ಲಾಕ್ ಡೌನ್ ವಿಸ್ತರಣೆ ಮಾಡಿ; ಕೆಲವು ವಿನಾಯಿತಿ ನೀಡಿದ ಮಮತಾ ಬ್ಯಾನರ್ಜಿ
ಕೋಲ್ಕತ್ತಾ, ಮೇ 18 : ಕೊರೊನಾ ಹರಡದಂತೆ ಜಾರಿಗೊಳಿಸುವ ಲಾಕ್ ಡೌನ್ ಅನ್ನು ಪಶ್ಚಿಮ ಬಂಗಾಳದಲ್ಲಿ ಮೇ 31ರ ತನಕ ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ. ರಾಜ್ಯದಲ್ಲಿ ಇದುವರೆಗೆ ದಾಖಲಾದ ಕೊರೊನಾ ಪ್ರಕರಣಗಳ ಸಂಖ್ಯೆ 2677.
ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಲಾಕ್ ಡೌನ್ ವಿಸ್ತರಣೆ ಮಾಡಲಾಗಿದೆ ಎಂದು ಹೇಳಿದರು. ಹಾಗೆಯೇ ಲಾಕ್ ಡೌನ್ ನಿಯಮದಲ್ಲಿ ಕೆಲವೊಂದು ವಿನಾಯಿತಿಗಳನ್ನು ನೀಡಲಾಗಿದೆ ಎಂದರು.
ರಾಜ್ಯದಲ್ಲಿ ಖಾಸಗಿ ಕಂಪನಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಒಂದು ವೇಳೆ ಖಾಸಗಿ ಕಂಪನಿಗಳು ಮಾಲ್‌ನಲ್ಲಿ ಕಚೇರಿ ಹೊಂದಿದ್ದರೂ ಶೇ 50ರಷ್ಟು ಸಿಬ್ಬಂದಿ ಜೊತೆ ಕೆಲಸ ಮಾಡಬಹುದು. ಒಂದು ದಿನ ಶೇ 50 ಮತ್ತೊಂದು ದಿನ ಉಳಿದ ಐವತ್ತರಷ್ಟು ಸಿಬ್ಬಂದಿ ಕೆಲಸ ಮಾಡಬೇಕು.

ಸಲೂನ್‌ಗಳನ್ನು ತೆರೆಯಲು ಸಹ ಅನುಮತಿ ನೀಡಲಾಗಿದೆ. ಆರು ಜನರಿಗೆ ಕಟಿಂಗ್, ಶೇವಿಂಗ್ ಮಾಡಿದ ಬಳಿಕ ಉಪಕರಣಗಳನ್ನು ಸ್ಯಾನಿಟೈಸ್ ಮಾಡಬೇಕು ಎಂದು ಷರತ್ತಿ ವಿಧಿಸಲಾಗಿದೆ. ಕ್ರೀಡಾ ಚಟುವಟಿಕೆ ಆರಂಭಿಸಲು ಅನುಮತಿ ನೀಡಲಾಗಿದೆ. ಆದರೆ, ಜನರು ಸೇರುವಂತಿಲ್ಲ.
ಹೋಟೆಲ್‌ಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಆದರೆ, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಕಡ್ಡಾಯವಾಗಿದೆ. ಅಂತರರಾಜ್ಯ ಬಸ್‌ಗಳ ಸಂಚಾರಕ್ಕೂ ಅವಕಾಶವನ್ನು ನೀಡಲಾಗಿದೆ.
"ಪಶ್ಚಿಮ ಬಂಗಾಳದಲ್ಲಿ ನಾವು ಕರ್ಫ್ಯೂ ಜಾರಿಗೊಳಿಸುತ್ತಿಲ್ಲ. ಆದರೆ, ಲಾಕ್ ಡೌನ್ ಮೇ 31ರ ತನಕ ಜಾರಿಯಲ್ಲಿ ಇರುತ್ತದೆ. ಕೆಲವು ವಿನಾಯಿತಿಗಳು ಸಹ ಸಿಗಲಿವೆ" ಎಂದು ಮಮತಾ ಬ್ಯಾನರ್ಜಿ ಹೇಳಿದರು.












Click it and Unblock the Notifications