ಕೋಲ್ಕತ್ತಾದಲ್ಲಿ ಲಾಕ್ ಡೌನ್ ದಿನ ವಿಮಾನ ಹಾರಾಟ ಬಂದ್
ಕೋಲ್ಕತ್ತಾ, ಜುಲೈ 30 : ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತಾದ ವಿಮಾನ ನಿಲ್ದಾಣದಿಂದ ವಿಮಾನ ಸೇವೆ ಲಾಕ್ ಡೌನ್ ದಿನಗಳಲ್ಲಿ ಇರುವುದಿಲ್ಲ. ಆಗಸ್ಟ್‌ನಲ್ಲಿ 7 ದಿನಗಳ ಲಾಕ್ ಡೌನ್ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಕೊರೊನಾ ವೈರಸ್ ಸೋಂಕು ಹರಡುವಿಕೆ ತಡೆಯಲು ಆಗಸ್ಟ್‌ನಲ್ಲಿ ಏಳು ದಿನಗಳ ಲಾಕ್ ಡೌನ್ ಘೋಷಣೆ ಮಾಡಲಿದೆ. ವಾರಾಂತ್ಯದಲ್ಲಿ ಈ ಲಾಕ್ ಡೌನ್ ಜಾರಿಗೆ ಬರುವ ಸಾಧ್ಯತೆ ಇದೆ.
ಲಾಕ್ ಡೌನ್ ಜಾರಿಯಲ್ಲಿರುವ ದಿನದಲ್ಲಿ ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ವಿಮಾನ ನಿಲ್ದಾಣ ಕಾರ್ಯಾಚರಣೆ ನಡೆಸುವುದಿಲ್ಲ. ಟಿಕೆಟ್ ಬುಕ್ ಮಾಡಿರುವ ಪ್ರಯಾಣಿಕರು ವಿಮಾನಯಾನ ಸಂಸ್ಥೆಗಳನ್ನು ಸಂಪರ್ಕಿಸಬೇಕು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಲಾಕ್ ಡೌನ್ ದಿನಾಂಕ: ಪಶ್ಚಿಮ ಬಂಗಾಳ ಸರ್ಕಾರದ ಮಾಹಿತಿಯಂತೆ 5, 8,16,17, 23, 24 ಮತ್ತು 31ರಂದು ಲಾಕ್ ಡೌನ್ ಜಾರಿಯಲ್ಲಿರುತ್ತದೆ. ಕಂಟೈನ್ಮೆಂಟ್ ಪ್ರದೇಶಗಳಲ್ಲಿ ಆಗಸ್ಟ್ 31ರ ತನಕ ಲಾಕ್ ಡೌನ್ ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಪಶ್ಚಿಮ ಬಂಗಾಳ ಸರ್ಕಾರದ ಮನವಿಯಂತೆ ಕೇಂದ್ರ ವಿಮಾನಯಾನ ಸಚಿವಾಲಯ ಕೋವಿಡ್ ಸೋಂಕು ಹೆಚ್ಚಿರುವ ದೆಹಲಿ, ಮುಂಬೈ, ಪುಣೆ, ಚೆನ್ನೈ, ನಾಗ್ಪುರ ಮತ್ತು ಅಹಮದಾಬಾದ್‌ನಿಂದ ಕೋಲ್ಕತ್ತಾಗೆ ಜುಲೈ 31ರ ತನಕ ವಿಮಾನ ಹಾರಾಟ ರದ್ದುಗೊಳಿಸಿದೆ.
ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 65,258ಕ್ಕೆ ಏರಿಕೆಯಾಗಿದೆ. 1,490 ಜನರು ಇದುವರೆಗೂ ಮೃತಪಟ್ಟಿದ್ದಾರೆ. ಕಂಟೈನ್ಮೆಂಟ್ ಝೋನ್‌ಗಳಲ್ಲಿ ಲಾಕ್ ಡೌನ್ ನಿಯಮ ಕಡ್ಡಾಯವಾಗಿ ಪಾಲಿಸಬೇಕು ಎಂದು ಸರ್ಕಾರ ಹೇಳಿದೆ.












Click it and Unblock the Notifications