ಕೊಪ್ಪಳಕ್ಕೆ ಕೇಂದ್ರದ ಕೊಡುಗೆ; ಶೀಘ್ರವೇ ಯೋಜನೆಗೆ ಭೂಮಿ ಪೂಜೆ

ಕೊಪ್ಪಳ, ಜನವರಿ 30: ಕೊಪ್ಪಳ ಜಿಲ್ಲೆ ಮತ್ತು ಪ್ರಸಿದ್ದ ಧಾರ್ಮಿಕ ಕ್ಷೇತ್ರವಾದ ಹುಲಗಿಯ ಭಕ್ತರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ. 29.57 ಕೋಟಿ ರೂ. ಮೊತ್ತದ ಈ ಯೋಜನೆಗೆ ಶೀಘ್ರವೇ ಭೂಮಿ ಪೂಜೆ ನಡೆಯಲಿದೆ.

ಹುಲಗಿ-ಮುನಿರಾಬಾದ್ ರೈಲ್ವೆ ಮೇಲ್ಸೇತುವೆ ಯೋಜನೆಗೆ ಈಗಾಗಲೇ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿ, ಅನುದಾನ ಕೊಟ್ಟಿದೆ. ಕಾಮಗಾರಿ ಪ್ರಾರಂಭಕ್ಕಾಗಿ ಕೊಪ್ಪಳ ಸಂಸದ ಕರಡಿ ಸಂಗಣ್ಣ ಶೀಘ್ರದಲ್ಲಿ ಭೂಮಿ ಪೂಜೆ ನೆರವೇರಿಸಲಿದ್ದಾರೆ.

Foundation Stone For Huligi Munirabad Railway Over Bridge Soon

ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಹುಲಗಿ ರೈಲ್ವೆ ಎಲ್.ಸಿ ಗೇಟ್ ನಂಬರ್ 79ರಲ್ಲಿ ಮೇಲ್ಸೇತುವೆ ಕಾಮಗಾರಿಗೆ ಕರೆಯಲಾಗಿದ್ದ ಟೆಂಡರ್ ಪ್ರಕ್ರಿಯೆ ಮುಕ್ತಾಯಗೊಂಡು, ಕಾಮಗಾರಿಗೆ ಆದೇಶವನ್ನು ನೀಡಲಾಗಿದೆ.

ಸೇತುವೆ ಕಾಮಗಾರಿಯನ್ನು ಅತೀ ಶೀಘ್ರದಲ್ಲಿ ಪ್ರಾರಂಭಿಸಲು ಸಂಸದರು ಭೂಮಿ ಪೂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ರೈಲ್ವೆ ಇಲಾಖೆಗೆ ಮನವಿ ಮಾಡಿದ್ದಾರೆ. ಕಾಮಗಾರಿಯು ಶೀಘ್ರದಲ್ಲೇ ಪ್ರಾರಂಭವಾಗಲಿದೆ.

ಸಂಸದರ ಹೇಳಿಕೆ: ಹುಲಗಿ-ಮುನಿರಾಬಾದ್ ರೈಲ್ವೆ ಮೇಲ್ಸೇತುವೆ ಯೋಜನೆ ಕುರಿತು ಮಾತನಾಡಿರುವ ಸಂಸದ ಕರಡಿ ಸಂಗಣ್ಣ, "ಸುಕ್ಷೇತ್ರ ಹುಲಿಗೆಮ್ಮ ದೇವಸ್ಥಾನಕ್ಕೆ ವಿಶೇಷ ಸಂದರ್ಭಗಳಲ್ಲಿ ಲಕ್ಷಾಂತರ ಭಕ್ತರು ಹಾಗೂ ನಿತ್ಯವೂ ಸಾವಿರಾರು ಭಕ್ತರು ದೇವಿಯ ದರ್ಶನಕ್ಕೆಂದು ಆಗಮಿಸುತ್ತಾರೆ" ಎಂದರು.

"ಈ ಭಾಗದಲ್ಲಿ ಇರುವ ರೈಲ್ವೇ ಗೇಟ್‌ಗೆ ಮೇಲ್ಸೇತುವೆ ನಿರ್ಮಾಣಕ್ಕಾಗಿ ಬಹಳ ವರ್ಷಗಳಿಂದ ಬೇಡಿಕೆ ಇತ್ತು. ಸದ್ಯ ಕೇಂದ್ರ ಸರ್ಕಾರದ ಅನುದಾನದಲ್ಲಿ ಮೇಲ್ಸೇತುವೆ ಕಾಮಗಾರಿಗೆ ಅನುಮೋದನೆ ಸಿಕ್ಕಿದ್ದು, ಶೀಘ್ರದಲ್ಲೇ ಭೂಮಿ ಪೂಜೆಯನ್ನು ನೆರವೇರಿಸಿ, ಕಾಮಗಾರಿ ಪ್ರಾರಂಭಿಸಲಾಗುವುದು" ಎಂದು ಹೇಳಿದರು.

ಈ ಯೋಜನೆಗಾಗಿ ಕೇಂದ್ರ ಸರ್ಕಾರ ಕಾಮಗಾರಿಗೆ 29.57 ಕೋಟಿ ಮತ್ತು ಭೂ ಸ್ವಾಧೀನ ಪರಿಹಾರಕ್ಕೆ 3 ಕೋಟಿ ರೂ. ಬಿಡುಗಡೆ ಮಾಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಾಲುದಾರಿಕೆಯಲ್ಲಿ ಯೋಜನೆ ಕೈಗೊಳ್ಳಬೇಕಿತ್ತು.

ಆದರೆ ಕರ್ನಾಟಕ ಸರ್ಕಾರ ನಿರಾಸಕ್ತಿ ತೋರಿದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರವೇ ಯೋಜನೆಗೆ ಸಂಪೂರ್ಣ ಅನುದಾನವನ್ನು ನೀಡಿದೆ ಎಂದು ಸಂಸದ ಕರಡಿ ಸಂಗಣ್ಣ ಹೇಳಿದ್ದಾರೆ. ಈ ಮೂಲಕ ಕೊಪ್ಫಳ ಭಾಗದ ಜನರ ಬಹುದಿನಗಳ ಬೇಡಿಕೆ ಈಡೇರಿದೆ.

ಧಾರ್ಮಿಕ ಕ್ಷೇತ್ರವಾದ ಹುಲಗಿಗೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಕರ್ನಾಟಕ ಮಾತ್ರವಲ್ಲ. ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರದ ಭಕ್ತರು ಸಹ ಬರುತ್ತಾರೆ. ಆದರೆ ರೈಲ್ವೇ ಮೇಲ್ಸೇತುವೆ ಇಲ್ಲದ ಕಾರಣಕ್ಕೆ ಭಕ್ತರು ತಾಸು ಗಟ್ಟಲೇ ಸಂಚಾರ ದಟ್ಟಣೆಯಲ್ಲಿ ಸಿಲುಕಿ ಪರದಾಡಬೇಕಿತ್ತು.

ಒಮ್ಮೆ ರೈಲು ಬಂದರೆ ಸುಮಾರು 1 ತಾಸು ಸಂಚಾರ ದಟ್ಟಣೆ ಉಂಟಾಗಿ ಭಕ್ತರು ಪರದಾಡುತ್ತಿದ್ದರು. ಆದ್ದರಿಂದ ರೈಲ್ವೆ ಮೇಲ್ಸೇತುವೆ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿತ್ತು. ಆದರೆ ರಾಜ್ಯ ಸರ್ಕಾರ ಯೋಜನೆಗೆ ಅನುದಾನವನ್ನು ನೀಡಲಿಲ್ಲ.

ಮನಿರಾಬಾದ್ ರೈಲು ನಿಲ್ದಾಣದ ಹೆಸರನ್ನು ಜಗನ್ಮಾಥೆ ಶ್ರೀ ಹುಲಿಗೆಮ್ಮ ಎಂದು ಬದಲಾವಣೆ ಮಾಡಬೇಕು ಎಂದು ಸಹ ರೈಲ್ವೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಆದರೆ ಈ ಪ್ರಸ್ತಾವನೆಗೆ ಇನ್ನೂ ಸಹ ಒಪ್ಪಿಗೆ ಸಿಕ್ಕಿಲ್ಲ.

ಕಳೆದ ತಿಂಗಳು ಸಾರಿಗೆ ಹಾಗೂ ಮುಜರಾಯಿ ಖಾತೆ ಸಚಿವ ರಾಮಲಿಂಗಾ ರೆಡ್ಡಿ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಾಲಯಕ್ಕೆ ಭೇಟಿ ನೀಡಿದ್ದರು. "ದೇವಾಲಯದ ನಿಶ್ಚಿತ ಠೇವಣಿ ಒಟ್ಟು 55.83 ಕೋಟಿ ರೂ. ಇದ್ದು, ದೇವಸ್ಥಾನ ಅಭಿವೃದ್ಧಿ ಮಾಡುವುದಕ್ಕೆ ಹಣಕಾಸಿನ ಕೊರತೆಯೇ ಇಲ್ಲ. ದೇವಸ್ಥಾನದ ಸಮಗ್ರ ಅಭಿವೃದ್ಧಿಯ ಪರಿಷ್ಕೃತ ಮಾಸ್ಟರ್ ಪ್ಲಾನ್ ಪ್ರತಿಯನ್ನು ಇಲಾಖೆಗೆ ಸಲ್ಲಿಸಿದಲ್ಲಿ ಮುಖ್ಯಮಂತ್ರಿಗಳಿಂದ ಅನುಮೋದನೆ ಪಡೆದು ಕಳುಹಿಸಲಾಗುವುದು" ಎಂದು ಹೇಳಿದ್ದರು.

2022-23ನೇ ಸಾಲಿನಲ್ಲಿ ದೇವಾಲಯಕ್ಕೆ 80 ಲಕ್ಷ ಭಕ್ತರು ಭೇಟಿ ನೀಡಿದ್ದಾರೆ. ಪ್ರತಿ ವರ್ಷ ಅಂದಾಜು 90 ಲಕ್ಷ ಭಕ್ತರು ದೇವಸ್ಥಾನಕ್ಕೆ ಭೇಟಿ ಕೊಡುತ್ತಾರೆ ಎನ್ನುವ ಅಂಕಿ ಸಂಖ್ಯೆಗಳಿವೆ. ಭಕ್ತರಿಗೆ ಮೂಲಭೂತ ಸೌಕರ್ಯ ಕಲ್ಪಿಸುವುದು ಅತ್ಯಗತ್ಯ ಎಂದು ಸಚಿವರು ತಿಳಿಸಿದ್ದರು. ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು. ಅಭಿವೃದ್ಧಿ ಮಾಡಲು ದೇವಸ್ಥಾನದಲ್ಲಿಯೇ ಸಾಕಷ್ಟು ಅನುದಾನವಿದೆ ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+