ಪಶ್ಚಿಮ ಬಂಗಾಳದ ಹೆಸರು ಬದಲಾವಣೆಗಾಗಿ ಮೋದಿಗೆ ದೀದಿ ಪತ್ರ
ಕೋಲ್ಕತ್ತಾ, ಜುಲೈ 03: ಕಳೆದ ಜುಲೈನಲ್ಲಿ ಪಶ್ಚಿಮ ಬಂಗಾಳದ ಹೆಸರನ್ನು ಬಾಂಗ್ಲಾ ಎಂದು ಬದಲಾಯಿಸಲು ಪಶ್ಚಿಮ ಬಂಗಾಳ ವಿಧಾನಸಭೆ ಅಧಿವೇಶನದಲ್ಲಿ ಮಂಡಿಸಲಾಗಿದ್ದ ಮಸೂದೆಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿಲ್ಲ ಎಂಬುದು ತಿಳಿಯುತ್ತಿದ್ದಂತೆಯೇ ಈ ಕುರಿತು ಮಮತಾ ಬ್ಯಾನರ್ಜಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ರಾಜ್ಯದ ಹೆಸರನ್ನು ಬಾಂಗ್ಲಾ ಎಂದು ಬದಲಿಸುವ ಬಗ್ಗೆ ಮಸೂದೆ ಮಂಡನೆಯಾಗಿತ್ತು. ಆದರೆ ಈ ಕುರಿತು ತಾನಿನ್ನೂ ಒಪ್ಪಿಗೆ ಸೂಚಿಸಿಲ್ಲ ಎಂದು ಕೇಂದ್ರ ಸರ್ಕಾರ ರಾಜ್ಯ ಸಭೆಗೆ ಸ್ಪಷ್ಟಪಡಿಸಿದೆ.
"ರಾಜ್ಯದ ಹೆಸರನ್ನು ಬದಲಿಸುವುದ ಎಂದರೆ ಅದಕ್ಕೆ ಸಾಂವಿಧಾನಿಕ ತಿದ್ದುಪಡಿಯಾಗಬೇಕು. ಹಾಗೂ ಹೆಸರನ್ನುಬದಲಾಯಿಸಲು ಸಕಾರಣವಿರಬೇಕು" ಎಂದು ಕೇಂದ್ರ ಸರ್ಕಾರ ಹೇಳಿದೆ.

ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಮತಾ ಬ್ಯಾನರ್ಜಿ ಅವರು ಪತ್ರವೊಂದನ್ನು ಬರೆದಿದ್ದು, "ಬಾಂಗ್ಲಾ ಎಂಬ ಪದವನ್ನು ಹಿಂದಿ,ಬೆಂಗಾಲಿ ಮತ್ತು ಇಂಗ್ಲಿಷ್ ಮೂರೂ ಭಾಷೆಗಳನ್ನೂ ಬಳಸಲಾಗುತ್ತದೆ. ಆದ್ದರಿದ ಅದರ ಹೆಸರನ್ನು ಬದಲಿಸಬೇಕು" ಎಂದು ದೀದಿ ಕೋರಿದ್ದರು. ಕಳೆದ ವರ್ಷವೇ ಗೃಹ ಸಚಿವಾಲಯಕ್ಕೆ ಈ ಬಗ್ಗೆ ಪ್ರಸ್ತಾಪ ಸಲ್ಲಿಸಲಾಗಿತ್ತು.












Click it and Unblock the Notifications