ಬಾಲಕಿಯ ಕೊಲೆ, ಅತ್ಯಾಚಾರ ಶಂಕೆ: ಮಾಲೂರಿನಲ್ಲಿ ಉಗ್ರ ಪ್ರತಿಭಟನೆ
ಮಾಲೂರು, ಆಗಸ್ಟ್ 02: ಅತ್ಯಾಚಾರ ಮಾಡಲು ಯತ್ನಿಸಿದ ಇಬ್ಬರು ಯುವಕರನ್ನು ತಡೆಯಲು ಪ್ರಯತ್ನಿಸಿದ ಯುವತಿಯನ್ನು ಕೊಲೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಮಾಲೂರಿನಲ್ಲಿ ಉಗ್ರ ಪ್ರತಿಭಟನೆ ನಡೆಯುತ್ತಿದೆ.
ಕೋಲಾರ ಜಿಲ್ಲೆಯ ಮಾಲೂರಿನ ಇಂದಿರಾ ನಗರದ ನಿವಾಸಿ, ಬಿಜಿಎಸ್ ಶಾಲೆಯಲ್ಲಿ 10 ನೇ ತರಗತಿ ಓದುತ್ತಿದ್ದ 15 ವರ್ಷದ ಬಾಲಕಿಯೇ ಮೃತ ದುರ್ದೈವಿ. ಅಪ್ರಾಪ್ತ ಬಾಲಕಿ ಬುಧವಾರದಂದು ಕ್ರೀಡಾಪಂದ್ಯವೊಂದನ್ನು ಮುಗಿಸಿ, ಸುಮಾರು ಸಂಜೆ 5:30ರ ವೇಳೆಗೆ ಮನೆಗೆ ತೆರಳುತ್ತಿದ್ದಳು. ಸ್ನೇಹಿತೆಯ ಜೊತೆ ಹೋಗುತ್ತಿದ್ದ ಈಕೆಯ ಮೇಲೆ ಬೈಕಿನಲ್ಲಿ ಬಂದ ಇಬ್ಬರು ದೌರ್ಜನ್ಯ ಎಸಗಲು ಪ್ರಯತ್ನಿಸಿದ್ದಾರೆ. ಈ ಸಮಯದಲ್ಲಿ ಅವರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಯುವತಿಗೆ ಆರೋಪಿಗಳು ಥಳಿಸಿದ ಕಾರಣ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಶವವನ್ನು ಪೊದೆಯ ಬಳಿ ಬಿಟ್ಟು ಆರೋಪಿಗಳು ನಾಪತ್ತೆಯಾಗಿದ್ದಾರೆ.
ಬಾಲಕಿಯನ್ನು ಶವವನ್ನು ಕೋಲಾರದ ಆರ್ ಎಲ್ ಜಾಲಪ್ಪ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕೊಂಡೊಯ್ಯಲಾಗಿದೆ. ಬಾಲಕಿಯ ಮೇಲೆ ಅತ್ಯಾಚಾರವಾಗಿದೆಯೇ ಇಲ್ಲವೇ ಎಂಬ ಕುರಿತು ವೈದ್ಯಕೀಯ ವರದಿ ಬಂದ ನಂತರವೇ ತಿಳಿಯಲಿದೆ.

ಮಾಲೂರು ಬಂದ್:
ಈ ಘಟನೆಯನ್ನು ವಿರೋಧಿ ಮತ್ತು ಆರೋಪಿಗಳನ್ನು ಶೀಘ್ರವೇ ಪತ್ತೆಹಚ್ಚಿ, ಶಿಕ್ಷೆ ನೀಡುವಂತೆ ಒತ್ತಾಯಿಸಿ ಇಂದು(ಆಗಸ್ಟ್ 2) ಮಾಲೂರು ಬಂದ್ ಗೆ ಕರೆನೀಡಲಾಗಿದೆ. ಮಾಲೂರಿನಲ್ಲಿ ಪ್ರತಿಭಟನೆಯ ಕಿಚ್ಚು ಹೆಚ್ಚಾದ್ದರಿಂದ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ಶೀಘ್ರವೇ ಅವರನ್ನು ಪತ್ತೆ ಮಾಡುವುದಾಗಿ ಅಭಯ ನೀದಿದ್ದಾರೆ.












Click it and Unblock the Notifications