ಇಂಗ್ಲಿಷ್ ನಲ್ಲಿ ಫೇಲ್; ಅವರೇ ಈಗ ಇಂಗ್ಲಿಷ್ ಮಾಸ್ಟರ್!
ಕೋಲಾರ, ಆಗಸ್ಟ್ 20: ಇಂಗ್ಲಿಷ್ ಭಾಷೆ ಜಾಗತಿಕ ಭಾಷೆಯಾಗಿ ಹೆಗ್ಗಳಿಕೆ ಪಡೆದಿದೆ. ಆದರೆ ಅದೆಷ್ಟೋ ಜನರಿಗೆ ಇಂಗ್ಲಿಷ್ ಕಬ್ಬಿಣದ ಕಡೆಲೆಯೇ ಸರಿ. ಕೆಲ ವಿದ್ಯಾರ್ಥಿಗಳಂತೂ ಎಲ್ಲಾ ಪರೀಕ್ಷೆಗಳಲ್ಲೂ ಪಾಸ್ ಆದರೂ ಇಂಗ್ಲಿಷ್ ಪರೀಕ್ಷೆಯಲ್ಲಿ ಮತ್ತೆ ಮತ್ತೆ ಫೇಲಾಗಿ ಸಾಕು ಸಾಕಾಗಿ ಹೋಗಿರುತ್ತಾರೆ.
Recommended Video
ಆದರೆ ಮರಳಿ ಯತ್ನವ ಮಾಡು ಎಂಬ ನಾಲ್ನುಡಿಯಂತೆ ಇದನ್ನೇ ಸವಾಲಾಗಿ ತೆಗೆದುಕೊಂಡು ಇದೇ ಇಂಗ್ಲೀಷ್ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದವರೂ ಇದ್ದಾರೆ. ಚಿನ್ನದ ನಾಡು ಕೋಲಾರದಲ್ಲೂ ಇದಕ್ಕೆ ಉದಾಹರಣೆ ಸಿಕ್ಕಿದೆ. ಇಂಗ್ಲೀಷ್ ಭಾಷೆಯಲ್ಲಿ ಫೇಲಾಗಿ ಫೇಲಾಗಿ ರೋಸಿಹೋಗಿದ್ದ ಇವರು ಇದೀಗ ಎಲ್ಲರಿಗೂ ಇಂಗ್ಲಿಷ್ ಪಾಠ ಹೇಳಿ ಕೊಡುವಂತೆ ಆಗಿದ್ದಾರೆ.

ಪದೇ ಪದೇ ಫೇಲ್ ಆಗಿದ್ದ ರಮೇಶ್
ಇಂಗ್ಲಿಷ್ ಭಾಷೆಯಲ್ಲಿ ಫೇಲಾಗಿ ಈಗ ಅದೇ ಭಾಷೆಯಲ್ಲಿ ಪರಿಣತಿ ಹೊಂದಿರುವ ಇವರ ಹೆಸರು ರಮೇಶ್ ಎಂದು. ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಉಪ್ಪಾರಹಳ್ಳಿಯ ನಿವಾಸಿಯಾಗಿರುವ ಇವರು 2012ರಲ್ಲಿ ಸರಿಯಾಗಿ ಇಂಗ್ಲೀಷ್ ಓದಲು ಬರೆಯಲು ಬರದೇ ಪಿಯುಸಿಯಲ್ಲಿ ಫೇಲ್ ಆಗಿದ್ದರು. ಇದರಿಂದ ಬೇಸತ್ತು ಕೂಲಿ ನಾಲಿ ಮಾಡಿ ಜೀವನ ಸಾಗಿಸಿದ್ದರು. ಆದ್ರೆ ಹೀಗೇ ಇರಬಾರದು ಎಂದು ಇದನ್ನೇ ಸವಾಲಾಗಿ ತೆಗೆದುಕೊಂಡ ರಮೇಶ್ ಸಿಕ್ಕ ಸಿಕ್ಕ ಇಂಗ್ಲಿಷ್ ಪುಸ್ತಕ ಓದಲು ಶುರು ಮಾಡಿದರು. ತಮ್ಮಷ್ಟಕ್ಕೆ ತಾವೇ ಇಂಗ್ಲಿಷ್ ಮಾತನಾಡುತ್ತಿದ್ದರು. ಹೀಗೆ ಎಲ್ಲೆಂದರಲ್ಲಿ ಇಂಗ್ಲಿಷ್ ನಲ್ಲಿ ಮಾತನಾಡೋದನ್ನು ನೋಡಿ ಮನೆಯವರು, ಗ್ರಾಮಸ್ಥರು ಏನಪ್ಪಾ ಆಗಿದೆ ಎಂದು ಆಡಿಕೊಂಡಿದ್ದೂ ಉಂಟು.

14 ದೇಶಗಳ ಶೈಲಿಯಲ್ಲಿ ಇಂಗ್ಲಿಷ್ ಮಾತನಾಡಬಲ್ಲರು
ಆದರೆ ಯಾವುದನ್ನೂ ಲೆಕ್ಕಿಸದೆ ಹಟ ಬಿಡದೆ ಇಂಗ್ಲೀಷ್ ಕಲಿತ ರಮೇಶ್ ಪಿಯುಸಿಯಲ್ಲಿ ಪಾಸ್ ಆದರು. ಪದವಿ ಸಹ ಮಾಡಿ ಶೇ 90ಕ್ಕೂ ಅಧಿಕ ಅಂಕ ಗಳಿಸಿ ಎಲ್ಲರ ಹುಬ್ಬೇರಿಸುವಂತೆ ಮಾಡಿದರು. ಇದೀಗ ಬರೋಬರಿ 14 ದೇಶಗಳ ಶೈಲಿಯಲ್ಲಿ ಇಂಗ್ಲಿಷ್ ಮಾತನಾಡುತ್ತಿರುವ ರಮೇಶ್, ಮಲೇಷಿಯಾ ಹಾಗೂ ಸಿಂಗಪುರದಲ್ಲೂ ಗೈಡ್ ಆಗಿ ಕೆಲಸ ಮಾಡಿ ತಮ್ಮೂರಿಗೆ ವಾಪಸ್ಸಾಗಿದ್ದಾರೆ. ಸದ್ಯ ಸರ್ಕಾರಿ ಶಾಲಾ ಕಾಲೇಜುಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ತಮ್ಮದೇ ಪಠ್ಯ ಕ್ರಮದಿಂದ ಇಂಗ್ಲಿಷ್ ಕಲಿಕೆ
ಅಷ್ಟೇ ಅಲ್ಲ, ತಮಗೆ ಇಂಗ್ಲಿಷ್ ಹೇಳಿಕೊಟ್ಟ ಶಿಕ್ಷಕರಿಗೂ ಇದೀಗ ಇಂಗ್ಲೀಷ್ ಪಾಠ ಮಾಡುತ್ತಿದ್ದಾರೆ ಇವರು. ತಮ್ಮದೇ ಆದ ಪಠ್ಯಕ್ರಮವನ್ನು ಸಿದ್ಧಪಡಿಸಿಕೊಂಡು ನೌಕರರಿಗೆ, ವಿದ್ಯಾರ್ಥಿಗಳಿಗೆ, ಕೂಲಿ ಕಾರ್ಮಿಕರಿಗೆ ಇಂಗ್ಲಿಷ್ ಭಾಷೆಯನ್ನು ಕಲಿಸಿಕೊಡುತ್ತಿದ್ದಾರೆ. DAFFODILS ಸ್ಪೋಕನ್ ಇಂಗ್ಲೀಷ್ ಸಂಸ್ಥೆ ಆರಂಭಿಸಿರುವ ರಮೇಶ್ ವಿದ್ಯಾರ್ಥಿಗಳು,ಉನ್ನತ ಅಧಿಕಾರಿಗಳು, ಶಿಕ್ಷಕರಿಗೆ ಮೂರು ತಿಂಗಳಲ್ಲಿ ಇಂಗ್ಲಿಷ್ ಪಾಠ ಹೇಳಿಕೊಡುತ್ತಿದ್ದಾರೆ.

ಅವಮಾನವೇ ದಾರಿ ದೀಪವಾಯ್ತು
ದ್ವಿತೀಯ ಪಿಯು ಇಂಗ್ಲೀಷ್ ಪರೀಕ್ಷೆಯಲ್ಲಿ ಮೊದಲ ಬಾರಿ 12 ಅಂಕ, ಎರಡನೇ ಸಲ 18 ಅಂಕ ಗಳಿಸಿ ಫೇಲ್ ಆಗಿದ್ದ ರಮೇಶ್, ಅವಮಾನಕ್ಕೆ ಒಳಗಾಗಿ ಆ ಸಂಗತಿಯನ್ನೇ ಸ್ಫೂರ್ತಿಯಾಗಿ ತೆಗೆದುಕೊಂಡು ಇಂದು ಆ ಅವಮಾನದಿಂದಲೇ ಬೆಳೆದಿದ್ದಾರೆ ಹಾಗೂ ಇತರರಿಗೂ ಭಾಷೆ ಕಲಿಸುವ ಯತ್ನ ಮಾಡುತ್ತಿದ್ದಾರೆ.












Click it and Unblock the Notifications