ಕೊಪ್ಪಳ; ಬಸರಿಹಾಳದಲ್ಲಿ ಸ್ವಚ್ಛತಾ ಕಾರ್ಯ, ಶುದ್ಧ ನೀರು ಸರಬರಾಜು
ಕೊಪ್ಪಳ, ಜೂನ್ 19; ಕೊಪ್ಪಳ ಜಿಲ್ಲೆಯ ಬಸರಿಹಾಳ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಸಹಕಾರದೊಂದಿಗೆ ತಾಲೂಕು ಪಂಚಾಯತ್‌ನಿಂದ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಕನಕಗಿರಿ ತಾಲೂಕು ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿ ಚಂದ್ರಶೇಖರ ತಿಳಿಸಿದ್ದಾರೆ. ಗ್ರಾಮದಲ್ಲಿ ಕಲುಷಿತ ಕುಡಿಯುವ ನೀರು ಸೇವನೆಯಿಂದ 30ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದರು.
ಕೊಪ್ಪಳ ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಮತ್ತು ಜಿಲ್ಲಾ ಪಂಚಾಯತಿ ಸಿಇಓ ರಾಹುಲ್ ಪಾಂಡೆಯವರ ನಿರ್ದೇಶನದ ಮೇರೆಗೆ ಬಸರಿಹಾಳ ಗ್ರಾಮದಲ್ಲಿ ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ. ಗ್ರಾಮದ ಎಲ್ಲಾ ಓಣಿಗಳಲ್ಲಿ ಚರಂಡಿ ಹೂಳು ತೆಗೆದು ಸ್ವಚ್ಛಗೊಳಿಸಲಾಗಿದೆ. ಚರಂಡಿಗಳಿಗೆ ಮೆಲಾಥಿನ್ ಮತ್ತು ಬಿಚಿಂಗ್ ಪೌಡರ್ ಸಿಂಪಡಿಸಲಾಗಿದೆ.

ಮುಖ್ಯ ಪೈಪ್‌ನಲ್ಲಿ ಯಾವುದೇ ಲಿಕೇಜ್ ಆಗದಂತೆ ಕ್ರಮಕೈಗೊಳ್ಳಲಾಗಿದೆ. ಸದ್ಯ ಇರುವ ಹಳೆಯ ಪೈಪ್ ಲೈನ್ ಮೂಲಕ ನೀರು ಸರಬರಾಜು ತಡೆಹಿಡಿಯಲಾಗಿದೆ. ಟ್ಯಾಂಕರ್‌ಗಳ ಮೂಲಕ ಎಲ್ಲಾ ಓಣಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮುಂದುವರೆಸಲಾಗಿದೆ. ಗ್ರಾಮದಲ್ಲಿರುವ ಓಎಚ್ ಟಿ ಟ್ಯಾಂಕ್ ಮತ್ತು ನೀರಿನ ತೊಟ್ಟಿಗಳನ್ನು ಸ್ವಚ್ಛಗೊಳಿಸಲಾಗಿದೆ.
ಜೆಜೆಎಂ ಕಾಮಗಾರಿ; ಗ್ರಾಮದಲ್ಲಿ ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆಯ ಕಾಮಗಾರಿ ನಡೆಯುತ್ತಿದೆ. ಗ್ರಾಮೀಣ ಮತ್ತು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಮನೆಗಳಿಗೆ ನಳ ಜೋಡಣೆ ಮಾಡುತ್ತಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ಎರಡು ದಿನಗಳಲ್ಲಿ ಪೈಲ್‌ಲೈನ್ ಮೂಲಕ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು. ಸದ್ಯ ಟ್ಯಾಂಕರ್ ಮೂಲಕ ಎಲ್ಲಾ ಓಣಿಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಗ್ರಾಮದಲ್ಲಿ ಹಲವು ಬಾರಿ ಡಂಗೂರ ಸಾರುವ ಮೂಲಕ ಸಾರ್ವಜನಿಕರಿಗೆ ಕಾಯಿಸಿ, ಆರಿಸಿದ ನೀರು ಕುಡಿಯಬೇಕು. ಕರಿದ ಪದಾರ್ಥಗಳನ್ನು ತಿನ್ನಬಾರದು, ಬಿಸಿಯಾದ ಆಹಾರ ಸೇವಿಸಬೇಕು ಮತ್ತು ಮನೆ ಸುತ್ತಲು ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಅರಿವು ಮೂಡಿಸಲಾಗುತ್ತಿದೆ. ಗ್ರಾಮದಲ್ಲಿ ಆರೋಗ್ಯ ಇಲಾಖೆಯಿಂದ ನಿರಂತರವಾಗಿ ಚಿಕಿತ್ಸೆ ಪಡೆಯಲು ತೆರೆದ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಮತ್ತು ಸಿಬ್ಬಂದಿ ವರ್ಗ ಪ್ರತಿ ದಿನ ಕಾರ್ಯನಿರ್ವಹಿಸುತ್ತಿದ್ದಾರೆ. ಇಲ್ಲಿ ಜೂನ್ 13ರ ತನಕ ಒಟ್ಟು 34 ಜನರು ಚಿಕಿತ್ಸೆ ಪಡೆದು ಎಲ್ಲರೂ ಗುಣಮುಖರಾಗಿದ್ದಾರೆ.

ಶೂನ್ಯ ಪ್ರಕರಣಗಳು; ಗ್ರಾಮದಲ್ಲಿ ಜೂನ್ 14 ರಿಂದ ಯಾವುದೇ ವಾಂತಿ, ಭೇದಿ ಪ್ರಕರಣಗಳು ಕಂಡು ಬಂದಿರುವುದಿಲ್ಲ. ಪರಿಸ್ಥಿತಿಯು ಹತೋಟಿಗೆ ಬಂದಿದ್ದು, ಶೂನ್ಯ ರೋಗ ಲಕ್ಷಣಗಳು (ಸಹಜ ಸ್ಥಿತಿ) ಕಂಡುಬಂದಿದ್ದು ಜನರು ಆರೋಗ್ಯವಾಗಿದ್ದಾರೆ. ಗ್ರಾಮ ಪಂಚಾಯತಿ ಮಟ್ಟದ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿಯ ಕಾರ್ಯಪಡೆಯ ಸಭೆ ನಡೆಸಿ, ಶುದ್ಧ ಕುಡಿಯುವ ನೀರು ಒದಗಿಸುವದು ಮತ್ತು ಗ್ರಾಮದಲ್ಲಿ ಸ್ವಚ್ಛತೆ ಕಾಪಾಡುವದು ಮತ್ತು ಗ್ರಾಮಸ್ಥರಿಗೆ ಆರೋಗ್ಯ ಕುರಿತು ಜಾಗೃತಿ ಮೂಡಿಸಲು ಕ್ರಮ ಕೈಗೊಂಡಿದೆ.
ಗ್ರಾಮದಲ್ಲಿರುವ ಕುಡಿಯುವ ನೀರಿನ ಸ್ಥಾವರಗಳಿಂದ ಸರಬರಾಜು ಆಗುತ್ತಿರುವ ನೀರಿನ ತಪಾಸಣೆ ಪ್ರಕ್ರಿಯೆ ನಡೆಸಲಾಗುತ್ತದೆ. ಗ್ರಾಮದಲ್ಲಿ ಹೊಸದಾಗಿ ಬೋರವೆಲ್ ಕೊರೆಸಲಾಗಿದೆ. ಆರೋಗ್ಯ ಇಲಾಖೆ, ಗ್ರಾಮ ಪಂಚಾಯತಿ ಪಿಡಿಓ ಹಾಗೂ ಸಿಬ್ಬಂದಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಮತ್ತು ಪಂಚಾಯತಿ ಮಟ್ಟದ ಆರೋಗ್ಯ ಮತ್ತು ನೈರ್ಮಲ್ಯ ಕಾರ್ಯಪಡೆ ಸಮಿತಿ ಸದಸ್ಯರು ಸೇರಿ ಪ್ರತಿದಿನ ಮನೆಮನೆಗೆ ಭೇಟಿ ನೀಡಿ ಕರಪತ್ರಗಳನ್ನು ಹಂಚಿ ಕಾಯಿಸಿ ಆರಿಸಿದ ನೀರು ಕುಡಿಯುವಂತೆ ಹಾಗೂ ಆರೋಗ್ಯ ಕಾಪಾಡಿಕೊಳ್ಳುವಂತೆ ಅರಿವು ಮೂಡಿಸುತ್ತಿದ್ದಾರೆ.
ಗ್ರಾಮದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಜನರನ್ನು ಸೇರಿಸಿ ಸಹ ಆರೋಗ್ಯ ಜಾಗೃತಿ ಮೂಡಿಸಲಾಗುತ್ತಿದೆ. ಗ್ರಾಮದ ಅಂಗನವಾಡಿ ಹಾಗೂ ಶಾಲೆಗಳಿಗೆ ಗ್ರಾಮ ಪಂಚಾಯತಿ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಯು ಭೇಟಿ ನೀಡಿ ಪ್ರಾತ್ಯಕ್ಷಿಕೆ ಮೂಲಕ ಶುಚಿತ್ವದ ಬಗ್ಗೆ ತಿಳಿಸುತ್ತಿದ್ದಾರೆ.












Click it and Unblock the Notifications