ಲೋಕಸಭೆ ಚುನಾವಣೆ; ಕೊಪ್ಪಳದ ಒಟ್ಟು ಮತದಾರರು ಎಷ್ಟು?
ಕೊಪ್ಪಳ, ಜನವರಿ 24: ಕೇಂದ್ರ ಚುನಾವಣಾ ಆಯೋಗದ ಸೂಚನೆಯಂತೆ ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಕೊಪ್ಪಳ ಜಿಲ್ಲೆಯ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ನಡೆಸಲಾಗಿದೆ. ಅಂತಿಮ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಸದ್ಯದ ಮಾಹಿತಿಯಂತೆ ಒಟ್ಟು 28,272 ಯುವ ಮತದಾರರಿದ್ದಾರೆ.
ಮತದಾರರ ಪಟ್ಟಿಯನ್ನು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿ ನಲಿನ್ ಅತುಲ್ ಬಿಡುಗಡೆ ಮಾಡಿದರು. ಬಳಿಕ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆಯನ್ನು ಸಹ ನಡೆಸಿದರು. ಚುನಾವಣಾ ಆಯೋಗದ ವೇಳಾಪಟ್ಟಿಯನ್ವಯ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಯನ್ನು ದಿನಾಂಕ 01/01/2024ರ ಆಧಾರದ ಮೇಲೆ ತಯಾರಿಸಲಾಗಿದೆ.

ಕೊಪ್ಪಳ ಜಿಲ್ಲೆಯಲ್ಲಿ ಕುಷ್ಟಗಿ, ಕನಕಗಿರಿ, ಗಂಗಾವತಿ, ಯಲಬುರ್ಗಾ ಮತ್ತು ಕೊಪ್ಪಳ ವಿಧಾನಸಭಾ ಕ್ಷೇತ್ರಗಳಿವೆ. ಅಂತಿಮ ಮತದಾರರ ಪಟ್ಟಿಗಳನ್ನು ಸಾರ್ವಜನಿಕರ ಮಾಹಿತಿಗಾಗಿ ಎಲ್ಲಾ ಮತಗಟ್ಟೆಗಳಲ್ಲಿ, ತಹಶೀಲ್ದಾರ್ ಕಛೇರಿಗಳಲ್ಲಿ, ಮತದಾರರ ನೋಂದಣಾಧಿಕಾರಿಗಳ ಕಛೇರಿಯಲ್ಲಿ ಮತ್ತು ಜಿಲ್ಲಾಧಿಕಾರಿ ಕಛೇರಿಯಲ್ಲಿ ಪ್ರಕಟಿಸಲಾಗಿದೆ.
ಜನರು ಮತದಾರರ ಪಟ್ಟಿಗಳನ್ನು ಪರಿಶೀಲಿಸಿಕೊಳ್ಳಲು, ಅಂತಿಮ ಮತದಾರರ ಪಟ್ಟಿಯಲ್ಲಿ ಯಾವುದೇ ಮತದಾರರ ಹೆಸರು ಬಿಟ್ಟು ಹೋಗಿದ್ದಲ್ಲಿ ನಮೂನೆ-6ರಲ್ಲಿ ಮತ್ತು ಯಾವುದೇ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಬೇಕಿದ್ದಲ್ಲಿ ನಮೂನೆ-7ರಲ್ಲಿ, ಯಾವುದೇ ತಿದ್ದುಪಡಿ ಅಥವಾ ಸ್ಥಳಾಂತರ ಅವಶ್ಯಕತೆಯಿದ್ದಲ್ಲಿ ನಮೂನೆ-8ರಲ್ಲಿ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬಹುದು.
ಭಾರತ ಚುನಾವಣಾ ಆಯೋಗದ ಅಪ್ಲಿಕೇಶನ್ ವೋಟರ್ ಹೆಲ್ಪ್‌ಲೈನ್ ಆ್ಯಪ್ ಅಥವಾ ವೆಬ್ ಪೋರ್ಟಲ್ https://voters.eci.gov.in/ ಮೂಲಕವೂ ಆನ್‌ಲೈನ್ ಅರ್ಜಿಗಳನ್ನು ಸಲ್ಲಿಸಬಹುದಾಗಿದ್ದು, ಈ ಬಗ್ಗೆ ಜನರಿಗೆ ಎಲ್ಲಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮಾಹಿತಿ ನೀಡಬೇಕು ಎಂದು ಮನವಿ ಮಾಡಲಾಗಿದೆ.
ಮತದಾರರ ವಿವರ: ಕೊಪ್ಪಳ ಜಿಲ್ಲೆಯ ಅಂತಿಮ ಮತದಾರರ ಪಟ್ಟಿಯಲ್ಲಿರುವ ಮತದಾರರ ವಿವರ ಹೀಗಿದೆ. ಕುಷ್ಟಗಿ ವಿಧಾನಸಭಾ ಕ್ಷೇತ್ರದ 267 ಮತಗಟ್ಟೆಗಳ ಪೈಕಿ 1,20,521 ಪುರುಷರು, 1,19,503 ಮಹಿಳೆಯರು, 10 ಇತರೆ ಸೇರಿ ಒಟ್ಟು 2,40,034 ಮತದಾರರು ಮತ್ತು 206 ಸೇವಾ ಮತದಾರರಿದ್ದಾರೆ.
ಕನಕಗಿರಿ ವಿಧಾನಸಭಾ ಕ್ಷೇತ್ರದ 266 ಮತಗಟ್ಟೆಗಳ ಪೈಕಿ 1,12,023 ಪುರುಷರು, 1,15,780 ಮಹಿಳೆಯರು, 11 ಇತರೆ ಸೇರಿ ಒಟ್ಟು 2,27,814 ಮತದಾರರು ಮತ್ತು 26 ಸೇವಾ ಮತದಾರರಿದ್ದಾರೆ.
ಗಂಗಾವತಿ ವಿಧಾನಸಭಾ ಕ್ಷೇತ್ರದ 235 ಮತಗಟ್ಟೆಗಳ ಪೈಕಿ 1,01,732 ಪುರುಷರು, 1,04,618 ಮಹಿಳೆಯರು, 15 ಇತರೆ ಸೇರಿ ಒಟ್ಟು 2,06,365 ಮತದಾರರು ಮತ್ತು 34 ಸೇವಾ ಮತದಾರರಿದ್ದಾರೆ.
ಯಲಬುರ್ಗಾ ವಿಧಾನಸಭಾ ಕ್ಷೇತ್ರದ 256 ಮತಗಟ್ಟೆಗಳ ಪೈಕಿ 1,13,815 ಪುರುಷರು, 1,14,063 ಮಹಿಳೆಯರು, 5 ಇತರೆ ಸೇರಿ ಒಟ್ಟು 2,27,883 ಮತದಾರರು ಮತ್ತು 171 ಸೇವಾ ಮತದಾರರಿದ್ದಾರೆ.
ಕೊಪ್ಪಳ ವಿಧಾನಸಭಾ ಕ್ಷೇತ್ರದ 290 ಮತಗಟ್ಟೆಗಳ ಪೈಕಿ 1,28,854 ಪುರುಷರು, 1,31,967 ಮಹಿಳೆಯರು, 15 ಇತರೆ ಸೇರಿ ಒಟ್ಟು 2,60,836 ಮತದಾರರು ಮತ್ತು 91 ಸೇವಾ ಮತದಾರರಿದ್ದಾರೆ.
ಐದು ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ಕೊಪ್ಪಳ ಜಿಲ್ಲೆಯ 1314 ಮತಗಟ್ಟೆಗಳ ಪೈಕಿ 5,76,945 ಪುರುಷರು, 5,85,931 ಮಹಿಳೆಯರು, 56 ಇತರೆ ಸೇರಿ ಒಟ್ಟು 11,62,932 ಮತದಾರರು ಮತ್ತು 528 ಸೇವಾ ಮತದಾರರಿದ್ದಾರೆ.
ಯುವ ಮತದಾರರ ವಿವರ; ಮತದಾರರ ಪಟ್ಟಿಯ ಅನ್ವಯ 18 ರಿಂದ 19 ವಯೋಮಾನದ ಮತದಾರರ ವಿವರಗಳು. ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ 3533 ಗಂಡು ಹಾಗೂ 2568 ಹೆಣ್ಣು ಸೇರಿ 6101 ಯುವ ಮತದಾರರಿದ್ದಾರೆ. ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ 2927 ಗಂಡು, 2125 ಹೆಣ್ಣು ಹಾಗೂ ಇತರೆ 2 ಸೇರಿ 5054 ಯುವ ಮತದಾರರು ಇದ್ದಾರೆ.
ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ 2974 ಗಂಡು ಹಾಗೂ 2321 ಹೆಣ್ಣು ಸೇರಿ 5295 ಯುವ ಮತದಾರರು. ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ 3270 ಗಂಡು ಹಾಗೂ 2417 ಹೆಣ್ಣು ಸೇರಿ 5687 ಯುವ ಮತದಾರರು.
ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ 3379 ಗಂಡು, 2755 ಹೆಣ್ಣು ಹಾಗೂ ಇತರೆ 1 ಸೇರಿ 6135 ಯುವ ಮತದಾರರು. ಜಿಲ್ಲೆಯಲ್ಲಿ 16,083 ಗಂಡು, 12,186 ಹೆಣ್ಣು ಹಾಗೂ ಇತರೆ 3 ಸೇರಿ ಒಟ್ಟು 28,272 ಯುವ ಮತದಾರರಿದ್ದಾರೆ.












Click it and Unblock the Notifications