ಕೊಪ್ಪಳ: 8 ವರ್ಷಗಳ ಬಳಿಕ ಕನಕಗಿರಿ ಉತ್ಸವ, ದಿನಾಂಕ ಘೋಷಣೆ
ಕೊಪ್ಪಳ, ಫೆಬ್ರವರಿ 18; ಕೊಪ್ಪಳ ಜಿಲ್ಲೆಯಲ್ಲಿ 8 ವರ್ಷಗಳ ನಂತರ ಕನಕಗಿರಿ ಉತ್ಸವವನ್ನು ಆಚರಿಸಲಾಗುತ್ತಿದೆ. ಅದ್ದೂರಿ ಉತ್ಸವ ಆಚರಣೆಗೆ ಅಧಿಕಾರಿಗಳು ಕಾರ್ಯನಿರ್ವಹಿಸಿ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್. ತಂಗಡಗಿ ಅಧಿಕಾರಿಗಳಿಗೆ ಸೂಚಿಸಿದರು.
ಕನಕಗಿರಿಯಲ್ಲಿ ಮಾರ್ಚ್ 2 ಮತ್ತು 3ರಂದು ಕನಕಗಿರಿ ಉತ್ಸವ 2024 ನಡೆಯಲಿದೆ. ಈಗಾಗಲೇ ಉತ್ಸವದ ಸಿದ್ಧತಾ ಕಾರ್ಯಗಳು ಆರಂಭಗೊಂಡಿವೆ. ಅಧಿಕಾರಿಗಳಿಗೆ ಸಮಿತಿಗಳ ಮೂಲಕ ಕಾರ್ಯಗಳನ್ನು ಹಂಚಿಕೆ ಮಾಡಲಾಗಿದೆ. ಸಮಿತಿಯಲ್ಲಿರುವ ಎಲ್ಲ ಅಧಿಕಾರಿಗಳು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ನಿರ್ದೇಶನ ನೀಡಲಾಗಿದೆ.

ಉತ್ಸವದಲ್ಲಿ ಭಾಗವಹಿಸುವ ಸಾರ್ವಜನಿಕರು, ಕಲಾವಿದರು, ಕ್ರೀಡಾಪಟುಗಳು, ಅತಿಥಿಗಳಿಗೆ ಯಾವುದೇ ಕೊರತೆಯಾಗದಂತೆ ಅಚ್ಚುಕಟ್ಟು ವ್ಯವಸ್ಥೆಯನ್ನು ಮಾಡುವುದರ ಮೂಲಕ ಅದ್ದೂರಿ ಉತ್ಸವ ಆಚರಣೆಗೆ ಅಧಿಕಾರಿಗಳು ಬದ್ಧತೆಯಿಂದ ಕಾರ್ಯನಿರ್ವಹಿಸಿ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.
ವಿವಿಧ ಕಾರ್ಯಕ್ರಮಗಳು; ಕೊಪ್ಪಳದ ಕನಕಗಿರಿ ಉತ್ಸವದ ಅಂಗವಾಗಿ ಫೆಬ್ರವರಿ 28 ಮತ್ತು 29ರಂದು ಕ್ರೀಡಾಕೂಟಗಳನ್ನು ಆಯೋಜಿಸಲಾಗಿದೆ. ಇದರಲ್ಲಿ ಅಂತರಾಷ್ಟ್ರೀಯ ಕ್ರೀಡಾಪಟುಗಳು, ಸ್ಥಳೀಯ ಕ್ರೀಡಾಪಟುಗಳು ಭಾಗವಹಿಸುತ್ತಾರೆ. ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಸೂಕ್ತ ವಸತಿ ವ್ಯವಸ್ಥೆ, ಊಟ, ಉಪಹಾರ, ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡುವಂತೆ ಸೂಚನೆ ನೀಡಲಾಗಿದೆ.
ಕುಸ್ತಿ, ಹಗ್ಗ ಜಗ್ಗಾಟ, ಕಬಡ್ಡಿ ಸೇರಿದಂತೆ ವಿವಿಧ ಗ್ರಾಮೀಣ ಕ್ರೀಡೆಗಳೊಂದಿಗೆ ವಾಲಿಬಾಲ್‌ನಂತಹ ಕ್ರೀಡೆಗಳನ್ನು ಆಯೋಜಿಸಲಾಗುತ್ತದೆ. ಕನಕಗಿರಿ ಪಟ್ಟಣದ ರುದ್ರಸ್ವಾಮಿ ಪ್ರೌಢಶಾಲೆಯ ಆವರಣ ಹಾಗೂ ಜೂನಿಯರ್ ಕಾಲೇಜು ಮೈದಾನದಲ್ಲಿ ಕ್ರೀಡಾಕೂಟಕ್ಕೆ ಅನುಕೂಲವಾಗುವ ರೀತಿಯಲ್ಲಿ ಮೈದಾನವನ್ನು ಸಿದ್ಧಪಡಿಸಲಾಗುತ್ತದೆ.
ಉತ್ಸವಕ್ಕೆ ವಿವಿಧ ಗ್ರಾಮಗಳಿಂದ ಆಗಮಿಸುವ ಜನರಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಉತ್ಸವದ ಅಂಗವಾಗಿ ಮೆರವಣಿಗೆಯನ್ನು ಹಮ್ಮಿಕೊಂಡಿದ್ದು, ಮೆರವಣಿಗೆಯು ಪಟ್ಟಣದ ಕಲ್ಮಠದಿಂದ ರಥಬೀದಿಯಿಂದ ಚಾಲನೆಗೊಂಡು ಕನಕಾಚಲಪತಿ ದೇವಸ್ಥಾನ, ಬಸ್ ಸ್ಟಾಂಡ್ ಮಾರ್ಗವಾಗಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಮುಕ್ತಾಯಗೊಳ್ಳುತ್ತದೆ.
ಮೆರವಣಿಗೆಯು 15 ಕಲಾತಂಡಗಳು, ವಿವಿಧ ಶಾಲೆಗಳಿಂದ ಸ್ತಬ್ಧಚಿತ್ರಗಳೊಂದಿಗೆ 1 ಕಿ. ಮೀ. ವರೆಗೆ ಸಾಗುತ್ತದೆ. ಉತ್ಸವದ ವೇದಿಕೆಗಳು, ಮೆರವಣಿಗೆ ಹಾಗೂ ಪಟ್ಟಣದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಬೇಕು. ಆರೋಗ್ಯ ಇಲಾಖೆಯಿಂದ ಎರಡು ದಿನಗಳ ಕಾಲ 24*7 ವೈದ್ಯಕೀಯ ಸೇವೆ ಒದಗಿಸಬೇಕು. ಅಂಬ್ಯುಲೆನ್ಸ್ ಒದಗಿಸಬೇಕು ಎಂದು ಆರೋಗ್ಯ ಇಲಾಖೆಗೆ ಸೂಚಿಸಲಾಗಿದೆ.
2015ರ ನಂತರ ಕನಕಗಿರಿ ಉತ್ಸವ ನಡೆಯುತ್ತಿದೆ. ಸರ್ಕಾರದಿಂದ ಅಗತ್ಯ ಅನುದಾನ ಬಿಡುಗಡೆಯಾಗುತ್ತಿದೆ. ಆದ್ದರಿಂದ ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಬೇಕು. ಅದಕ್ಕಾಗಿ ಜಿಲ್ಲೆಯಾದ್ಯಂತ ಪ್ರಚಾರ ಕಾರ್ಯ ಕೈಗೊಳ್ಳಬೇಕು. ಪೋಸ್ಟರ್, ಬ್ಯಾನರ್ ಮೂಲಕ ಉತ್ಸವದ ಕುರಿತು ಪ್ರಚಾರ ಕೈಗೊಳ್ಳಬೇಕು. ಸಾಮಾಜಿಕ ತಾಣಗಳ ಮೂಲಕ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳು, ಕನಕಗಿರಿಯ ಸ್ಥಳದ ಮಹತ್ವದ ಕುರಿತು ಹೆಚ್ಚಿನ ಪ್ರಮಾಣದಲ್ಲಿ ಪ್ರಚಾರ ಮಾಡಲು ಯೋಜನೆ ರೂಪಿಸಲಾಗಿದೆ.
ಉತ್ಸವದ ಮುಖ್ಯ ವೇದಿಕೆಯ ಹತ್ತಿರ ಇಂಟರ್‌ನೆಟ್ ಮತ್ತು ಫ್ಯಾಕ್ಸ್‌ಗಳ ಜೊತೆ ಮಾಹಿತಿ ಕೇಂದ್ರದ ವ್ಯವಸ್ಥೆ ಮಾಡಬೇಕು. ಉತ್ಸವದ ಪ್ರಚಾರಕ್ಕಾಗಿ ಹಾಗೂ ನೇರ ಪ್ರಸಾರ ಮಾಡಲು ಜಿಲ್ಲಾ ಎನ್‌ಐಸಿ ಇಂದ ಹೊಸ ಆ್ಯಪ್ ಸಿದ್ದಪಡಿಸಬೇಕು ಎಂದು ಪ್ರಚಾರ ಮತ್ತು ಮಾಧ್ಯಮ ಸಮಿತಿ ಅಧಿಕಾರಿಗಳಿಗೆ ಸಚಿವರು ಸೂಚನೆ ಕೊಟ್ಟಿದ್ದಾರೆ.
ಸಚಿವ ಶಿವರಾಜ್ ತಂಗಡಗಿ ಕನಕಗಿರಿ ಉತ್ಸವ-2024ರ ಹಿನ್ನೆಲೆಯಲ್ಲಿ ಸಿದ್ಧತೆಯನ್ನು ಪರಿಶೀಲಿಸಿದರು. ಕೊಪ್ಪಳದಲ್ಲಿ ಅಧಿಕಾರಿಗಳ ಸಭೆ ನಡೆಸಿ ಅಲ್ಲಿಂದ ಹಾಲವರ್ತಿಗೆ ಭೇಟಿ ನೀಡಿ ಬಳಿಕ ಕನಕಗಿರಿಗೆ ತೆರಳಿದ ಸಚಿವರು, ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ರಾಹುಲ್ ಪಾಂಡೆಯ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧಾ ವಂಟಗೋಡಿ ಅವರೊಂದಿಗೆ ಕನಕಗಿರಿ ಪಟ್ಟಣದ ವಿವಿಧೆಡೆ ಸಂಚರಿಸಿ ಉತ್ಸವದ ಸಿದ್ಧತೆಯ ರೂಪುರೇಷಗಳ ಬಗ್ಗೆ ಮಾಹಿತಿ ಪಡೆದರು.
ಕನಕಗಿರಿ ಉತ್ಸವದ ಪ್ರಮುಖ ಉಡಚಪ ನಾಯಕ ವೇದಿಕೆಯ ಹತ್ತಿರ ತೆರಳಿ ಪರಿಶೀಲಿಸಿದರು. ಬಳಿಕ ಶ್ರೀ ಕನಕಾಚಲಪತಿ ದೇವಸ್ಥಾನಕ್ಕೆ ತೆರಳಿ ದೇವಸ್ಥಾನಕ್ಕೆ ವಿದ್ಯುತ್ ಅಲಂಕಾರಕ್ಕೆ ವ್ಯವಸ್ಥೆ ಮಾಡಿಸಲು ಸೂಚನೆ ನೀಡಿದರು. ಹೆಲಿಪ್ಯಾಡ್ ಸ್ಥಳ ಸೇರಿದಂತೆ ಇನ್ನಿತರ ಕಡೆ ತೆರಳಿ ಪರಿಶೀಲಿಸಿದರು.
ಉತ್ಸವದ ಅಂಗವಾಗಿ ಸಬ್ಧಚಿತ್ರಗಳ ಮೆರೆವಣಿಗೆ, ಶ್ರೀ ಕನಕಾಚಲಪತಿ ಇತಿಹಾಸದ ಕುರಿತು ನಾಟಕ ಪ್ರದರ್ಶನ, ಡ್ರೋನ್, ಲೇಸರ್ ವಿಶೇಷ ಕಾರ್ಯಕ್ರಮ, ಕೃಷಿ ಮೇಳ, ಫಲಪುಷ್ಪ ಪ್ರದರ್ಶನ ಸೇರಿದಂತೆ ನಾನಾ ಕಾರ್ಯಕ್ರಮಗಳಿಗೆ ಅಚ್ಚುಕಟ್ಟಾಗಿ ಸಿದ್ಧತೆ ಮಾಡಿಕೊಳ್ಳಬೇಕು ಎಂದರು.












Click it and Unblock the Notifications