PM Modi In Kolar: ಕೋಲಾರದಲ್ಲಿ ಮೋದಿಗಿಂತಲೂ ಜಾಸ್ತಿ ಅಬ್ಬರಿಸಿದ ಗೋ.ಮಧುಸೂಧನ್ ಅನುವಾದ
ಕೋಲಾರ, ಏಪ್ರಿಲ್ 30: ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಚಾರದ ನಿಮಿತ್ತ ಎರಡು ದಿನಗಳ ಕರ್ನಾಟಕದ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು ಇಂದು ಕೋಲಾರ, ರಾಮನಗರ ಮತ್ತು ಮೈಸೂರು ಜಿಲ್ಲೆಯ ಬಿಜೆಪಿ ಆಯೋಜಿಸಿದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ.
ಕೋಲಾರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಎಂದಿನಂತೆ ಕನ್ನಡದಲ್ಲಿ ಭಾಷಣ ಆರಂಭಿಸಿದ ಪ್ರಧಾನಿ ಮೋದಿಯವರ ಭಾಷಣದ ಕನ್ನಡ ತರ್ಜುಮೆಯನ್ನು ಹಿರಿಯ ಬಿಜೆಪಿ ಮುಖಂಡ ಗೋ.ಮಧುಸೂಧನ್ ಮಾಡಿದ್ದಾರೆ.

ಭಾರೀ ಸಂಖ್ಯೆಯಲ್ಲಿ ಸೇರಿದ ಜನಸ್ತೋಮವನ್ನು ಉದ್ದೇಶಿಸಿ ಹಿಂದಿಯಲ್ಲಿ ಭಾಷಣದ ಕನ್ನಡ ಅನುವಾದವನ್ನು ಅತ್ಯಂತ ಪರಿಣಾಮಕಾರಿಯಾಗಿ ಗೋ.ಮಧುಸೂಧನ್ ಮಾಡುವ ಮೂಲಕ ನೆರೆದಿದ್ದ ಜನರ ಚಪ್ಪಾಳೆ ಗಿಟ್ಟಿಸಿದ್ದಾರೆ.
ತಮ್ಮನ್ನು ಪಕ್ಷ ಸಂಘಟನೆಗೆ ಬಳಸಿಕೊಳ್ಳುತ್ತಿಲ್ಲ ಎಂದು ನೇರವಾಗಿ ಬಿಜೆಪಿ ನಾಯಕರ ವಿರುದ್ದ ಈ ಹಿಂದೆ ಆಕ್ರೋಶ ವ್ಯಕ್ತ ಪಡಿಸಿದ್ದ ಗೋ. ಮಧುಸೂಧನ್, ನನ್ನ ಹೇಳಿಕೆಯಿಂದ ಪಕ್ಷಕ್ಕೆ ಮುಜುಗರ ಆಗಬಾರದು ಎನ್ನುವ ಕಾರಣಕ್ಕಾಗಿ ಸುಮ್ಮನಿದ್ದೇನೆ ಎಂದು ಬೇಸರ ವ್ಯಕ್ತ ಪಡಿಸಿದ್ದರು.

ಕಾಂಗ್ರೆಸ್ಸಿನವರು 85% ಕಮಿಷನ್ ಹೊಡೆಯುತ್ತಿದ್ದರು ಎನ್ನುವ ಪ್ರಧಾನಿಯವರ ಹೇಳಿಕೆಯನ್ನು ಇನ್ನಷ್ಟು ವರ್ಣರಂಜಿತವಾಗಿ ಮಧುಸೂಧನ್ ಸಾರ್ವಜನಿಕರ ಮುಂದೆ ವಿವರಣೆಯನ್ನು ನೀಡಿದರು.
ಒಂದು ಹಂತದಲ್ಲಿ ಭಾಷಣ ಮೋದಿಯವರದ್ದೋ ಅಥವಾ ಗೋ.ಮಧುಸೂಧನ್ ಅವರದ್ದೋ ಎನ್ನುವ ರೀತಿಯಲ್ಲಿ ಪಕ್ಕಾ ಸ್ಪಷ್ಟ ಕನ್ನಡದಲ್ಲಿ ವಿವರಿಸುವಾಗ, ಪ್ರಧಾನಿಯವರೂ ಅವರ ಅನುವಾದವನ್ನು ಗಮನವಿಟ್ಟು ಕೇಳುತ್ತಿದ್ದರು.

"ವಿಶ್ವದಲ್ಲಿ ಭಾರತಕ್ಕೆ ತನ್ನದೆಯಾದ ವರ್ಚಸ್ಸು ಇದೆ. ಕೊರೊನಾ ಕಾಲದಲ್ಲೂ ಆರ್ಥಿಕವಾಗಿ ಸದೃಢತೆ ಹೊಂದುವ ಮೂಲಕ ಪ್ರಭಾವಿ ದೇಶವಾಗಿ ಹೊರ ಹೊಮ್ಮಿದೆ. ಭಾರತದ ಸಾಮರ್ಥ್ಯವನ್ನು ವಿಶ್ವಕ್ಕೆ ಪರಿಚಯಿಸುತ್ತಿದೆ" ಎನ್ನುವ ಪ್ರಧಾನಿಯವರ ಭಾಷಣದ ಅನುವಾದವನ್ನು ಗೋ.ಮಧುಸೂಧನ್, ಕೊರೊನಾ ಕಾಲದ ರಾಜ್ಯ ಸರಕಾರದ ಕೆಲಸವನ್ನು ಸೇರಿಸಿ ವಿವರಣೆಯನ್ನು ನೀಡಿದರು.












Click it and Unblock the Notifications