ಕೊಪ್ಪಳ: 100 ಆಹಾರ ಸಂಸ್ಕರಣಾ ಘಟಕ ಸ್ಥಾಪನೆ, ಉತ್ತಮ ಬೆಲೆ ಜೊತೆಗೆ ಮಾರುಕಟ್ಟೆ ವ್ಯವಸ್ಥೆ: ಸರ್ಕಾರದ ಭರವಸೆ
ಕೊಪ್ಪಳ ಜಿಲ್ಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮ್ಮೇಳನ ನಡೆಯಿತು. ಜಿಲ್ಲೆಯಲ್ಲಿ 100 ಆಹಾರ ಸಂಸ್ಕರಣಾ ಘಟಕ ನಿರ್ಮಾಣ ಸೇರಿದಂತೆ ಯೋಜನೆಗಳ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ವಿವರಿಸಿದರು.
ಕೊಪ್ಪಳ, ಮಾರ್ಚ್ 14: ಕೊಪ್ಪಳ ಜಿಲ್ಲೆಯಲ್ಲಿ 100 ಆಹಾರ ಸಂಸ್ಕರಣಾ ಘಟಕ ನಿರ್ಮಾಣ ಮಾಡಲಾಗುವುದು. ಜೊತೆಗೆ ಕೃಷಿಕರಿಗೆ ಅವರು ಬೆಳೆದ ಬೆಳೆಗಳು ಸ್ಥಳೀಯವಾಗಿಯೇ ಸಂಸ್ಕರಣಗೊಂಡು ಉತ್ತಮ ಬೆಲೆಗೆ ಬ್ರ್ಯಾಂಡ್ ನೇಮ್ ಇರುವ ಮಾರುಕಟ್ಟೆ ಸರಬರಾಜುಗೊಳಿಸಲು ಅನುಕೂಲ ಮಾಡಿಕೊಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮಂಗಳವಾರ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯ ಏತನೀರಾವರಿಯನ್ನು ನಾರಾಯಣಪುರ ಯೋಜನೆಗೆ ಜೋಡಿಸಿ, ಗೋದಾವರಿಯ 1.8 ಟಿಎಂಸಿ ನೀರನ್ನು ಇಲ್ಲಿನ ಏತನೀರಾವರಿಗೆ ನೀಡಲಾಗಿದೆ. ಸ್ಕೀಂ ಬಿ ಯೋಜನೆಯೆಂದು ವಿಲೇ ಇಡಲಾಗಿತ್ತು. ನಾನು ನೀರಾವರಿ ಸಚಿವನಾಗಿದ್ದಾಗ, ಸುಮಾರು 9ನೀರಾವರಿ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಹಿಂದಿನ ಸರ್ಕಾರಗಳ ಅವಧಿಯಲ್ಲಿ ಸಾಕಾರಗೊಳ್ಳದಿದ್ದ ಕೊಪ್ಪಳ ಏತನೀರಾವರಿ ಯೋಜನೆಗಳಿಗೆ ನಮ್ಮ ಸರ್ಕಾರದ ಅವಧಿಯಲ್ಲಿ ಕಾಯಕಲ್ಪ ಕಾಣುತ್ತಿದೆ ಎಂದು ಅವರು ಹೇಳಿಕೊಂಡರು.

ಇನ್ನು ಜಿಲ್ಲೆಯ ಗಂಗಾವತಿ ತಾಲ್ಲೂಕು ವ್ಯಾಪ್ತಿಯಲ್ಲಿನ 40ಕ್ಕೂ ಹೆಚ್ಚು ಕೆರೆಗಳಿಗೆ ನೀರು ತುಂಬಿಸಲು ಕ್ರಮ ಕೈಗೊಳ್ಳಲಾಗಿದೆ. ಮುಳವಾಡಿ, ಚಿಮ್ಮಲಗಿ, ಗುತ್ತಿಬಸವಣ್ಣ ಏತನೀರಾವರಿ ಯೋಜನೆಗಳಿಗೆ ಕಾಯಕಲ್ಪ ನೀಡಲಾಗುತ್ತಿದೆ. ತುಂಗಭದ್ರಾ ಯೋಜನೆ, ತುಂಗಾ ಮೇಲ್ದಂಡೆ ಯೋಜನೆ, ಸಿಂಗಟಾಲೂರು ಯೋಜನೆ, ಎನ್ ಎಲ್ ಬಿಸಿ ಯೋಜನೆಗಳಿಂದ ಒಟ್ಟು ಸುಮಾರು ಏಳು ಲಕ್ಷ ಎಕರೆಗೆ ನೀರಾವರಿ ಸೌಲಭ್ಯ ಸಿಗುತ್ತಿದೆ ಎಂದು ತಿಳಿಸಿದರು.
ಜಿಲ್ಲೆ ರೈತರಿಗೆ ಕಿಸಾನ್ ಸಮ್ಮಾನ್ ನಿಧಿಯಡಿ 456 ಕೋಟಿ ರೂ. ವಿತರಣೆ
ಸಮಸ್ಯೆ ಜತೆ ಜೀವಿಸುವ ಜನರಲ್ಲಿಗೆ ಸರ್ಕಾರದ ಕಾರ್ಯಕ್ರಮ ತಲುಪಬೇಕು. ಬಿಜೆಪಿಯಿಂದ ಮಧ್ಯವರ್ತಿಗಳ ಹಾವಳಿಯಿಲ್ಲದೇ ಸರ್ಕಾರದ ಫಲಾನುಭವಿಗಳಿಗೆ ನೇರವಾಗಿ ಡಿಬಿಟಿ ಮೂಲಕ ಆರ್ಥಿಕ ಸಹಾಯ ತಲುಪುತ್ತಿದೆ. ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 53.43 ಲಕ್ಷ ರೈತರಿಗೆ 16 ಸಾವಿರ ಕೋಟಿ ರೂ. ನೀಡಲಾಗಿದೆ. ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಕೊಪ್ಪಳ ಜಿಲ್ಲೆಯಲ್ಲಿ 1.57 ಲಕ್ಷ ರೈತರಿಗೆ 456 ಕೋಟಿ ರೂ. ಪಾವತಿಯಾಗಿದೆ.
ರೈತರಿಗೆ ಜೀವವಿಮೆ ಸೌಲಭ್ಯ ಜಾರಿಗೆ ತರಲಾಗಿದೆ. 180 ಕೋಟಿ ರೂಪಾಯಿಯ ಪ್ರೀಮಿಯಂ ಹಣವನ್ನು ಸರ್ಕಾರ ಭರಿಸಲಿದೆ. ರೈತರ ಉತ್ತಮ ಆರೋಗ್ಯ ಚಿಕಿತ್ಸೆಗೆ ಯಶಸ್ವಿನಿ ಯೋಜನೆ ಪುನರಾರಂಭಿಸಲಾಗಿದೆ. ಆವರ್ತ ನಿಧಿಯನ್ನು 3600, ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ. ರೈತವಿದ್ಯಾನಿಧಿ ಯೋಜನೆಯಡಿ ರೈತರ ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡಲಾಗುತ್ತಿದೆ. ದೇಶದಲ್ಲಿ ಕೃಷಿ ಕ್ಷೇತ್ರ ಬೆಳೆದಿದ್ದರೂ, ರೈತ ಅಭಿವೃದ್ಧಿ ಹೊಂದಿಲ್ಲ. ಆದಕಾರಣ, ನಮ್ಮ ಸರ್ಕಾರದ ಕಾರ್ಯಕ್ರಮಗಳು ರೈತನ ಸುತ್ತ ರೂಪಿಸಲಾಗಿದೆ. ರೈತರ ಅಭ್ಯುದಯಕ್ಕಾಗಿ ಬಡ್ಡಿ ರಹಿತ ಸಾಲವನ್ನು 3 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದು ಸರ್ಕಾರದ ಸಾಧನೆ ಕುರಿತು ತಿಳಿಸಿದೆ.

ಲಕ್ಷ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಪ್ರಯೋಜನ
ರಾಜ್ಯದ ಮಹಿಳೆಯರು ಮತ್ತು ಯುವಕರ ಸ್ವ ಸಹಾಯ ಸಂಘಗಳಿಗೆ ಆರ್ಥಿಕ ಸಹಾಯ ನೀಡಲಾಗುತ್ತಿದೆ. ಉತ್ಪನ್ನಗಳ ಯೋಜನೆ, ತರಬೇತಿ, ಮಾರುಕಟ್ಟೆ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಸರ್ಕಾರಿ ಕಾಲೇಜುಗಳಲ್ಲಿ ಎಲ್ಲ ವಿದ್ಯಾರ್ಥಿಗಳಿಗೂ ಪಿಯುಸಿ ಯಿಂದ ಪದವಿವರೆಗೆ ಉಚಿತ ಶಿಕ್ಷಣ ನೀಡಲು ಕಾರ್ಯಕ್ರಮ ರೂಪಿಸಲಿದ್ದೇವೆ. ಇದರಿಂದ ರಾಜ್ಯದ ಸುಮಾರು 8 ಲಕ್ಷ ವಿದ್ಯಾರ್ಥಿಗಳಿಗೆ ಲಾಭವಾಗಲಿದೆ. ಉಚಿತ ಬಸ್ ಪಾಸ್ ವಿತರಣೆಯು ನಡೆಯುತ್ತಿದೆ ಎಂದು ಅವರು ತಿಳಿಸಿದರು.
ಅಷ್ಟೇ ಸಲ್ಲದೇ ಜನರ ಸಮಸ್ಯೆಗಳಿಗೆ ಸ್ಪಂದಿಸಿರುವ ರಾಜ್ಯ ಬಿಜೆಪಿ ಸರ್ಕಾರ, ಸಾಮಾಜಿಕ ನ್ಯಾಯ ಕೇವಲ ಬಾಯಿ ಮಾತಿನಲ್ಲಿತ್ತು. ಆದರೀಗ ಎಸ್‌ಸಿ, ಎಸ್ ಟಿ ಮೀಸಲಾತಿ ಏರಿಸಲಾಗಿದೆ. ದಲಿತ ಸಮುದಾಯ ಅಭಿವೃದ್ಧಿ ಕ್ರಮ ಕೈಗೊಳ್ಳಲಾಗುತ್ತಿದೆ. ಹಿಂದುಳಿದ ವರ್ಗದವರು, ಕುಶಲಕರ್ಮಿಗಳು ನೆರವಾಗಿದ್ದೇವೆ. 350 ಕೋಟಿ ರೂ. ವೆಚ್ಚದಲ್ಲಿ ಕುರಿಗಾಹಿಗಳ ಸಂಘಕ್ಕೆ 20 ಕುರಿ 1 ಮೇಕೆ ನೀಡುವ ಜೊತೆಗೆ ಮನೆ ಮತ್ತುಶೆಡ್ ಗಳ ನಿರ್ಮಾಣಕ್ಕೆ ಸಹಾಯ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.
ಕಾರ್ಯಕ್ರಮದಲ್ಲಿ ಸಚಿವರಾದ ಆನಂದ್ ಸಿಂಗ್,ಮುನಿರತ್ನ, ಹಾಲಪ್ಪ ಆಚಾರ್, ಶಾಸಕರಾದ ಪರಣ್ಣ ಮುನವಳ್ಳಿ ಬಸವರಾಜ ದಢೇಸಗೂರು ಮತ್ತಿತರರು ಉಪಸ್ಥಿತರಿದ್ದರು.











Click it and Unblock the Notifications