ಉತ್ತರ ಕನ್ನಡದಲ್ಲಿ ಮಳೆಯ ಅಬ್ಬರ: ಹಳ್ಳದಲ್ಲಿ ಕೊಚ್ಚಿ ಹೋಗಿ ಇಬ್ಬರು ದಾರುಣ ಸಾವು
ಕಾರವಾರ, ಜುಲೈ 07: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಕೊಂಚ ಕಡಿಮೆಯಾಗಿದೆ. ಆದರೆ ಗುರುವಾರ ಸುರಿದ ಭಾರೀ ಮಳೆಗೆ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಇಬ್ಬರು ಸಾವನ್ನಪ್ಪಿದ್ದು, ಶಾಲಾ ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಮುಂದುವರಿಸಿದೆ.
ಉತ್ತರ ಕನ್ನಡದಲ್ಲಿ ಕಳೆದ ಮೂರು ದಿನಗಳಿಂದ ಅಬ್ಬರಿಸಿದ್ದ ಮಳೆ ಕೊಂಚ ಕಡಿಮೆಯಾಗಿದೆ. ಆದರೆ ಗುರುವಾರ ಧಾರಾಕಾರವಾಗಿ ಸುರಿದ ಭಾರಿ ಮಳೆಗೆ ಹಲವೆಡೆ ನೀರು ತುಂಬಿ ಸಾಕಷ್ಟು ಅನಾಹುತ ಸೃಷ್ಟಿಯಾಗಿತ್ತು. ಕುಮಟಾ ಬೆಟ್ಕುಳಿಯಲ್ಲಿ ಇಬ್ಬರು ಹಳ್ಳದಲ್ಲಿ ಕೊಚ್ಚಿ ಹೋಗಿದ್ದು, ಸತೀಶ ಪಾಂಡುರಂಗ ನಾಯ್ಕ(38), ಉಲ್ಲಾಸ ಗಾವಡಿ(50) ಮೃತ ಪಟ್ಟಿದ್ದಾರೆ.

ಇಬ್ಬರು ಹಳ್ಳದಂಚಿನ ಜಮೀನಿನಲ್ಲಿ ಬೇಲಿ ಕಟ್ಟುತ್ತಿರುವಾಗ ಓರ್ವ ಕಾಲು ಜಾರಿ ಹಳ್ಳಕ್ಕೆ ಬಿದ್ದಿದ್ದು ಆತನ ರಕ್ಷಣೆಗೆ ಹೋದ ಇನ್ನೋರ್ವ ಕೂಡ ಕೊಚ್ಚಿ ಹೋಗಿದ್ದ. ಕಣ್ಮರೆಯಾದವರಿಗಾಗಿ ಶೋಧ ನಡೆಸಿದ್ದ ಗ್ರಾಮಸ್ಥರು ರಾತ್ರಿ ಬಳಿಕ ಇಬ್ಬರೂ ಶವವಾಗಿ ಪತ್ತೆಯಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂರನೇ ದಿನವೂ ರಜೆ ಮುಂದುವರಿಕೆ
ಜಿಲ್ಲೆಯಲ್ಲಿ ಭಾರಿ ಮಳೆ ಬೀಳುವ ಸೂಚನೆಯನ್ನು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬೆಂಗಳೂರು ಮಾಹಿತಿ ನೀಡಿದ್ದು ಹೀಗಾಗಿ ಜಿಲ್ಲಾಡಳಿತವು ಮುಂಜಾಗ್ರತೆ ಕ್ರಮವಾಗಿ ಜುಲೈ 7 ರಂದು ಜಿಲ್ಲೆಯ ಕರಾವಳಿ ತಾಲೂಕುಗಳಾದ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಮತ್ತು ಭಟ್ಕಳ್ ಈ ಪ್ರದೇಶಗಳ ಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶಿಸಿದ್ದಾರೆ.

ಆಸ್ಪತ್ರೆ ಸಾಗಾಟಕ್ಕೆ ಪರದಾಟ
ಭಾರರೀ ಮಳೆಗೆ ಕುಸಿದ ಅಪಾಯಕಾರಿ ಸೇತುವೆ ಮೇಲೆಯೇ ಅನಾರೋಗ್ಯಕ್ಕೊಳಗಾದ ವ್ಯಕ್ತಿಯೋರ್ವರನ್ನು ಗ್ರಾಮಸ್ಥರು ಹೊತ್ತು ಸಾಗಿಸಿದ ಘಟನೆ ಜೋಯಿಡಾ ತಾಲೂಕಿನ ಕಾತೇಲಿ ಗ್ರಾಮದಲ್ಲಿ ನಡೆದಿದೆ. ಕಾನೇರಿ ನದಿಗೆ ತಾತ್ಕಾಲಿಕವಾಗಿ ನಿರ್ಮಾಣ ಮಾಡಲಾಗಿದ್ದ ಸೇತುವೆ ಭಾರೀ ಮಳೆಗೆ ಒಂದು ಬದಿಯ ಸ್ಲ್ಯಾಬ್ ಮುರಿದು ಹೋಗಿತ್ತು. ಕಾತೇಲಿ, ಕೆಲೋಲಿ ಗ್ರಾಮಗಳ ನಡುವಿನ ಸಂಪರ್ಕ ಕೊಂಡಿಯಾಗಿದ್ದ ಸೇತುವೆಗೆ ಹಾನಿಯಾದ ಕಾರಣ ಸಂಪರ್ಕ ಕಡಿತಗೊಂಡಿತ್ತು. ಆದರೆ ಗ್ರಾಮದ ನಿವಾಸಿಯೊಬ್ಬರು ತೀವ್ರ ಅನಾರೋಗ್ಯಕ್ಕೆ ತುತ್ತಾದ ಕಾರಣ ಆಸ್ಪತ್ರೆಗೆ ಸಾಗಿಸಬೇಕಾದ ಅನಿವಾರ್ಯತೆಯಲ್ಲಿ ಅಪಾಯವನ್ನು ಲೆಕ್ಕಿಸದೆ ಗ್ರಾಮಸ್ಥರೆಲ್ಲರೂ ಅನಾರೋಗ್ಯಕ್ಕೊಳಗಾದ ವ್ಯಕ್ತಿಯನ್ನು ಹೊತ್ತುಕೊಂಡು ಸ್ಥಳಾಂತರ ಮಾಡಿದ್ದಾರೆ.
ಸೇತುವೆಯನ್ನು ಜಿಲ್ಲಾ ಪಂಚಾಯತ್‌ನಿಂದ 45 ಲಕ್ಷ ರೂಪಾಯಿ ಅನುದಾನದಲ್ಲಿ ನಿರ್ಮಿಸಲಾಗಿತ್ತು. ಇದೀಗ ಸೇತುವೆ ಕುಸಿದಿದ್ದರಿಂದ ಗ್ರಾಮಕ್ಕೆ ಸಂಪರ್ಕ ಇಲ್ಲದಂತಾಗಿದ್ದು ಅಧಿಕಾರಿಗಳು ನೆರವಿಗೆ ಬರುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಸಚಿವ ಮಂಕಾಳ್ ವೈದ್ಯ ಪರಿಶೀಲನೆ
ಜಿಲ್ಲೆಯ ಕರಾವಳಿ ತಾಲೂಕಗಳಲ್ಲಿ ಜುಲೈ 5ರಿಂದ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಟ್ಕಳ ತಾಲೂಕಿನ ಶಿರಾಲಿ, ಭಟ್ಕಳ ಪಟ್ಟಣ, ಮುಟ್ಟಳ್ಳಿ ಭೂ ಕುಸಿತ ಪ್ರದೇಶಗಳಿಗೆ ಗುರುವಾರ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೆ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಅವರು, ಮಳೆ ವ್ಯಾಪಕ ಪ್ರಮಾಣದಲ್ಲಿ ಆಗುತ್ತಿರುವುದರಿಂದ ಜನಸಂಚಾರಕ್ಕೆ ವಾಹನ ಸಂಚಾರಕ್ಕೆ ವ್ಯಥೆ ಉಂಟಾಗುತ್ತಿದ್ದು ಮನೆಗಳಿಗೆ ಮಳೆ ನೀರು ನುಗುತ್ತಿದ್ದು ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಗಿದೆ ಎಂದು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ರೂಪಾಲಿ ಆಗ್ರಹ
ಕಾರವಾರ ತಾಲೂಕಿನ ಅರಗಾ, ಚೆಂಡಿಯಾ, ಬಿಣಗಾ, ಮೂಡಲಮಕ್ಕಿ, ಒಕ್ಕಲಕೇರಿ, ಹೊಸಾಳಿ, ಅಂಕೋಲಾದ ವಿವಿಧೆಡೆ ನೀರು ನುಗ್ಗುತ್ತಿರುವುದರಿಂದ ಜನತೆ ತೊಂದರೆಗೊಳಗಾಗಿದ್ದಾರೆ. ಅವಶ್ಯಕತೆ ಇದ್ದಲ್ಲಿ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಬೇಕು. ಐಆರ್ ಬಿ ನಡೆಸಿದ ಅವೈಜ್ಞಾನಿಕ ಕಾಮಗಾರಿಯಿಂದ ನೀರು ಸರಾಗವಾಗಿ ಹರಿದುಹೋಗದಂತಾಗಿದೆ. ನೌಕಾನೆಲೆಯಿಂದಲೂ ನೀರಿನ ಹರಿವಿಗೆ ಅಡ್ಡಿ ಉಂಟಾಗಿದೆ. ಅಧಿಕಾರಿಗಳು ಹಾಗೂ ನೌಕಾನೆಲೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ನೀರು ಸರಾಗವಾಗಿ ಹರಿದುಹೋಗಲು ವ್ಯವಸ್ಥೆ ಕಲ್ಪಿಸಬೇಕು. ಇನ್ನು ಮುಂದೆ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಲು ಕಟ್ಟುನಿಟ್ಟಿನ ಸೂಚನೆ ನೀಡುವಂತೆ ಮಾಜಿ ಶಾಸಕಿ ರೂಪಾಲಿ ನಾಯ್ಕ ಆಗ್ರಹಿಸಿದ್ದಾರೆ.












Click it and Unblock the Notifications