ಸಿಎಂ ಬಿಎಸ್ವೈಗೆ ಸರಿಯಾಗಿ ಉಗಿದಿದ್ದೇನೆ: ಪ್ರಸನ್ನಾನಂದ ಸ್ವಾಮೀಜಿ
ಕೊಪ್ಪಳ, ಡಿ 18: ತಮ್ಮತಮ್ಮ ಸಮುದಾಯದ ಮುಖಂಡರಿಗೆ, ಸರಕಾರದಲ್ಲಿ ಆಯಕಟ್ಟಿನ ಸ್ಥಾನ ಸಿಗಬೇಕು ಎನ್ನುವ ಪೀಠಾಧಿಪತಿಗಳ ಒತ್ತಡ/ಒತ್ತಾಯ ಮುಂದುವರಿಯುತ್ತಲೇ ಇದೆ. ಈ ಪಟ್ಟಿಗೆ, ಇನ್ನೊಂದು ಸೇರ್ಪಡೆಯಾಗಿದೆ.
ಇನ್ನೊಂದು ಉಪಮುಖ್ಯಮಂತ್ರಿ ಹುದ್ದೆಯನ್ನು ಸೃಷ್ಟಿಸಬೇಕೇ ಅಥವಾ ಇರುವುದನ್ನೇ ಹಿಂದಕ್ಕೆ ಪಡೆಯಬೇಕೇ ಎನ್ನುವ ಗೊಂದಲವಿರುವ ಈ ಹೊತ್ತಿನಲ್ಲಿ ಶ್ರೀಪ್ರಸನ್ನಾನಂದ ಸ್ವಾಮೀಜಿ ಹೇಳಿಕೆಯೊಂದನ್ನು ನೀಡಿದ್ದಾರೆ.
"ಅಧಿಕಾರಕ್ಕೆ ಬರುವ ಮುನ್ನ, ವಾಲ್ಮೀಕಿ ಸಮುದಾಯಕ್ಕೆ ಸಂಪುಟದಲ್ಲಿ ಪ್ರಾತಿನಿಧ್ಯತೆ ನೀಡುತ್ತೇವೆ ಎಂದು ಬಿಜೆಪಿ ಮುಖಂಡರು ಹೇಳಿದ್ದರು. ನಮ್ಮ ಸಮುದಾಯವನ್ನು ಬಿಜೆಪಿ ವೋಟ್ ಬ್ಯಾಂಕ್ ಮಾಡಿಕೊಂಡಿದೆ" ಎಂದು ಶ್ರೀಗಳು ಬೇಸರ ವ್ಯಕ್ತಪಡಿಸಿದ್ದಾರೆ.

"ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ನಂತರ, ನಮ್ಮ ಸಮುದಾಯದ ನಾಯಕರಿಗೆ ಡಿಸಿಎಂ ಸ್ಥಾನವನ್ನು ಕೊಡಲಿಲ್ಲ. ಈ ವಿಚಾರದಲ್ಲಿ ಮುಖ್ಯಮಂತ್ರಿಗಳಿಗೆ ಸರಿಯಾಗಿ ಉಗಿದಿದ್ದೇನೆ" ಎಂದು ಪ್ರಸನ್ನಾನಂದ ಸ್ವಾಮೀಜಿಗಳು ಹೇಳಿದ್ದಾರೆ.
"ಮುಖ್ಯಮಂತ್ರಿಗಳು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನವರು ಯಾರೇ ಆಗಿರಲಿ. ಯಾರದ್ದೇ ಸರಕಾರವಿರಲಿ. ಅದನ್ನು ಕಟ್ಟಿಕೊಂಡು ನಮಗೇನೂ ಆಗಬೇಕಿಲ್ಲ. ನಮ್ಮ ಸಮುದಾಯಕ್ಕೆ ನ್ಯಾಯ ಸಿಕ್ಕಿದರೆ ಸಾಕು" ಎಂದು ಶ್ರೀಗಳು ಹೇಳಿದ್ದಾರೆ.
"ಶ್ರೀರಾಮುಲು ಆಗಲಿ ರಮೇಶ್ ಜಾರಕಿಹೊಳಿಯಾಗಲಿ, ಇಬ್ಬರೂ ನನಗೆ ಎರಡು ಕಣ್ಣು ಇದ್ದಂತೆ. ಯಾರಿಗೆ, ಡಿಸಿಎಂ ಸ್ಥಾನ ಕೊಟ್ಟರು, ನಮಗೆ ಸಂತೋಷ" ಎಂದು ಶ್ರೀಗಳು ಹೇಳಿದರು.












Click it and Unblock the Notifications