ಕೊಪ್ಪಳ : ಶೇ 100ಕ್ಕೂ ಅಧಿಕ ಮತದಾನ, ಇಂದು ಮರು ಮತದಾನ
ಕೊಪ್ಪಳ, ಮೇ 14 : ಕೊಪ್ಪಳ ಜಿಲ್ಲೆಯ ಕುಷ್ಟಗಿ ವಿಧಾನಸಭಾ ಕ್ಷೇತ್ರದ ಮನ್ನೇರಾಳ ಗ್ರಾಮದ ಮತಗಟ್ಟೆ ಸಂಖ್ಯೆ 20 ಮತ್ತು 21 ರಲ್ಲಿ ಇಂದು ಮರು ಮತದಾನ ನಡೆಯುತ್ತಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6ಗಂಟೆ ತನಕ ಮತದಾನ ಮಾಡಲು ಅವಕಾಶ ನೀಡಲಾಗಿದೆ.
ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಮರುಮತದಾನಕ್ಕೆ ಆದೇಶ ನೀಡಿದ್ದಾರೆ. ಮೇ. 12 ರಂದು ನಡೆದ ಮತದಾನದ ಸಂದರ್ಭದಲ್ಲಿ ಮನ್ನೇರಾಳ ಗ್ರಾಮದ ಮತಗಟ್ಟೆ ಸಂಖ್ಯೆ 21 ರಲ್ಲಿಯ ಮತದಾರರು ಮತಗಟ್ಟೆ ಸಂಖ್ಯೆ 20 ರಲ್ಲಿ ಮತ ಚಲಾಯಿಸಿರುತ್ತಾರೆ. ಹೀಗಾಗಿ ಮತಗಟ್ಟೆ ಸಂಖ್ಯೆ 20 ರ ಮತದಾನ ಪ್ರಮಾಣ ಶೇ. 100 ಕ್ಕಿಂತ ಹೆಚ್ಚಾಗಿದೆ.
ಈ ಕುರಿತು ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಲಾಗಿತ್ತು. ಚುನಾವಣಾ ಆಯೋಗದ ಸೂಚನೆಯಂತೆ ಮತಗಟ್ಟೆ ಸಂಖ್ಯೆ 20 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಪಶ್ಚಿಮ ಭಾಗ), ಹಳೆಯ ಕಟ್ಟಡ ಹಾಗೂ ಇದೇ ಗ್ರಾಮದ ಮತಗಟ್ಟೆ ಸಂಖ್ಯೆ 21 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಉತ್ತರ ಭಾಗ) ದಲ್ಲಿ ಇಂದು ಮರು ಮತದಾನ ನಡೆಸಲಾಗುತ್ತಿದೆ.

ಬೆಳಗ್ಗೆ 7 ಗಂಟೆಯಿಂದ ಮರು ಮತದಾನ ಆರಂಭವಾಗಿದೆ. ಮತದಾನ ಮಾಡಲು ಅನುಕೂಲವಾಗುವಂತೆ ಈ ಗ್ರಾಮದ ವ್ಯಾಪ್ತಿಯಲ್ಲಿ ಇಂದು ಸಾರ್ವತ್ರಿಕ ರಜೆ ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಸಂಜೆ 6 ಗಂಟೆಯವರೆಗೆ ಮತದಾನ ಮಾಡಲು ಅವಕಾಶ ನೀಡಲಾಗಿದೆ. ಮತಗಟ್ಟೆ ಸಂಖ್ಯೆ 20 ರಲ್ಲಿ 605 ಮತದಾರರಿದ್ದರೆ, ಮತಗಟ್ಟೆ ಸಂಖ್ಯೆ 21 ರಲ್ಲಿ 1,121 ಮತದಾರರಿದ್ದಾರೆ.












Click it and Unblock the Notifications