ಕಾಂಗ್ರೆಸ್ ಹಣ, ಜಾತಿ, ಹೆಂಡದ ಬಲದಿಂದ ಚುನಾವಣೆ ಗೆಲ್ಲುವ ಕನಸು ಕಾಣುತ್ತಿದೆ: ಬಿಎಸ್‌ವೈ
ಕೊಪ್ಪಳ, ಅಕ್ಟೋಬರ್ 12: "ಕಾಂಗ್ರೆಸ್ ಹಣ, ಜಾತಿ, ಹೆಂಡದ ಬಲದಿಂದ ಚುನಾವಣೆ ಗೆಲ್ಲುವ ಕನಸು ಕಾಣುತ್ತಿದೆ. ಆದರೆ, ಜನ ಈ ಬಾರಿ ಕಾಂಗ್ರೆಸ್‌ಗೆ ಪಾಠ ಕಲಿಸಬೇಕಿದೆ. ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಜೋಡಿಯ ಆಟ ನಡೆಯುವುದಿಲ್ಲ. ಪಾದಯಾತ್ರೆ ಎಂದು ರಾಜ್ಯಕ್ಕೆ ರಾಹುಲ್ ಗಾಂಧಿಯನ್ನು ಕರೆತಂದಿದ್ದಾರೆ. ಈ ಪಾದಯಾತ್ರೆಯಿಂದ ನಿಮ್ಮ ಆರೋಗ್ಯ ಸುಧಾರಿಸಬಹುದು ಮತ್ತೇನು ಸಾಧನೆ ಆಗುವುದಿಲ್ಲ," ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆಯ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಕೊಪ್ಪಳದಲ್ಲಿ ನಡೆದ ಜನಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಯಡಿಯೂರಪ್ಪ, "ಪ್ರಧಾನಿ ನರೇಂದ್ರ ಮೋದಿ ಅವರ ಆಶೀರ್ವಾದಿಂದ ಬಿಜೆಪಿ ದೇಶದುದ್ದಕ್ಕೂ ಬೆಳೆಯುತ್ತಿದೆ. ಕೊಪ್ಪಳ ಜನಸಂಕಲ್ಪ ಕಾರ್ಯಕ್ರಮದಲ್ಲಿ ಈ ಜನ ಸಾಗರವನ್ನು ನೋಡಿ ಖುಷಿ ಆಗಿದೆ. ಯಾವುದೇ ಶಕ್ತಿ ದೊಡ್ಡನಗೌಡ ಪಾಟೀಲ್ ಅವರನ್ನು ಸೋಲಿಸಲು ಸಾಧ್ಯವಿಲ್ಲ. ಮುಂದಿನ ಚುನಾವಣೆಯಲ್ಲಿ ಬಿಜೆಪಿ 150 ಸೀಟು ಗೆಲ್ಲುವುದು ನಿಶ್ಚಿತ. ತುಂಬಿ ತುಳುಕುವ ಈ ಸಭೆಯನ್ನು ನೋಡಿದಾಗ ಬಿಜೆಪಿ ಗೆಲವು ನಿಶ್ಚಿತ ಎಂದು ಖುಷಿ ಹಂಚಿಕೊಂಡರು. ಜೊತೆಗೆ ಮಳೆ ಬಂದರೂ ಕಾದು ಕುಳಿತಿದ್ದೀರಿ ನಿಮಗೆ ಧನ್ಯವಾದಗಳು," ಎಂದು ನೆರೆದಿದ್ದ ಕಾರ್ಯಕರ್ತರಿಗೆ ಧನ್ಯವಾದ ತಿಳಿಸಿದರು.
ಇನ್ನು "ಮುಂದಿನ ಚುನಾವಣೆಯಲ್ಲಿ ನಾವು 150ಕ್ಕೂ ಹೆಚ್ಚು ಸೀಟ್ ಗೆಲ್ಲುತ್ತೇವೆ. ಬಿಜೆಪಿ ಅಧಿಕಾರಕ್ಕೆ ತರಲು ಕಾರ್ಯಕರ್ತರು ವಿಶ್ರಮಿಸದೆ ಕೆಲಸ ಮಾಡಬೇಕಿದೆ. ಕಾಂಗ್ರೆಸ್‌ನಿಂದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಯಾರೇ ಬಂದರೂ, ಕರ್ನಾಟಕವನ್ನು ಬಿಜೆಪಿ ಬಿಟ್ಟು ಕೊಡುವುದಿಲ್ಲ. ಬಿಜೆಪಿ ನಾಯಕರು ಮುಂದಿನ ವಿಧಾನ ಸಭಾ ಚುನಾವಣೆ ಮುಗಿಯುವರೆಗೂ ವಿಶ್ರಮಿಸುವುದಿಲ್ಲ. ಇಂದಿನ ಜನ ಸಂಕಲ್ಪ ಕಾರ್ಯಕ್ರಮಕ್ಕೆ ವರುಣ ದೇವನೂ ನಮ್ಮ ಮೇಲೆ ಕೃಪೆ ತೋರಿದ್ದಾನೆ," ಎಂದರು.

ಇನ್ನು ಜನಸಂಕಲ್ಪ ಯಾತ್ರೆಯಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, "ಕಾಂಗ್ರೆಸ್ ನಾಯಕರಿಗೆ ಮೀಸಲಾತಿ ಮತ್ತು ಎಸ್‌ಸಿ ಎಸ್‌ಟಿ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಅಂಬೇಡ್ಕರ್ ಇದ್ದಾಗ ಅವರಿಗೆ ಒಂದು ಟಿಕೆಟ್ ಕೊಡಲಿಲ್ಲ. ಕೊಟ್ಟರೂ ಅಂಬೇಡ್ಕರ್ ಅವರನ್ನು ಸೋಲಿಸಿದ್ದು ಕಾಂಗ್ರೆಸ್. ಅಂಬೇಡ್ಕರ್ ಅವರ ಶವ ಸಂಸ್ಕಾರಕ್ಕೆ ದೆಹಲಿಯಲ್ಲಿ ಅವಕಾಶ ನೀಡಲಿಲ್ಲ, ಇದು ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಮಾಡಿದ ಅನ್ಯಾಯ," ಎಂದರು.
ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆಗೆ ತಿರುಗೇಟು ನೀಡಲು ಬಿಜೆಪಿ ಜನಸಂಕಲ್ಪ ಯಾತ್ರೆ ಆರಂಭಿಸಿದೆ. ನಿನ್ನೆ ರಾಯಚೂರಿನಲ್ಲಿ ಜನ ಸಂಕಲ್ಪ ಯಾತ್ರೆ ಆರಂಭಿಸಿದ ಬಿಜೆಪಿ ಇಂದು ಕೊಪ್ಪಳದಲ್ಲಿ ಅದ್ಧೂರಿಯಾಗಿ ಬಿಜೆಪಿ ಜನಸಂಕಲ್ಪ ಯಾತ್ರೆ ನಡೆಸಿದ್ದಾರೆ. ಇಂದಿನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಸಚಿವರಾದ ಗೋವಿಂದ್ ಕಾರಜೋಳ, ಆನಂದ್ ಸಿಂಗ್, ಹಾಲಪ್ಪ ಆಚಾರ, ಶ್ರೀರಾಮುಲು, ಶಾಸಕ ಶಿವನಗೌಡ ನಾಯಕ ಭಾಗಿಯಾಗಿದ್ದರು.












Click it and Unblock the Notifications