ಹನುಮ ಭಕ್ತನ ಸಾಹಸ: 101 ಕೆಜಿ ಜೋಳದ ಚೀಲ ಹೊತ್ತು ಅಂಜನಾದ್ರಿ ಬೆಟ್ಟ ಹತ್ತಿದ 46ರ ರಾಯಪ್ಪ
ಕೊಪ್ಪಳ, ಮಾರ್ಚ್ 30: ವಾಯುಪುತ್ರ ಹನುಮಂತನ ಜನ್ಮಸ್ಥಳ ಎಂದು ಖ್ಯಾತಿ ಪಡೆದಿರುವ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಅಂಜನಾದ್ರಿ ಬೆಟ್ಟದಲ್ಲಿ ರಾಮನವಮಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ರಾಮನವಮಿಯ ಶುಭ ದಿನದಂದು ಅಂಜನಾದ್ರಿ ಬೆಟ್ಟದಲ್ಲಿ ಹನುಮನ ಭಕ್ತರೊಬ್ಬರು ವಿಶೇಷ ಸಾಹಸ ಮೆರೆದಿದ್ದಾರೆ.
ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕು ಹುನ್ನೂರು ಗ್ರಾಮದ (46) ವಯಸ್ಸಿನ ರಾಯಪ್ಪ ದಪೇದಾರ್ ಎನ್ನುವವರು ಬರೋಬ್ಬರಿ 101 ಕೆ.ಜಿ ತೂಕದ ಜೋಳದ ಚೀಲ ಹೊತ್ತು ಅಂಜನಾದ್ರಿ ಬೆಟ್ಟ ಹತ್ತಿದ್ದಾರೆ. 1 ಗಂಟೆ 10 ನಿಮಿಷದಲ್ಲಿ ಹನುಮನ ಭಕ್ತ ರಾಯಪ್ಪ ದಪೇದಾರ್ 575 ಮೆಟ್ಟಿಲುಗಳನ್ನ ಹತ್ತಿ ಸಾಹಸ ಮೆರೆದಿದ್ದಾರೆ.

ರಾಮನವಮಿಯ ದಿನದಂದು ರಾಯಪ್ಪ ದಪೇದಾರ್ ಈ ವಿಶೇಷ ಸಾಹಸ ಮಾಡಿದ್ದು, ಜೈ ಶ್ರೀರಾಮ್ ಎಂದು ಬರೆದಿರುವ 101 ಕೆ.ಜಿ ತೂಕದ ಜೋಳದ ಚೀಲ ಹೊತ್ತು ಒಂದೊಂದೆ ಮೆಟ್ಟಿಲುಗಳನ್ನು ಹತ್ತುತ್ತಿರುವ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸಾಮಾನ್ಯವಾಗಿ ಅಂಜನಾದ್ರಿ ಬೆಟ್ಟ 575 ಮೆಟ್ಟಿಲುಗಳನ್ನು ಹತ್ತಿ ದೇವರ ದರ್ಶನ ಪಡೆಯುವುದರಲ್ಲಿ ಕೆಲವರು ಬಸವಳಿಯುತ್ತಾರೆ. ಅಂತಹದಲ್ಲಿ (46) ವಯಸ್ಸಿನ ರಾಯಪ್ಪ ದಪೇದಾರ್ ಅವರು ಈ ಬೇಸಿಗೆಯ ಬಿರು ಬಿಸಿಲಿನಲ್ಲಿ 101 ಕೆ.ಜಿ ತೂಕದ ಭಾರವನ್ನು ತಲೆ ಮೇಲೆ ಹೊತ್ತು 575 ಮೆಟ್ಟಿಲುಗಳನ್ನು ಹತ್ತಿ ದೇವರ ದರ್ಶನ ಪಡೆದಿರುವುದು ಹನುಮಂತ-ರಾಮರ ಭಕ್ತರ ಮೆಚ್ಚುಗೆಗೆ ಪಾತ್ರವಾಗಿದೆ. ರಾಯಪ್ಪ ದಪೇದಾರ್ ಅವರ ಸಾಹಸಕ್ಕೆ ದೇವಾಲಯದ ಭಕ್ತರು, ದೇವಾಲಯದ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅನೇಕರು ಅಚ್ಚರಿಗೊಂಡಿದ್ದಾರೆ.

ಹಿಂದೂ ಧರ್ಮದಲ್ಲಿ ಶ್ರೀರಾಮನವಮಿ ಎಂದರೆ ವಿಶೇಷವಾದ ಹಬ್ಬದ ಸಂಭ್ರಮ. ಚೈತ್ರ ಮಾಸದ ಒಂಭತ್ತನೇ ದಿನ, ಅಂದರೆ ಯುಗಾದಿ ಹಬ್ಬದ ಬಳಿಕ ಆರಂಭವಾದ ಹೊಸ ವರ್ಷದ ಮೊದಲ ತಿಂಗಳಿನಲ್ಲಿ ಬರುವ ಹಬ್ಬ. ಮಹಾವಿಷ್ಣುವಿನ ಏಳನೇಯ ಅವತಾರವಾದ ಶ್ರೀರಾಮನು ಅಯ್ಯೋಧ್ಯಯಲ್ಲಿ ಜನಿಸಿದ ದಿನವನ್ನು ಶ್ರೀರಾಮನವಮಿ ಎಂದು ಆಚರಿಸಲಾಗುತ್ತದೆ. ಈ ಬಾರಿ ರಾಮನವಮಿಯನ್ನು ಮಾರ್ಚ್ 30 ಗುರುವಾರದಂದು ಆಚರಿಸಲಾಗುತ್ತದೆ.












Click it and Unblock the Notifications