ಕೋಲಾರ: ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳನ್ನು ಮಲದ ಗುಂಡಿಗಿಳಿಸಿ ಸ್ವಚ್ಛತೆ, ರೊಚ್ಚಿಗೆದ್ದ ಪೋಷಕರು ಮಾಡಿದ್ದೇನು ಗೊತ್ತಾ?
ಕೋಲಾರ, ಡಿಸೆಂಬರ್, 17: ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಕ್ಕಳನ್ನು ಮಲದ ಗುಂಡಿಯೊಳಗೆ ಇಳಿಸಿ ಕ್ಲೀನ್ ಮಾಡಿಸಿದ ಅಮಾನವೀಯ ಘಟನೆ ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಯಲವಳ್ಳಿಯಯಲ್ಲಿ ನಡೆದಿದೆ.
ಮಕ್ಕಳಿಗೆ ವಿವಿಧ ರೀತಿಯಲ್ಲಿ ಕಿರುಕುಳ
ಪ್ರಾಂಶುಪಾಲರ ಎದುರಲ್ಲೇ ಸಿಬ್ಬಂದಿಗಳು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳಿಂದ ಮಲದ ಗುಂಡಿಗೆ ಇಳಿಸಿ ಕ್ಲೀನ್ ಮಾಡಿಸಿದ್ದಾರೆ. ಪ್ರಾಂಶುಪಾಲೆ ಭಾರತಮ್ಮ, ಶಿಕ್ಷಕ ಅಭಿಷೇಕ್, ಹಾಗೂ ವಾರ್ಡನ್ ಮಂಜುನಾಥ್ ಸೇರಿ ಕೆಲವು ಶಿಕ್ಷಕರು ಮಕ್ಕಳಿಗೆ ವಿವಿಧ ರೀತಿಯಲ್ಲಿ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಶಿಕ್ಷಕರ ವಿರುದ್ದ ಕ್ರಮಕ್ಕೆ ಪೋಷಕರ ಆಗ್ರಹ
ಮಕ್ಕಳಿಗೆ ಹೊಡೆಯುವುದು, ಮಕ್ಕಳನ್ನು ರಾತ್ರಿ ಹೊತ್ತಿನಲ್ಲಿ ಬ್ಯಾಗ್ ಹೊರಿಸಿ ಕೂರಿಸಿ ಹಿಂಸೆ ಮಾಡುವುದು ಹೀಗೆ ವಿವಿಧ ರೀತಿಯಲ್ಲಿ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇನ್ನು ಸ್ಥಳಕ್ಕೆ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಸತಿ ಶಾಲೆಯಲ್ಲಿ ಸುಮಾರು 250 ಜನ ಮಕ್ಕಳಿದ್ದು, ಮಕ್ಕಳಿಗೆ ಕಿರುಕುಳ ನೀಡಿರುವ ಶಿಕ್ಷಕರ ವಿರುದ್ದ ಕ್ರಮಕ್ಕೆ ಪೋಷಕರು ಆಗ್ರಹಿಸಿದ್ದಾರೆ.
ಪ್ರಾಂಶುಪಾಲ, ವಾರ್ಡನ್, ಶಿಕ್ಷಕ ಅಮಾನತು
ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಯಲುವಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳನ್ನು ಮಲದ ಗುಂಡಿಯೊಳಗೆ ಇಳಿಸಿ ಸ್ವಚ್ಛಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಂಶುಪಾಲರಾದ ಭಾರತಮ್ಮ, ವಾರ್ಡನ್ ಮಂಜುನಾಥ್ ಹಾಗೂ ಶಿಕ್ಷಕ ಮುನಿಯಪ್ಪ ಅವರನ್ನು ಅಮಾನತು ಮಾಡಲಾಗಿದೆ. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ನವೀನ್ ಕುಮಾರ್ ರಾಜ್, ಮೂವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಇದೊಂದು ತೀರಾ ಗಂಭೀರವಾದ ವಿಚಾರ. ವಸತಿ ಶಾಲೆಯ ಪ್ರಾಂಶುಪಾಲರು ಹಾಗೂ ಶಿಕ್ಷಕರು ದೊಡ್ಡ ಲೋಪ ಎಸಗಿದ್ದಾರೆ. ಆದ್ದರಿಂದ ಅಮಾನತುಗೊಳಿಸಿ ತನಿಖೆ ನಡೆಸಲು ನಿರ್ದೇಶನ ನೀಡಿದ್ದೇನೆ. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ವರದಿ ನೀಡಲು ಸೂಚನೆ ನೀಡಿದ್ದೇನೆ ಎಂದರು.
ಮೊರಾರ್ಜಿ ದೇಸಾಯಿ ಶಾಲೆಗೆ ಜಿಲ್ಲಾ ನ್ಯಾಯಾಧೀಶರಾದ ಸುನೀಲ್ ಹೊಸಮಣಿ ಹಾಗೂ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಮಕ್ಕಳ ಬಳಿಯೂ ಸಮಸ್ಯೆಯನ್ನು ವಿಚಾರಿಸಿದ್ದಾರೆ. ಪ್ರತಿ ಕೊಠಡಿಗೂ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ ನ್ಯಾಯಾಧೀಶರು ಮಕ್ಕಳಿಂದ ದೂರು ಪಡೆದುಕೊಂಡರು ಎಂದು ತಿಳಿದುಬಂದಿದೆ.












Click it and Unblock the Notifications