Drought: ಕೊಪ್ಪಳದ ಹಿರೇಹಳ್ಳ ಡ್ಯಾಂಗೆ ಸಿಇಓ ಭೇಟಿ
ಕೊಪ್ಪಳ, ಮಾರ್ಚ್ 12: ಕೊಪ್ಪಳ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ಬರದ ಭಾದೆ ಕಾಣುತ್ತಿದೆ. ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಜಿಲ್ಲಾಧಿಕಾರಿ ನಲಿನ್ ಅತುಲ್, ಜಿಲ್ಲಾ ಪಂಚಾಯಿತಿ ಸಿಇಓ ರಾಹುಲ್ ಪಾಂಡೆ ಕ್ರಮಗಳನ್ನು ಕೈಗೊಂಡಿದ್ದಾರೆ. ಕೊಪ್ಪಳ ತಾಲ್ಲೂಕು ಆಡಳಿತದಿಂದ ಬರ ನಿರ್ವಹಣೆ ಹಾಗೂ ಕುಡಿಯುವ ನೀರಿನ ಸಹಾಯವಾಣಿಯನ್ನು ಆರಂಭಿಸಲಾಗಿದೆ. ಬರ ನಿರ್ವಹಣೆ, ಮೇವಿನ ಸಮಸ್ಯೆ ಹಾಗೂ ಕುಡಿಯುವ ನೀರಿನ ಸಮಸ್ಯೆಯ ವಿಷಯವಾಗಿ ತಹಶೀಲ್ದಾರ್ ಕಚೇರಿ ಮತ್ತು ಕೊಪ್ಪಳ ತಾಲ್ಲೂಕು ಪಂಚಾಯತಿಯಲ್ಲಿ ಸಹಾಯವಾಣಿ ಕೇಂದ್ರ ತೆರೆಯಲಾಗಿದೆ.

ಕುಡಿಯುವ ನೀರು ಪೂರೈಕೆಗಾಗಿಯೇ ಏಳು ತಾಲೂಕುಗಳಿಗೆ ತಲಾ 50 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಜಿಲ್ಲಾಧಿಕಾರಿಗಳ ಕಛೇರಿಯ ಖಾತೆಯಲ್ಲಿ 16 ಕೋಟಿ ರೂ. ಲಭ್ಯವಿದೆ. ಬರ, ಕುಡಿವ ನೀರು ಸೇರಿದಂತೆ ಬರ ನಿರ್ಹಣೆಗೆ ಹಣಕಾಸಿನ ತೊಂದರೆ ಇಲ್ಲ.
ಅಧಿಕಾರಿಗಳು ಬರೀ ಕಛೇರಿಯಲ್ಲಿ ಕೂರಬಾರದು. ಕಾಲಕಾಲಕ್ಕೆ ಕ್ಷೇತ್ರ ಭೇಟಿ ನಡೆಸಬೇಕು. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸಂಚರಿಸಿ ಅಲ್ಲಿನ ವಾಸ್ತವ ಪರಿಸ್ಥಿತಿಯನ್ನು ಅರಿತು ಜನತೆಗೆ ಸ್ಪಂದಿಸಬೇಕು ಎಂದು ಸಚಿವ ಶಿವರಾಜ ತಂಗಡಗಿ ಸೂಚನೆ ನೀಡಿದ್ದಾರೆ.
ಹಿರೇಹಳ್ಳ ಡ್ಯಾಂಗೆ ಭೇಟಿ: ಕೊಪ್ಪಳ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆ ಹಿರೇಹಳ್ಳ ಜಲಾಶಯಕ್ಕೆ ಭೇಟಿ ನೀಡಿ, ಸ್ಥಳದಲ್ಲಿದ್ದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ ಅಧಿಕಾರಿಗಳು ಯಲಬುರ್ಗಾ ಇವರೊಂದಿಗೆ ಕುಡಿಯುವ ನೀರಿನ ಬಗ್ಗೆ ಚರ್ಚಿಸಿದರು. ಬೇಸಿಗೆ ತೀವ್ರವಾಗಿದ್ದು, ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
ಹಿರೇಹಳ್ಳ ಜಲಾಶಯದಲ್ಲಿ 2 ಜಾಕ್‌ವೆಲ್‌ಗಳಿದ್ದು, ಅವುಗಳಲ್ಲಿ ಒಂದು ಯಲಬುರ್ಗಾ ಪಟ್ಟಣಕ್ಕೆ ಹಾಗೂ ಇನ್ನೊಂದು ಮಂಗಳೂರು ಸೇರಿದಂತೆ ಇತರೆ 3 ಗ್ರಾಮಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಮುಂದಿನ 4 ತಿಂಗಳವರೆಗೆ ಸಮರ್ಪಕ ಕುಡಿಯುವ ನೀರಿನ ಸರಬರಾಜಿಗಾಗಿ ಈಗಿನಿಂದಲೇ ನೀರು ಸಂಗ್ರಹಣೆ ಹಾಗೂ ವ್ಯವಸ್ಥಿತ ಸರಬರಾಜಿಗೆ ಕ್ರಮ ಕೈಗೊಳ್ಳುವ ಕುರಿತು ಅಧಿಕಾರಿಗಳಿಗೆ ಸೂಚಿಸಿದರು.
ನೀರಾವರಿ ಇಲಾಖೆಯ ಎಇಇ ಪಂಪಾಪತಿ ಮಾತನಾಡಿ, "ಈಗಾಗಲೇ ಹಿರೇಹಳ್ಳ ಜಲಾಶಯದಲ್ಲಿ 0.48 ಟಿಎಂಸಿ ನೀರು ಸಂಗ್ರಹವಿದ್ದು, ಯಲಬುರ್ಗಾ ಪಟ್ಟಣ ಹಾಗೂ ಮಂಗಳೂರು, ಇತರೆ ಗ್ರಾಮಗಳಿಗೆ ದಿನಕ್ಕೆ 20 ಕ್ಯೂಸೆಕ್ ನೀರು ಬೇಕಾಗಿದ್ದು, ಮುಂದಿನ 5 ತಿಂಗಳವರೆಗೆ ಸುಮಾರು 2400 ಕ್ಯೂಸೆಕ್ ನೀರಿನ ಅವಶ್ಯಕತೆ ಇರುತ್ತದೆ. ಈಗಾಗಲೇ ಜಲಾಶಯದಲ್ಲಿ ಸುಮಾರು 2700 ಕ್ಯೂಸೆಕ್‌ಕ್ಕಿಂತ ಅಧಿಕ ನೀರು ಸಂಗ್ರಹವಿದ್ದು, ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ತೊಂದರೆ ಆಗುವುದಿಲ್ಲ" ಎಂದರು.
ಕೊಪ್ಪಳ ಜಿಲ್ಲಾಧಿಕಾರಿ ನಲಿನ್ ಅತುಲ್ ಮಾತನಾಡಿ, "ಮುಂದಿನ 3 ತಿಂಗಳಲ್ಲಿ 151 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಬರಬಹುದು ಎಂದು ಅಂದಾಜಿಸಲಾಗಿದೆ. ಕಾಲಕಾಲಕ್ಕೆ ಜಿಲ್ಲಾ ಮಟ್ಟದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಸಿ ಕುಡಿಯುವ ನೀರು ಮೇವು ಪೂರೈಕೆ ಸೇರಿದಂತೆ ನಾನಾ ವಿಷಯಗಳ ಬಗ್ಗೆ ಚರ್ಚಿಸಿ ಬೇಸಿಗೆ ಹಿನ್ನೆಲೆಯಲ್ಲಿ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ" ಎಂದು ಹೇಳಿದ್ದಾರೆ.
"ಬೇಸಿಗೆ ಹಿನ್ನೆಲೆಯಲ್ಲಿ ಯಾವುದೇ ಕಡೆಗಳಲ್ಲಿ ಲೋಪವಾಗದ ಹಾಗೆ ಸರಿಯಾದ ರೀತಿಯಲ್ಲಿ ಜನರಿಗೆ ನೀರು ಪೂರೈಸಲು ಕ್ರಮ ವಹಿಸಬೇಕು" ಎಂದು ಸಚಿವ ಶಿವರಾಜ ತಂಗಡಗಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಚನೆ ಕೊಟ್ಟಿದ್ದಾರೆ.
"ನೀರು ಸಿಗುವ ಕಡೆಗೆ ಕೊಳವೆಬಾವಿ ಕೊರೆಯಿಸುವ ಹಾಗೂ ನೀರು ಇಲ್ಲದ ಕಡೆಗೆ ಟ್ಯಾಂಕರ್ ಮೂಲಕ ನೀರು ಪೂರೈಸುವ ಕಾರ್ಯವನ್ನು ಮೂರು ತಿಂಗಳ ಕಾಲ ನಿರಂತರವಾಗಿ, ಯುದ್ದೋಪಾದಿ ರೀತಿಯಲ್ಲಿ ನಡೆಸಬೇಕು" ಎಂದು ಅಧಿಕಾರಿಗಳಿಗೆ ಸಚಿವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.
ಎಲ್ಲಾ ತಾಲೂಕುಗಳ ತಹಸೀಲ್ ಕಚೇರಿಗಳಲ್ಲಿ ತಾಪಂ ಇಓ ಕಚೇರಿಗಳ ಮುಂದೆ ಸಹಾಯವಾಣಿ ನಂಬರ್‌ಗಳ ಪ್ರದರ್ಶನಕ್ಕೆ ಏರ್ಪಾಡು ಮಾಡಿ ಕುಡಿವ ನೀರಿಗೆ ಸಂಬಂಧಿಸಿದಂತೆ ಜನತೆಗೆ ಅನುಕೂಲ ಕಲ್ಪಿಸಬೇಕು. ತಹಶೀಲ್ದಾರ್ ಹಾಗೂ ತಾಪಂ ಕಾರ್ಯ ನಿರ್ವಹಣಾಧಿಕಾರಿಗಳು ಕಾಲಕಾಲಕ್ಕೆ ಕ್ಷೇತ್ರ ಭೇಟಿ ನಡೆಸಬೇಕು. ಪ್ರತಿ ದಿನ ಎರಡು ಪಂಚಾಯತಿಗಳಿಗೆ ಭೇಟಿ ನೀಡಿ ಜನರೊಂದಿಗೆ ಮಾತನಾಡಿ ಸಮನ್ವಯ ನಡೆಸಿದ ಬಗ್ಗೆ ಡೈರಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.
ಕೆಲವು ಪಿಡಿಓಗಳ ಕಾರ್ಯವೈಖರಿ ಸರಿ ಇಲ್ಲ ಎಂದು ಸಚಿವರು ಅಸಮಧಾನ ವ್ಯಕ್ತಪಡಿಸಿದರು. ವಾಟರಮನ್‌ಗಳು ಮತ್ತು ಪಿಡಿಓಗಳು ಸರಿಯಾಗಿ ಕಾರ್ಯನಿರ್ವಹಿಸಿ ಜನತೆಗೆ ಸ್ಪಂದಿಸಬೇಕು. ಬೇಸಿಗೆ ಹಿನ್ನೆಲೆಯಲ್ಲಿ ಆಯಾ ತಾಲೂಕುಗಳ ಮೇಲೆ ಬರ ಹಾಗೂ ಕುಡಿವ ನೀರು ಪೂರೈಕೆಯ ವಿಷಯದ ಮೇಲೆ ಮೇಲ್ವಿಚಾರಣೆ ಮಾಡಲು ನೋಡಲ್ ಅಧಿಕಾರಿಗಳನ್ನು ನೇಮಿಸಲು ಸಚಿವರು ನಿರ್ದೇಶನ ನೀಡಿದ್ದಾರೆ.












Click it and Unblock the Notifications