ಶಾಲಾ ಪ್ರವಾಸದ ವೇಳೆ ದುರಂತ: ಮುರುಡೇಶ್ವರದಲ್ಲಿ ನಾಲ್ವರು ಬಾಲಕಿಯರ ಶವ ಪತ್ತೆ
ಉತ್ತರ ಕನ್ನಡ, ಡಿಸೆಂಬರ್ 11: ಶೈಕ್ಷಣಿಕ ಪ್ರವಾಸದ ವೇಳೆ ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲಾದ ಘಟನೆ ಉತ್ತರ ಕನ್ನಡದ ಭಟ್ಕಳ ತಾಲೂಕಿನ ಮುರುಡೇಶ್ವರದಲ್ಲಿ ನಡೆದಿದ್ದು, ನಿನ್ನೆ ನಾಪತ್ತೆಯಾಗಿದ್ದ ವಿದ್ಯಾರ್ಥಿನಿಯರು ಇಂದು ಶವವಾಗಿ ಪತ್ತೆಯಾಗಿದ್ದಾರೆ. ಮೃತರು ಕೋಲಾರದ ಮುಳುಬಾಗಿಲಿನ ಕೊತ್ತೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿಯರು ಎಂದು ಗುರುತಿಸಲಾಗಿದೆ.
ದೀಕ್ಷಾ (15), ಲಾವಣ್ಯ (15), ವಂದನಾ (15), ಶ್ರಾವಂತಿ (15) ಮೃತ ಶಾಲಾ ವಿದ್ಯಾರ್ಥಿನಿಯರು ಎಂದು ತಿಳಿದು ಬಂದಿದೆ. ಕೋಲಾರದ ಮುಳುಬಾಗಿಲಿನ ಕೊತ್ತೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವತಿಯಿಂದ ವಾರ್ಷಿಕ ಶಾಲಾ ಪ್ರವಾಸ ಆಯೋಜನೆ ಮಾಡಲಾಗಿತ್ತು. ಶಿಕ್ಷಕರು, ವಿದ್ಯಾರ್ಥಿಗಳು ಸೇರಿದಂತೆ 57 ಜನರು ನಿನ್ನೆ ಮಧ್ಯಾಹ್ನದ ವೇಳೆಗೆ ಮುರುಡೇಶ್ವರ ಕ್ಷೇತ್ರ ವೀಕ್ಷಿಸಲು ಬಂದಿದ್ದರು.

ಮುರುಡೇಶ್ವರ ದೇವಾಲಯ ವೀಕ್ಷಣೆ ಬಳಿಕ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಮುರುಡೇಶ್ವರ ಬೀಚ್‌ಗೆ ಆಟವಾಡಲು ಬಂದಿದ್ದಾರೆ. ಈ ವೇಳೆ 7 ಮಂದಿ ಏಕಾಏಕಿ ನಾಪತ್ತೆಯಾಗಿದ್ದರು. ಸಮುದ್ರದ ಅಲೆಗಳು ಜೋರಿದ್ದ ಕಾರಣ 7 ವಿದ್ಯಾರ್ಥಿನಿಯರು ಕೊಚ್ಚಿ ಹೋಗಿದ್ದರು. ಕೂಡಲೇ ಮೂವರನ್ನು ರಕ್ಷಣೆ ಮಾಡಲಾಗಿತ್ತು. ಆದರೆ ನೋಡನೋಡುತ್ತಿದ್ದಂತೆ ನಾಲ್ವರು ವಿದ್ಯಾರ್ಥಿನಿಯರು ಕಣ್ಮರೆಯಾಗಿದ್ದರು.
ನಿನ್ನೆ ರಾತ್ರಿ ಓರ್ವ ವಿದ್ಯಾರ್ಥಿನಿ ಮೃತದೇಹವನ್ನು ಲೈಫ್ ಗಾರ್ಡ್ ಸಿಬ್ಬಂದಿ ಪತ್ತೆ ಹಚ್ಚಿದ್ದು, ಇಂದು ಮೂವರ ಮೃತದೇಹ ಸಮುದ್ರದಿಂದ ತೇಲಿ ಬಂದಿದೆ. ಭಟ್ಕಳ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಂತರ ವಿದ್ಯಾರ್ಥಿನಿಯರ ಮೃತದೇಹ ಕೋಲಾರಕ್ಕೆ ರವಾನೆಯಾಗಲಿದೆ.

ಇನ್ನು ಈ ಘಟನೆ ಹಿನ್ನೆಲೆಯಲ್ಲಿ ಮುರುಡೇಶ್ವರ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿದ್ಯಾರ್ಥಿನಿಯರ ಸಾವಿನ ಕಾರಣ ಮುಳುಬಾಗಿಲಿನ ಕೊತ್ತೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲೆಯನ್ನು ಅಮಾನತುಗೊಳಿಸಲಾಗಿದ್ದು, ಕೆಲವು ಶಿಕ್ಷಕರನ್ನು ಕರ್ತವ್ಯದಿಂದ ವಜಾಗೊಳಿಸಲಾಗಿದೆ.
ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ. 'ವಿದ್ಯಾರ್ಥಿಗಳು ನೀರುಪಾಲಾದ ಸುದ್ದಿ ತಿಳಿದು ಆಘಾತವಾಯಿತು. ಮೃತ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗುವುದು. ಮೃತದೇಹಗಳು ಹುಟ್ಟೂರಿಗೆ ತಲುಪಿಸುವ ವ್ಯವಸ್ಥೆ ಮಾಡಲು ಉತ್ತರ ಕನ್ನಡ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ' ಎಂದು ಸಿಎಂ ತಿಳಿಸಿದ್ದಾರೆ.
'ಪ್ರವಾಸದ ಸಂದರ್ಭದಲ್ಲಿ ಶಿಕ್ಷಕರು ಮಕ್ಕಳ ಬಗ್ಗೆ ಹೆಚ್ಚು ಜಾಗೃತೆ ವಹಿಸಬೇಕು. ಅಪಾಯಕಾರಿ ಸ್ಥಳಗಳಿಗೆ ಭೇಟಿ ನೀಡುವಾಗ ಮಕ್ಕಳ ಮೇಲೆ ನಿಗಾ ಇಡಬೇಕು. ಮಕ್ಕಳನ್ನು ಕಳೆದುಕೊಂಡ ಹೆತ್ತವರ ನೋವು ಸಂಕಟವನ್ನು ನಾನು ಅರ್ಥೈಸಿಕೊಳ್ಳಬಲ್ಲೆ, ಇಂತಹ ಅವಘಡಗಳು ಮತ್ತೆಂದೂ ಸಂಭವಿಸದಿರಲಿ' ಎಂದು ಪ್ರಾರ್ಥಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.












Click it and Unblock the Notifications