Rain: ಕೊನೆಗೂ ಕರ್ನಾಟಕದ ಮೇಲೆ ವರುಣನ ಕೃಪೆ: ಚಿನ್ನದ ನಾಡಿನಲ್ಲಿ ಭರ್ಜರಿ ಮಳೆ
ಕೋಲಾರ, ಮೇ 02: ಬೇಸಿಗೆ ಬಿಸಿಲಿನ ಝಳಕ್ಕೆ ಬೇಸತ್ತ ಕೋಲಾರದ ಜನತೆಗೆ ವರುಣ ಕೃಪೆ ತೋರಿದ್ದು, ಜಿಲ್ಲೆಯಲ್ಲಿ ಮಳೆಯಾಗಿದೆ. ರಾಜ್ಯಾದ್ಯಂತ ಬಿರು ಬಿಸಿಲು, ಧಗೆಯ ನಡುವೆ ಕೋಲಾರ ಜಿಲ್ಲೆಯಲ್ಲಿ ಮಳೆಯಾಗಿದ್ದು ಜನರು ಫುಲ್ ಖುಷಿಯಾಗಿದ್ದಾರೆ.
ಬಿಸಿಗಾಳಿ, ಒಣ ಹವೆಯಿಂದ ಬೇಸತ್ತು ಹೋಗಿದ್ದ ವಾತಾವರಣಕ್ಕೆ ಕೊನೆಗೂ ಮಳೆರಾಯ ತಂಪೆರೆದಿದ್ದು, ಕೋಲಾರ ಜಿಲ್ಲೆ ಕೆಜಿಎಫ್ ನಗರದಲ್ಲಿ ಕೆಲ ಕಾಲ ವರ್ಷಧಾರೆಯಾಗಿದೆ. ಕೆಜಿಎಫ್ ನಗರದಲ್ಲಿ ಇಂದು(ಮೇ 02) ಏಕಾಏಕಿ ಮಳೆಯಾಗಿದ್ದು, ಕಾದ ಹಂಚಿನಂತಿದ್ದ ಭೂಮಿ ತಂಪಾಗಿದೆ. ಕಳೆದೊಂದು ವರ್ಷದಿಂದ ಮಳೆ ಕಾಣದೆ ಬರಡಾಗಿ ಹೋಗಿದ್ದ ಕೆಜಿಎಫ್ ಭೂಮಿ ಇಂದು ಕೊಂಚ ಮಟ್ಟಿಗೆ ತಂಪಾಗಿದೆ. ಬಿಸಿಲಿಗೆ ತತ್ತರಿಸಿದ್ದ ಜನರ ಮುಖದಲ್ಲಿ ನಗು ಅರಳಿದೆ.

ರಾಜ್ಯದಲ್ಲಿ ಶಾಖದ ಅಲೆ ಎಚ್ಚರಿಕೆ
ರಾಜ್ಯದ ಕೆಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣವಿದ್ದರೆ, ಇನ್ನೂ ಕೆಲವು ಭಾಗಗಳಲ್ಲಿ ಗರಿಷ್ಠ ಮಟ್ಟದ ತಾಪಮಾನ ದಾಖಲಾಗಿದ ಇಂದು ಸೇರಿದಂತೆ ಮುಂದಿನ 4 ದಿನಗಳವರೆಗೆ ರಾಜ್ಯದಲ್ಲಿ ಶಾಖದ ಅಲೆ ಹೆಚ್ಚಳವಾಗಲಿದೆ. ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಕೊಪ್ಪಳ ಜಿಲ್ಲೆಗಳಲ್ಲಿ ತೀವ್ರ ಶಾಖದ ಅಲೆಯು ಚಾಲ್ತಿಯಲ್ಲಿರುವ ಸಾಧ್ಯತೆಯಿದೆ. ಬಳ್ಳಾರಿ, ಕಲಬುರ್ಗಿ, ವಿಜಯಪುರ, ರಾಯಚೂರು, ಚಿತ್ರದುರ್ಗ, ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ತುಮಕೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಶಾಖದ ಅಲೆಯು ಹೆಚ್ಚಾಗಲಿದೆ ಎಂದು ಭಾರತದ ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ
ಏಪ್ರಿಲ್ ತಿಂಗಳ ಕೊನೆಯ ಭಾನುವಾರ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 38.5 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 25 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಸೋಮವಾರ ಕ್ರಮವಾಗಿ 37.8 ಡಿಗ್ರಿ ಸೆಲ್ಸಿಯಸ್ ಮತ್ತು 25 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದು ವರ್ಷದ ಈ ಸಮಯದಲ್ಲಿ ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಕಂಡುಬರುವ ಕನಿಷ್ಠ ತಾಪಮಾನಕ್ಕಿಂತ 2.5 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ. ಇದು ಕಳೆದ ಹತ್ತು ವರ್ಷಗಳಲ್ಲೇ ಏಪ್ರಿಲ್ ತಿಂಗಳಲ್ಲಿ ಬೆಂಗಳೂರಿನಲ್ಲಿ ದಾಖಲಾದ ಹೆಚ್ಚು ಪ್ರಮಾಣದ ಕನಿಷ್ಠ ತಾಪಮಾನವಾಗಿದೆ ಎಂದು ವರದಿಯಾಗಿದೆ.











Click it and Unblock the Notifications