಾವರಿ ಸಲಹಾ ಸಮಿತಿ ಅಧ್ಯಕ್ಷರು ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಜನವರಿ 19ರಂದು ಸಭೆ ನಡೆಸಿದ್ದರು.

2023-24ನೇ ಸಾಲಿನ 120ನೇ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಧರಿಸಿದಂತೆ ತುಂಗಭದ್ರಾ ಯೋಜನೆಯ ವಿಜಯನಗರ ಕಾಲುವೆಗಳಿಗೆ ಬೆಳೆದು ನಿಂತ ಬೆಳೆಗಳನ್ನು ಸಂರಕ್ಷಿಸಲು ಹಾಗೂ ಕುಡಿಯುವ ನೀರಿಗಾಗಿ ಜಲಾಶಯದಲ್ಲಿ ಲಭ್ಯವಾಗಬಹುದಾದ ನೀರಿನ ಪ್ರಮಾಣಕ್ಕೆ ಅನುಗುಣವಾಗಿ ಕಾಲುವೆಗಳಿಗೆ ನೀರು ಹರಿಸಲು ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.
ವೇಳಾಪಟ್ಟಿ; ಸಭೆಯ ತೀರ್ಮಾನದಂತೆ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಎಡದಂಡೆ ವಿಜಯನಗರ ಕಾಲುವೆಗೆ ಕುಡಿಯುವ ಸಲುವಾಗಿ ಕಾಯ್ದಿರಿಸಲಾದ 0.500 ಟಿಎಂಸಿ ಪೈಕಿ 0.300 ನೀರನ್ನು ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಜನವರಿ 22ರಿಂದ ಏಪ್ರಿಲ್ 30ರವರೆಗೆ 50 ಕ್ಯೂಸೆಕ್ಸ್ ಆನ್/ ಆಫ್‌ನಂತೆ (ಕುಡಿಯುವ ನೀರು ಒಳಗೊಂಡು) ಉಳಿದಂತೆ ರಾಯಚೂರು ಜಿಲ್ಲೆಗೆ ಹಂಚಿಕೆಯಾದ 1.200 ಟಿಎಂಸಿ ನೀರನ್ನು ಫೆಬ್ರವರಿ 15 ರಿಂದ 25 ರವರೆಗೆ 0.600 ಟಿಎಂಸಿ ಮತ್ತು ಏಪ್ರಿಲ್ 10 ರಿಂದ 20 ರವರೆಗೆ 700 ಕ್ಯುಸೆಕ್‌ನಂತೆ 0.600 ಟಿಎಂಸಿ ನೀರನ್ನು ಕುಡಿಯುವ ಸಲುವಾಗಿ ಕಾಲುವೆಗೆ ನೀರು ಹರಿಸಲಾಗುತ್ತದೆ.
ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಗೆ. ಜನವರಿ 21 ರಿಂದ 31 ರವರೆಗೆ 100 ಕ್ಯೂಸೆಕ್‌ನಂತೆ ಮತ್ತು ಫೆಬ್ರವರಿ 2024 ಮತ್ತು ಮಾರ್ಚ್ 2024 ತಿಂಗಳಲ್ಲಿ 10 ದಿನಗಳಿಗೊಮ್ಮೆ 100 ಕ್ಯುಸೆಕ್‌ನಂತೆ ಕುಡಿಯುವ ನೀರಿನ ಸಲುವಾಗಿ ಬಳ್ಳಾರಿ ನಗರ ಹಾಗೂ ಜಿಲ್ಲೆಯ ಇತರೆ ಕುಡಿಯುವ ನೀರಿನ ಯೋಜನೆಗೆ ಹಾಗೂ ಕೆರೆ ಕಟ್ಟೆಗಳನ್ನು ತುಂಬಿಸಲು ನೀರು ಹರಿಸಲಾಗುತ್ತದೆ.
ರಾಯ ಬಸವಣ್ಣ ಕಾಲುವೆಗೆ ವಿಜಯನಗರ ಜಿಲ್ಲೆಗೆ ಹಂಚಿಕೆಯಾದ 0.500 ಟಿಎಂಸಿ ನೀರಿನಲ್ಲಿ ಜನವರಿ 21 ರಿಂದ ಮೇ. 30 ರವರೆಗೆ 100 ಕ್ಯುಸೆಕ್‌ನಂತೆ ಆನ್/ ಆಫ್‌ನಂತೆ ಕುಡಿಯುವ ನೀರು ಒಳಗೊಂಡು ಕಾಲುವೆಗೆ ನೀರು ಹರಿಸಲಾಗುವುದು.
ತುಂಗಭದ್ರಾ ಜಲಾಶಯದಲ್ಲಿ ಲಭ್ಯವಿರುವ ನೀರನ್ನು ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸಲು ಅನುವಾಗುವಂತೆ ತುಂಗಭದ್ರಾ ಯೋಜನೆಯ ವಿಜಯನಗರ ಕಾಲುವೆಗೆ ನೀರು ಹರಿಸಲಾಗುತ್ತಿದ್ದು, ಪ್ರಸಕ್ತ ವರ್ಷ ಜಲಾಶಯದಲ್ಲಿ ನೀರಿನ ಸಂಗ್ರಹಣೆ ಸಾಮರ್ಥ್ಯ ಕಡಿಮೆ ಇರುವುದರಿಂದ ರೈತ ಬಾಂಧವರು ನಿಗದಿತ ಅಚ್ಚುಕಟ್ಟು ಪ್ರದೇಶದಲ್ಲಿ ನಿಗದಿತ ಬೆಳೆಗಳನ್ನು ಮಾತ್ರ ಬೆಳೆಯಬೇಕು ಎಂದು ಮನವಿ ಮಾಡಲಾಗಿದೆ.
ಅಲ್ಲದೇ ಕಾಲುವೆಗಳಿಂದ ಅನಧಿಕೃತ ನೀರು ಬಳಸುವುದನ್ನು ಮತ್ತು ಎತ್ತಿಕೊಳ್ಳುವುದನ್ನು ನಿಷೇಧಿಸಲಾಗಿದೆ. ಆದ್ದರಿಂದ ರೈತ ಬಾಂಧವರು ಸಮರ್ಪಕ ನೀರು ನಿರ್ವಹಣೆಗೆ ಇಲಾಖೆಯೊಡನೆ ಸಹಕರಿಸಬೇಕು.
ನೀರಿನ ಅಭಾವ ಉಂಟಾಗಿ ಬೆಳೆ ನಷ್ಟವಾದಲ್ಲಿ ಇಲಾಖೆಯು ಯಾವುದೇ ಆರ್ಥಿಕ ನಷ್ಟಕ್ಕೆ ಜವಾಬ್ದಾರರಾಗಿರುವುದಿಲ್ಲ ಎಂದು ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ನೀರಾವರಿ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಮುನಿರಾಬಾದ್ ಕನೀನಿನಿ ತುಂಗಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರ ಎಲ್. ಬಸವರಾಜ್ ತಿಳಿಸಿದ್ದಾರೆ.
ಬರ ಪರಿಸ್ಥಿತಿ ಕಾರಣ ರೈತರಿಗೆ ಸಹ ನಷ್ಟವಾಗಿದೆ. ತುಂಗಭದ್ರಾ ಕಾಲುವೆಯ ಕೆಳಭಾಗದ ಪ್ರದೇಶದಲ್ಲಿನ ಹತ್ತಿ, ಮೆಣಸಿನಕಾಯಿ, ಜೋಳ ಬೆಳೆಗಳಿಗೆ ಸಮಪರ್ಕವಾಗಿ ನೀರು ಸಿಗಲಿಲ್ಲ. ಬಳ್ಳಾರಿಯಲ್ಲಿಯೂ ಮೆನಸಿನಕಾಯಿ ಬೆಳೆ ಸಂಪೂರ್ಣ ನಾಶವಾಗಿತ್ತು.
ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಜುಲೈ ತಿಂಗಳಿನಲ್ಲಿ ಮಳೆ ಹೆಚ್ಚು ಬಿದ್ದು ನೀರು ನಿಂತು ಮೊದಲನೇ ಬೆಳೆ ಹಾನಿಯಾಗಿದೆ. ಎರಡನೇ ಬೆಳೆಗೆ ಅನುಕೂಲವಾಗಲು ಮಾರ್ಚ್, ಏಪ್ರಿಲ್ ತನಕ ನೀರು ಕೊಡಬೇಕು ಎಂದು ರೈತರು ಮನವಿ ಮಾಡಿದ್ದರು.












Click it and Unblock the Notifications