ಸರ್ಕಾರಿ ಗೌರವಗಳೊಂದಿಗೆ ಯೋಧ ವಿಜಯಾನಂದ ಸುರೇಶ್ ನಾಯ್ಕ ಅಂತ್ಯಕ್ರಿಯೆ
ಕಾರವಾರ, ಜುಲೈ.11: ನಕ್ಸಲರು ಹುದುಗಿಸಿಟ್ಟಿದ್ದ ನೆಲಬಾಂಬ್ ಸ್ಫೋಟಿಸಿ ವೀರ ಮರಣವನ್ನಪ್ಪಿದ ಇಲ್ಲಿನ ಕೋಡಿಬಾಗ ಮೂಲದ ಯೋಧ ವಿಜಯಾನಂದ ಸುರೇಶ್ ನಾಯ್ಕ (29) ಅವರ ಅಂತ್ಯಕ್ರಿಯೆ ಇಂದು ಬುಧವಾರ ಹಿಂದೂ ರುಧ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
ಛತ್ತೀಸ್ ಘಡದ ಕಂಕೇರ್ ಜಿಲ್ಲೆಯ ಚೋಟೆಬೆಟಿಯಾ ಕಾಡಿನಲ್ಲಿ ನಕ್ಸಲರ ವಿರುದ್ಧದ ಕಾರ್ಯಾಚರಣೆಯಲ್ಲಿ 2 ವಿವಿಧ ತಂಡಗಳು ವಿಶೇಷ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದವು. ಕಾರ್ಯಾಚರಣೆ ವೇಳೆ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಒಟ್ಟು 12 ಬೈಕ್ ಗಳಲ್ಲಿ ಯೋಧರು ತೆರಳುತ್ತಿದ್ದರು.
ಛತ್ತೀಸ್ ಘಡ ನಕ್ಸಲ್ ದಾಳಿಗೆ ಕರ್ನಾಟಕದ ಇಬ್ಬರು ಯೋಧರ ಬಲಿ
ಈ ವೇಳೆ ರಸ್ತೆಯಲ್ಲಿ ನಕ್ಸಲರು ಹುದುಗಿಸಿಟ್ಟ ಸುಧಾರಿತ ಸ್ಪೋಟಕ (ಐಇಡಿ) ಸಿಡಿದ ಪರಿಣಾಮ ನಾಲ್ಕನೇ ಬೈಕ್ ನಲ್ಲಿದ್ದ ಕಾರವಾರದ ವಿಜಯಾನಂದ (29) ಹಾಗೂ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಹಲಗಾ ಗ್ರಾಮದ ಸಂತೋಷ ಲಕ್ಷ್ಮಣ ಗುರವ್ (28) ಮೃತಪಟ್ಟಿದ್ದರು.
ವಿಜಯಾನಂದ ಅವರ ಪಾರ್ಥೀವ ಶರೀರವನ್ನು ಗೋವಾ ಮಾರ್ಗವಾಗಿ ಬೆಳಗ್ಗೆ ಕಾರವಾರಕ್ಕೆ ತರಲಾಯಿತು. ಜಿಲ್ಲಾಧಿಕಾರಿ ಕಚೇರಿಯಿಂದ ತೆರೆದ ವಾಹನದಲ್ಲಿ ನಗರದಲ್ಲಿ ಮೆರವಣಿಗೆ ನಡೆಸಿ, ಪೊಲೀಸ್ ಕವಾಯತು ಮೈದಾನದಲ್ಲಿ ಪಾರ್ಥೀವ ಶರೀರದ ವೀಕ್ಷಣೆಗೆ ಇಡಲಾಗಿತ್ತು.
ಜಿಲ್ಲಾಡಳಿತದ ಪರವಾಗಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಗೌರವ ವಂದನೆ ಸಲ್ಲಿಸಿದರು. ಪೊಲೀಸ್ ಇಲಾಖೆಯ ಸಿಬ್ಬಂದಿ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ವಂದನೆ ಅರ್ಪಿಸಿದರು.
ಈ ವೇಳೆ ಯೋಧನ ಕುಟುಂಬಸ್ಥರು, ಆತ್ಮೀಯರ ರೋಧನ ಮುಗಿಲು ಮುಟ್ಟಿತ್ತು. ವಿಜಯಾನಂದರ ತಾಯಿ, ತಂದೆ, ಅಣ್ಣ ಹಾಗೂ ತಂಗಿ ಪಾರ್ಥೀವ ಶರೀರದ ಮೇಲೆ ಒರಗಿ ಕಣ್ಣೀರಿಡುತ್ತಿದುದು ಮನ ಕಲಕುತ್ತಿತ್ತು.
ತಿಂಗಳ ಹಿಂದೆ ಮನೆಗೆ ಬಂದಿದ್ದ ಯೋಧ
ಯೋಧ ವಿಜಯಾನಂದ, ತಿಂಗಳ ಹಿಂದೆ ರಜೆ ಪಡೆದು ಮನೆಗೆ ಬಂದಿದ್ದ. ಈ ವೇಳೆ ತಮ್ಮ ತಂದೆ ಸುರೇಶ ನಾಯ್ಕರ ಹಳೆ ಬೈಕ್ ಅನ್ನು ಬದಲಾಯಿಸಿ ಅವರಿಗೆ ಹೊಸ ಸ್ಕೂಟಿ ಕೊಡಿಸಿದ್ದ. ಅಲ್ಲದೇ, ಅಣ್ಣನಿಗೆ ಬುಲೆಟ್ ಬೈಕ್ ಕೊಡಿಸಲು ಸಿದ್ಧತೆ ಮಾಡಿಕೊಂಡಿದ್ದ. ಡಿಸೆಂಬರ್‌ನಲ್ಲಿ ಅತ್ತೆ ಮಗಳ ಮದುವೆ ಇದ್ದು, ಅದಕ್ಕೆ ಬರುವುದಾಗಿ ತಿಳಿಸಿ ಕರ್ತವ್ಯಕ್ಕೆ ಹೊರಟಿದ್ದ. ಭಾನುವಾರ ಕರೆ ಮಾಡಿ ಮನೆಯವರೊಂದಿಗೆ ಮಾತನಾಡಿ ತಂದೆ, ತಾಯಿಯ ಆರೋಗ್ಯ ವಿಚಾರಿಸಿದ್ದ. ಆದರೆ, ನಕ್ಸಲರ ದುಷ್ಕೃತ್ಯಕ್ಕೆ ಮಾರನೇ ದಿನವೇ (ಸೋಮವಾರ) ವಿಜಯಾನಂದ ಬಲಿಯಾದ.
ವಿಜಯಾನಂದನದು ಬಡ ಕುಟುಂಬ
ವಿಜಯಾನಂದ ಕೋಡಿಭಾಗದ ವಿವೇಕಾನಂದ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮುಗಿಸಿ ಬಾಡದ ಶಿವಾಜಿ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಶಿಕ್ಷಣ ಪಡೆದಿದ್ದ. ಶಾಲಾ ಕಾಲೇಜು ದಿನಗಳಲ್ಲಿ ಕ್ರೀಡೆಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳುತ್ತಿದ್ದ ವಿಜಯಾನಂದ, ಜೊಯಿಡಾದ ಸರ್ಕಾರಿ ಕಾಲೇಜಿನಲ್ಲಿ ಮೂರು ವರ್ಷದ ಡಿಪ್ಲೊಮಾ ಕೋರ್ಸ್ ಪಡೆದಿದ್ದರು.
ತಂದೆ ಸುರೇಶ ನಾಯ್ಕ ನಿವೃತ್ತ ಕಂದಾಯ ಇನ್ಸ್ ಸ್ಪೆಕ್ಟರ್ ಆಗಿದ್ದು, ತಾಯಿ ವಿದ್ಯಾ ನಾಯ್ಕ ಮನೆಗೆಲಸ ಮಾಡಿ ಜೀವನ ಸಾಗಿಸುತ್ತಾರೆ. ಇವರಿಗೆ ಅಣ್ಣ ವಿಶಾಲ ನಾಯ್ಕ ಹಾಗೂ ತಂಗಿ ಭಾಗ್ಯಶ್ರೀ ಇದ್ದಾರೆ.
ಅಪಾರ ದೇಶಾಭಿಮಾನ ಹೊಂದಿದ್ದ
ಚಿಕ್ಕ ವಯಸ್ಸಿನಲ್ಲಿಯೇ ದೇಶದ ಬಗ್ಗೆ ಅಪಾರ ಅಭಿಮಾನ ಬೆಳೆಸಿಕೊಂಡಿದ್ದ ವಿಜಯಾನಂದ, ಮನೆಯವರು ಸೇನೆಗೆ ಸೇರುವುದು ಬೇಡ ಎಂದರೂ ಯಾರಿಗೂ ಗೊತ್ತಿಲ್ಲದಂತೆ ಅರ್ಜಿ ಸಲ್ಲಿಸಿದ್ದರು. ಆಯ್ಕೆಯಾದ ಬಳಿಕ ಅಣ್ಣನ ಮೂಲಕ ತಂದೆ ತಾಯಿಗಳನ್ನು ಒಪ್ಪಿಸಿದ್ದರು.
ಬಳಿಕ 2014ರಲ್ಲಿ ಬಿಎಸ್ಎಫ್ 121ನೇ ಬೆಟಾಲಿಯನ್ ಸೇರಿ ಮಣಿಪುರದ ಇಂಫಾಲ್ ನಲ್ಲಿ ತರಬೇತಿ ಪಡೆದಿದ್ದರು. ಬಳಿಕ ವೆಸ್ಟ್ ಬೆಂಗಾಲ್, ಛತ್ತೀಸ್ ಘಡದಲ್ಲಿ ಕೂಡ ಸೇವೆ ಸಲ್ಲಿದ್ದರು.
ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !