ಕೊಪ್ಪಳ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹನುಮ ಮಾಲಾ ವಿಸರ್ಜನೆ: ಡಿ.5ರಂದು ಅಂಜನಾದ್ರಿಗೆ ಲಕ್ಷಾಂತರ ಭಕ್ತರ ಆಗಮನ ನಿರೀಕ್ಷೆ

By ಕೊಪ್ಪಳ ಪ್ರತಿನಿಧಿ
|
Google Oneindia Kannada News

ಕೊಪ್ಪಳ, ನವೆಂಬರ್ 16 : ರಾಜ್ಯ ಮತ್ತು ರಾಷ್ಟ್ರದ ಗಮನ ಸೆಳೆದಿರುವ ಹನುಮ ಜನ್ಮಭೂಮಿ ಅಂಜನಾದ್ರಿ ಬೆಟ್ಟಕ್ಕೆ ಇದೇ ಡಿಸೆಂಬರ್ 5 ರಂದು ಲಕ್ಷಾಂತರ ಜನ ಹನುಮ ಮಾಲಾಧಾರಿಗಳು ಆಗಮಿಸುವ ಹಿನ್ನೆಲೆ ಕೊಪ್ಪಳ ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಳ್ತಾಯಿದೆ. ಇಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ರಾಮಭಕ್ತ ಹನುಮ ಜನ್ಮಭೂಮಿ ಪ್ರಖ್ಯಾತಿ ಪಡೆದಿರುವ ಅಂಜನಾದ್ರಿ ಬೆಟ್ಟಕ್ಕೆ ಇದೇ ಡಿಸೆಂಬರ್‌ 05 ರಂದು ರಾಜ್ಯದ ನಾನಾ ಭಾಗಗಳಿಂದ ಹನುಮ ಮಾಲಾಧಾರಿಗಳು ಆಗಮಿಸಿ ಹನುಮ ಮಾಲೆಯನ್ನ ವಿಸರ್ಜನೆ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಬುಧವಾರ ಮುಜರಾಯಿ ಇಲಾಖೆಯ ಸಚಿವರಾದ ಶಶಿಕಲಾ ಜೊಲ್ಲೆ ಕೊಪ್ಪಳ ಜಿಲ್ಲಾಡಳಿತದ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾಹಿತಿಯನ್ನ ಪಡೆದುಕೊಂಡರು.

ಕೊಪ್ಪಳ; ಜಲ ಜೀವನ್ ಮಿಷನ್ ಯೋಜನೆಯ ಯಶೋಗಾಥೆಕೊಪ್ಪಳ; ಜಲ ಜೀವನ್ ಮಿಷನ್ ಯೋಜನೆಯ ಯಶೋಗಾಥೆ

ಲಕ್ಷಾಂತರ ಜನ ಹನುಮಭಕ್ತರು ಆಗಮಿಸಿ ಹನುಮ ಮಾಲೆಯನ್ನ ವಿಸರ್ಜನೆ ಮಾಡುತ್ತಾರೆ. ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣಕ್ಕೆ ಹನಮ ಭಕ್ತರ ಸಂಖ್ಯೆ ಕೊಂಚ ಇಳಿಮುಖವಾಗಿತ್ತು. ಆದರೆ ಈ ಬಾರಿ ಸುಮಾರು ಎರಡು ಲಕ್ಷ ಜನ ಹನುಮ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಇದರಿಂದ ಅಂಜನಾದ್ರಿಗೆ ಬರುವ ಭಕ್ತರಿಗೆ ಯಾವುದೆ ತೊಂದರೆಯಾಗದಂತೆ ಎಲ್ಲಾ ವ್ಯವಸ್ಥೆ ಕೈಗೊಳ್ಳಲು, ಹಾಗೂ ಸೂಕ್ತ ಭದ್ರತೆ, ಸಂಚಾರ ವ್ಯವಸ್ಥೆ ಸೇರಿ ಎಲ್ಲಾ ವ್ಯವಸ್ಥೆಗಳನ್ನ ಮಾಡಿಕೊಳ್ಳುವಂತೆ ಸೂಚನೆ ನೀಡಿದರು.

 ಮೂಲಭೂತ ವ್ಯವಸ್ಥೆ ಕಲ್ಪಿಸಲು ಸೂಚನೆ

ಮೂಲಭೂತ ವ್ಯವಸ್ಥೆ ಕಲ್ಪಿಸಲು ಸೂಚನೆ

ಅಂಜನಾದ್ರಿ ಬೆಟ್ಟವು ದೇಶದ ಗಮನ ಸೆಳೆದಿದ್ದು, ನಮ್ಮ ರಾಜ್ಯದ ವಿವಿಧ ಜಿಲ್ಲೆಗಳು ಮಾತ್ರವಲ್ಲದೆ ಬೇರೆ ರಾಜ್ಯಗಳಿಂದಲೂ ಹನುಮಮಾಲಾಧಾರಿಗಳು ಆಗಮಿಸುವ ನಿರೀಕ್ಷೆ ಇದೆ. ವಿವಿಧ ಭಾಗಗಳಿಂದ ಬರುವ ಭಕ್ತಾದಿಗಳಿಗೆ ಸೂಕ್ತ ವಾಸ್ತವ್ಯ, ಊಟ, ಕುಡಿಯುವ ನೀರು ಹಾಗೂ ನದಿ ಪಾತ್ರದಲ್ಲಿ ಸ್ನಾನಘಟ್ಟ, ವಾಹನಗಳ ನಿಲುಗಡೆಗೆ ಇಲಾಖಾವಾರು ಸಮಿತಿ ರಚಿಸಿ ಜವಾಬ್ದಾರಿ ಹಂಚಿಕೆ ಮಾಡಬೇಕು. ಹನುಮಮಾಲಾಧಾರಿಗಳು ಅಥವಾ ಇತರೆ ಭಕ್ತರು, ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ಅಚ್ಚುಕಟ್ಟು ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಬೇಕು. ವ್ಯವಸ್ಥಿತ ನಿರ್ವಹಣೆ ಮೂಲಕ ಮೂರು ದಿನಗಳ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

 ತಾತ್ಕಾಲಿಕ ಕ್ಲಿನಿಕ್, ಆಂಬುಲೆನ್ಸ್ ಸೇವೆ

ತಾತ್ಕಾಲಿಕ ಕ್ಲಿನಿಕ್, ಆಂಬುಲೆನ್ಸ್ ಸೇವೆ

ನದಿ ಪಾತ್ರದ ಸ್ನಾನಘಟ್ಟಗಳಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆ, ಅಂಜನಾದ್ರಿ ಬೆಟ್ಟಕ್ಕೆ ತೆರಳಲು ಸೂಕ್ತ ಸಾರಿಗೆ ವ್ಯವಸ್ಥೆ ಹಾಗೂ ಈ ಬಗ್ಗೆ ಅಗತ್ಯ ಮಾಹಿತಿಯನ್ನು ಸಾರ್ವಜನಿಕರೊಂದಿಗೆ ಹಂಚಿಕೊಳ್ಳಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವುದರಿಂದ ಹೆಚ್ಚಿನ ಭದ್ರತಾ ವ್ಯವಸ್ಥೆಯನ್ನು ಪೊಲೀಸ್ ಇಲಾಖೆಯಿಂದ ಒದಗಿಸಬೇಕು. ಸ್ಥಳದಲ್ಲಿ ಆರೋಗ್ಯ ಇಲಾಖೆಯಿಂದ ತಾತ್ಕಾಲಿಕ ಕ್ಲಿನಿಕ್ ಅನ್ನು ಸ್ಥಾಪಿಸಬೇಕು. ಅಂಬ್ಯುಲೆನ್ಸ್‌ ಸಂಖ್ಯೆಯನ್ನು ಹೆಚ್ಚಿಸಬೇಕು. 3 ದಿನಗಳ ಕಾಲ ಎಲ್ಲ ತಜ್ಞ ವೈದ್ಯರು, ಆರೋಗ್ಯ ಕಾರ್ಯಕರ್ತರು ಲಭ್ಯವಿರುವಂತೆ ಸಿಬ್ಬಂದಿಗೆ ನಿರ್ದೇಶನ ನೀಡಬೇಕು. ಜೆಸ್ಕಾಂ ನಿಂದ ನಿರಂತರ ವಿದ್ಯುತ್ ಸೌಲಭ್ಯ ಒದಗಿಸಬೇಕು ಎಂದು ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

 ಸ್ವಚ್ಛತೆ -ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಿ

ಸ್ವಚ್ಛತೆ -ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಿ

ಗಣಿ ಮತ್ತು ಭೂ ವಿಜ್ಞಾನ ಸಚಿವರಾದ ಹಾಲಪ್ಪ ಬಸಪ್ಪ ಆಚಾರ್ ಮಾತನಾಡಿ, ಡಿಸೆಂಬರ್ 03 ರಿಂದ 05 ರವರೆಗೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಬಂದೋಬಸ್ತ್ ಒದಗಿಸಬೇಕು. ಭಕ್ತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಸ್ಥಳೀಯ ಗ್ರಾಮ ಪಂಚಾಯತಿಯಿಂದ ಮಾತ್ರವಲ್ಲದೆ ಸ್ವಚ್ಛತೆ ಹಾಗೂ ಸೂಕ್ತ ಭದ್ರತೆಗೆ ಸಂಬಂಧಿಸಿದ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ಅಂಜನಾದ್ರಿ ಬೆಟ್ಟಕ್ಕೆ ಆಗಮಿಸುವ ಸಾರ್ವಜನಿಕರಿಗೆ ಸಾರಿಗೆ ಮಾರ್ಗ ಬದಲಾವಣೆ, ಪಾರ್ಕಿಂಗ್ ಬಗ್ಗೆ ಸೂಕ್ತ ಮಾಹಿತಿ ಒದಗಿಸಬೇಕು. ಸಾರಿಗೆ ಮಾರ್ಗದ ಕುರಿತು ಸೂಚನಾ ಫಲಕಗಳನ್ನು ಹೆಚ್ಚು ಅಳವಡಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ನದಿ ಪಾತ್ರದ ಸ್ನಾನಘಟ್ಟದಲ್ಲಿ ಸಾರ್ವಜನಿಕರು ಹೆಚ್ಚಾಗಿ ಬರುವುದರಿಂದ ಎಸ್‌ಡಿಆರ್‌ಎಫ್ ತಂಡವನ್ನು ನಿಯೋಜಿಸಬೇಕು. ಈ ಮೂರು ದಿನಗಳು ಮಾತ್ರವಲ್ಲದೆ ಜಿಲ್ಲೆಯಲ್ಲಿ ಶಾಶ್ವತವಾಗಿ ಎಸ್‌ಡಿಆರ್‌ಎಫ್ ತಂಡ ನಿಯೋಜಿಸಲು ಕ್ರಮ ಕೈಗೊಳ್ಳಿ. ಅಂಜನಾದ್ರಿ ಬೆಟ್ಟ ಪ್ರದೇಶದಲ್ಲಿ ಎಲ್ಲ ಅಗತ್ಯ ಸಿದ್ಧತೆ ಹಾಗೂ ಸಿಬ್ಬಂದಿಯೊಂದಿಗೆ ಅಗ್ನಿಶಾಮಕ ದಳ ನಿರಂತರವಾಗಿ ಕಾರ್ಯನಿರ್ವಹಿಸಬೇಕು ಎಂದು ಸಂಸದರಾದ ಸಂಗಣ್ಣ ಕರಡಿ ಸಲಹೆ ನೀಡಿದರು.

 1.50 ಲಕ್ಷ ಭಕ್ತರ ನಿರೀಕ್ಷೆ

1.50 ಲಕ್ಷ ಭಕ್ತರ ನಿರೀಕ್ಷೆ

ಈ ವರ್ಷ 1.20 ಲಕ್ಷದಿಂದ 1.50 ಲಕ್ಷ ಹನುಮಮಾಲಾಧಾರಿಗಳು ಅಂಜನಾದ್ರಿ ಬೆಟ್ಟಕ್ಕೆ ಆಗಮಿಸುವ ನಿರೀಕ್ಷೆ ಇದೆ. ಈ ಸಂದರ್ಭ ಅಂಜನಾದ್ರಿ ಬೆಟ್ಟ ಪ್ರದೇಶದ ಹತ್ತಿರ ಒಟ್ಟು ಆರು ಕಡೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲು ಯೋಜಿಸಲಾಗಿದೆ. ಪಾರ್ಕಿಂಗ್ ಸ್ಥಳ ಸೇರಿದಂತೆ ಬೆಟ್ಟದಲ್ಲಿ ಸೂಕ್ತ ಊಟ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು. ಅಲ್ಲಲ್ಲಿ ಆರೋಗ್ಯ ಸೇವಾ ಕೌಂಟರ್‌ಗಳನ್ನು ತೆರೆಯಲಾಗುವುದು. ಪಂಚಾಯತಿ ವತಿಯಿಂದ ಸ್ಯಾನಿಟೈಸೇಷನ್ ಹಾಗೂ ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗುವುದು. ಬೆಟ್ಟ ಪ್ರದೇಶದಲ್ಲಿ ಯಾವುದೇ ಕಾಡು ಪ್ರಾಣಿ ಬರದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಕೂಂಬಿಂಗ್ ಕಾರ್ಯಾಚರಣೆ ಮಾಡಲಾಗುವುದು. ಮೂರು ದಿನಗಳ ಕಾಲ ಸೂಕ್ತ ನಿಗಾ ಇಡಲು ಡ್ರೋಣ್ ಕ್ಯಾಮೆರಾ ಬಳಸಲಾಗುವುದು. ತುರ್ತು ನಿರ್ವಹಣೆಗೆ ಅಂಬ್ಯುಲೆನ್ಸ್, ಅಗ್ನಿಶಾಮಕ ಹಾಗೂ ಜೆಸ್ಕಾಂ ವಾಹನಗಳನ್ನು ಸ್ಥಳದಲ್ಲಿ ನಿಯೋಜಿಸಲಾಗುವುದು ಎಂದು ಮೂರು ದಿನಗಳ ಕಾರ್ಯಕ್ರಮದ ಕುರಿತು ಸಹಾಯಕ ಆಯುಕ್ತರಾದ ಬಸವಣೆಪ್ಪ ಕಲಶೆಟ್ಟಿ ಸಚಿವರಿಗೆ ಮಾಹಿತಿ ನೀಡಿದರು

ಸಭೆಯಲ್ಲಿ ಶಾಸಕರಾದ ಬಸವರಾಜ ದಢೇಸೂಗೂರು, ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶ ಬಾಬು, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಬಿ.ಫೌಜಿಯಾ ತರನ್ನುಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅರುಣಾಂಗ್ಷು ಗಿರಿ, ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ.ಕಡಿ, ಡಿವೈಎಸ್‌ಪಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ತಹಶೀಲ್ದಾರರು ಉಪಸ್ಥಿತರಿದ್ದರು.

English summary
Lakhs of Hanuman Devotees are expected come to Anjanadri hills on 5th december for Hanuman mala visarjan. Minister Shashikala jolle visits anjanadri for inspection to preparation work
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X