Breaking: ಅರ್ಪಿತಾ ಮುಖರ್ಜಿ ಮನೆಯಿಂದ ಒಟ್ಟು 50 ಕೋಟಿ ರೂ.ವಶಕ್ಕೆ
ಕೋಲ್ಕತ್ತಾ, ಜುಲೈ 29; ಬಂಧಿತ ಪಶ್ಚಿಮ ಬಂಗಾಳ ಸಚಿವ ಪಾರ್ಥ ಚಟರ್ಜಿ ಅವರ ಆಪ್ತ ಸಹಾಯಕಿ ಅರ್ಪಿತಾ ಮುಖರ್ಜಿ ಅವರ ಎರಡನೇ ಫ್ಲಾಟ್‌ನಿಂದ ಸುಮಾರು 29 ಕೋಟಿ ರೂಪಾಯಿ ನಗದು ಮತ್ತು ಐದು ಕಿಲೋಗ್ರಾಂಗಳಷ್ಟು ಚಿನ್ನಾಭರಣಗಳನ್ನು ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ ದಾಳಿಯಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದರು.
ಕೋಲ್ಕತ್ತಾದ ಬೆಲ್‌ಘಾರಿಯಾ ಪ್ರದೇಶದಲ್ಲಿರುವ ಅರ್ಪಿತಾ ಮುಖರ್ಜಿ ಅವರ ಮನೆಯಿಂದ ತನಿಖಾ ಸಂಸ್ಥೆ ಅಧಿಕಾರಿಗಳು 18 ಗಂಟೆಗಳ ಸುದೀರ್ಘ ದಾಳಿಯನ್ನು ಮುಗಿಸಿದ ನಂತರ 10 ಟ್ರಂಕ್‌ಗಳೊಂದಿಗೆ ಇಂದು ಮುಂಜಾನೆ ವಾಪಸ್ ತೆರಳಿದರು.
ಅರ್ಪಿತಾ ಮುಖರ್ಜಿ ಅವರ ಎರಡನೇ ಫ್ಲಾಟ್‌ನಿಂದ ವಶಪಡಿಸಿಕೊಂಡ ನಿಖರವಾದ ಹಣವನ್ನು ತಿಳಿಯಲು ಇಡಿ ಅಧಿಕಾರಿಗಳು ಮೂರು ನೋಟು ಎಣಿಕೆ ಯಂತ್ರಗಳನ್ನು ಬಳಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅವರ ಮನೆಯಿಂದ ಬಹಳಷ್ಟು ಹಣವನ್ನು ವಶಪಡಿಸಿಕೊಂಡ ನಂತರ ಪಾರ್ಥ ಚಟರ್ಜಿ ಮತ್ತು ಅರ್ಪಿತಾ ಮುಖರ್ಜಿ ಅವರನ್ನು ಜುಲೈ 23 ರಂದು ಬಂಧಿಸಲಾಗಿದೆ. ಈ ದಾಳಿಯ ವೇಳೆ ತನಿಖಾ ಸಂಸ್ಥೆ ಅಧಿಕಾರಿಗಳು ಮುಖರ್ಜಿ ಅವರ ಇನ್ನೊಂದು ಫ್ಲಾಟ್‌ನಿಂದ 21 ಕೋಟಿ ನಗದು ಮತ್ತು 2 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಕಡ್ಡಿಗಳನ್ನು ವಶಪಡಿಸಿಕೊಂಡಿದ್ದರು.
ಸುಮಾರು 40 ಪುಟಗಳ ನೋಟುಗಳ ಡೈರಿಯನ್ನು ಸಹ ಅವರು ವಶಪಡಿಸಿಕೊಂಡಿದ್ದರು. ಇದುವರೆಗೆ ಅರ್ಪಿತಾ ಮುಖರ್ಜಿಯವರ ಎರಡು ಮನೆಗಳಿಂದ 50 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ. ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಪರಿಶೀಲನೆ ನಡೆಸಲಾಗುತ್ತಿದೆ.
ರಾಜ್ಯದಲ್ಲಿ ಶಾಲಾ ಉದ್ಯೋಗ ಹಗರಣಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ತನಿಖೆಯ ಭಾಗವಾಗಿ ಈ ದಾಳಿಗಳನ್ನು ನಡೆಸಲಾಗಿದೆ. ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸಂಪುಟದ ಹಿರಿಯ ಸಚಿವ ಮತ್ತು ಅವರ ಆಪ್ತ ಸಹಾಯಕ ಪಾರ್ಥ ಚಟರ್ಜಿ ಅವರು ಶಿಕ್ಷಣ ಸಚಿವರಾಗಿದ್ದಾಗ ಸರ್ಕಾರಿ ಶಾಲೆಗಳಲ್ಲಿ ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿಗಳ ಅಕ್ರಮ ನೇಮಕಾತಿಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಹಣವನ್ನು ವರ್ಗಾವಣೆಗಾಗಿ ಮತ್ತು ಕಾಲೇಜುಗಳಿಗೆ ಮಾನ್ಯತೆ ನೀಡಲು ಪಡೆದ ಕಿಕ್‌ಬ್ಯಾಕ್ ಎಂದು ಅರ್ಪಿತಾ ಮುಖರ್ಜಿ ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.
"ಪಾರ್ಥ ಚಟರ್ಜಿ ನನ್ನ ಮನೆ ಮತ್ತು ಇನ್ನೊಬ್ಬ ಮಹಿಳೆಯ ಮನೆಯನ್ನು ಮಿನಿ ಬ್ಯಾಂಕ್ ಆಗಿ ಬಳಸಿಕೊಂಡಿದ್ದಾನೆ. ಆ ಮಹಿಳೆ ಕೂಡ ಆತನ ಆಪ್ತ ಸ್ನೇಹಿತೆ" ಎಂದು ಅರ್ಪಿತಾ ಮುಖರ್ಜಿ ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ.
ಇನ್ನು ಇದೇ ಹಗರಣದಲ್ಲಿ ತನಿಖಾ ಸಂಸ್ಥೆಯು ಪಶ್ಚಿಮ ಬಂಗಾಳದ ಪ್ರೌಢ ಶಿಕ್ಷಣ ಮಂಡಳಿಯ ಮಾಜಿ ಅಧ್ಯಕ್ಷ ತೃಣಮೂಲ ಕಾಂಗ್ರೆಸ್ ಶಾಸಕ ಮಾಣಿಕ್ ಭಟ್ಟಾಚಾರ್ಯ ಅವರನ್ನೂ ಪ್ರಶ್ನಿಸಿದೆ.
ಪಾರ್ಥ ಚಟರ್ಜಿಯವರ ಬಂಧನದ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಾವು ಭ್ರಷ್ಟಾಚಾರವನ್ನು ಬೆಂಬಲಿಸುವುದಿಲ್ಲ ಮತ್ತು ಬಂಧಿತ ಸಚಿವರು ತಪ್ಪಿತಸ್ಥರೆಂದು ಸಾಬೀತುಪಡಿಸಿದರೆ ಅವರಿಗೆ ಶಿಕ್ಷೆಯಾಗಬೇಕು ಎಂದು ಹೇಳಿದರು.












Click it and Unblock the Notifications