RSS ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತೆ ಎಂದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ನೆಟ್ಟಿಗರು ಹೇಳಿದ್ದೇನು
RSS ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತೆ ಎಂದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ವಾಗ್ದಾಳಿ ನಡೆಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪ್ರಿಯಾಂಕ್ ಖರ್ಗೆ ಅವರು ಹಂಚಿಕೊಂಡಿರುವ ಬರಹ ಇದೀಗ ವೈರಲ್ ಆಗಿದೆ. ಪ್ರತಿ ಬಾರಿ ಯಾರಾದರೂ ಆರೆಸ್ಸೆಸ್ ಅನ್ನು ಪ್ರಶ್ನಿಸಿದಾಗ, ಬಿಜೆಪಿ ತನ್ನ ಸ್ಥಿಮಿತತೆಯನ್ನು ಕಳೆದುಕೊಳ್ಳುತ್ತದೆ. ಸ್ವಾತಂತ್ರ್ಯ ಹೋರಾಟಕ್ಕೆ ಯಾವುದೇ ಕೊಡುಗೆ ನೀಡದ ಸಂಘಟನೆ, ಇಂದು ರಾಷ್ಟ್ರಕ್ಕೆ ದೇಶಪ್ರೇಮದ ಪಾಠ ಹೇಳುವುದೇಕೆ ಎಂದು ಪ್ರಶ್ನಿಸಿದರೆ, ಬಿಜೆಪಿ ಸಿಟ್ಟಿನಿಂದ ಬುಸುಗುಡುತ್ತದೆ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ.
ನಾಗಪುರದಲ್ಲಿ ತ್ರಿವರ್ಣ ಧ್ವಜ ಹಾರಿಸಲು 52 ವರ್ಷಗಳೇಕೆ ಬೇಕಾಯಿತು ಎಂದು ಪ್ರಶ್ನಿಸಿದರೆ, ಬಿಜೆಪಿ ಕೋಪದಿಂದ ಬುಸುಗುಡುತ್ತದೆ. ಅವರು ನಿಜಕ್ಕೂ ಯಾವ ಸಂವಿಧಾನಕ್ಕೆ ಬದ್ಧರಾಗಿರುತ್ತಾರೆ ? ಬಾಬಾಸಾಹೇಬರು ಬರೆದ ಸಂವಿಧಾನಕ್ಕೋ, ಅಥವಾ ತಾವೇ ಬರೆಯಬೇಕಿತ್ತು ಎಂದು ಬಯಸುವ ಸಂವಿಧಾನಕ್ಕೋ ಎಂದು ಕೇಳಿದರೆ, ಬಿಜೆಪಿ ಸಿಟ್ಟಿನಿಂದ ಪೂತ್ಕರಿಸುತ್ತದೆ. ಅವರು ನೋಂದಣಿ ಮಾಡಿಕೊಳ್ಳುವುದನ್ನು, ತೆರಿಗೆ ಪಾವತಿಸುವುದನ್ನು ಏಕೆ ನಿರಾಕರಿಸುತ್ತಾರೆ ಎಂದು ಪ್ರಶ್ನಿಸಿದರೆ, ಬಿಜೆಪಿ ಸಿಟ್ಟಿನಿಂದ ಬುಸುಗುಡುತ್ತದೆ.

ಆರೆಸ್ಸೆಸ್ ತನ್ನ ಉಪದೇಶಗಳನ್ನು ಮೊದಲು ತಾನು ಅನುಸರಿಸಲಿ ಎಂದು ಕೇಳಿದರೆ, ಬಿಜೆಪಿ ಆಕ್ರೋಶದಿಂದ ಪೂತ್ಕರಿಸುತ್ತದೆ. ಬಿಜೆಪಿ ಎಂದಿಗೂ ಆರ್‌ಎಸ್‌ಎಸ್‌ಗೆ ಕೇವಲ ಮಿತ್ರನಾಗಿರಲಿಲ್ಲ; ಅದು ಎಂದಿಗೂ ಆರೆಸ್ಸೆಸ್‌ನ ಸಾಧನವಾಗಿಯೇ ಇದೆ. ಪ್ರತಿ ಬಾರಿ ಬುಸುಗುಡುವಾಗಲೂ, ಹಾವಿನ ಬಾಲ ಯಾರ ಕೈಯಲ್ಲಿದೆ ಎಂಬುದನ್ನು ಖಚಿತಪಡಿಸುತ್ತದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
RSS: ನೆಟ್ಟಿಗರು ಹೇಳಿದ್ದೇನು ?
ಇನ್ನು ಸಚಿವ ಪ್ರಿಯಾಂಕ್ ಖರ್ಗೆ ಅವರ ಬರಹಕ್ಕೆ ಹಲವು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಕೆಲವರು ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರಚಾರಕ್ಕಾಗಿ ಆರ್‌ಎಸ್‌ಎಸ್ ವಿಷಯವನ್ನು ಪದೇ ಪದೇ ಪ್ರಸ್ತಾಪಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿರುವ ಜ್ವಲಂತ ಸಮಸ್ಯೆಗಳನ್ನು ಬಿಟ್ಟು ಈ ವಿಷಯದ ಬಗ್ಗೆ ಮಾತ್ರ ಚರ್ಚೆ ಮಾಡುವ ಅವಶ್ಯಕತೆ ಇದೆಯೇ ಎಂದೂ ಕೆಲವರು ಕೇಳಿದ್ದಾರೆ. ಸ್ವಲ್ಪ ರೌಡಿಗಳ, ಡ್ರಗ್ಸ್ ಪೆಡ್ಲರ್‌ಗಳ ಬಗ್ಗೆಯೂ ಸ್ವಲ್ಪ ಗಮನ ಕೊಡಿ ಸರ್ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ಗೋವಿಂದರಾಜು ಎನ್ನುವವರು, ಅದೂ ಪ್ರಸ್ತುತ ನಿಜವಾಗಿದೆ. RSS ಗಲಿಬಿಲಿಗೊಂಡು, ವಿಚಲಿತವಾಗಿ ಬಿಜೆಪಿ ಹಾಗೂ ಕಾರ್ಯಕರ್ತರನ್ನು ಬಿಟ್ಟಿದೆ. RSS ಹಾಗೂ ಬಿಜೆಪಿ ನಡೆ ನೋಡುತ್ತಿದ್ದರೆ ಮುಂದೆ ದೇಶ ದಿವಾಳಿ ಸಾಲಿನಲ್ಲಿ ಸಾಗುವುದು ನಿಶ್ಚಿತ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮಾನ್ಯ ಗೃಹ ಮಂತ್ರಿಗಳು ಮೊದಲು ಕರ್ನಾಟಕದ ಬಗ್ಗೆ ಮಾತನಾಡಬೇಕು. ಕರ್ನಾಟಕದ ಅಭಿರುದ್ಧಿ ಕಡೆ ಸ್ವಲ್ಪ ಗಮನಕೊಡಿ ಎಂದಿದ್ದರೆ, ಇನ್ನೂ ಕೆಲವರು ಆ ಹಾವಿನ ಹಲ್ಲು ಕಿತ್ತು ಬಿಡಿ ಸಾಹೇಬ್ರೆ ಎಂದಿದ್ದಾರೆ. ಒಟ್ಟಾರೆ ಪ್ರಿಯಾಂಕ್ ಖರ್ಗೆ ಅವರ ಪೋಸ್ಟ್‌ಗೆ ಸೋಶಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.












Click it and Unblock the Notifications