ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಸ್ತೆ ಇಲ್ಲದೆ ಬೆರಡೆ ಗ್ರಾಮಸ್ಥರ ಪರದಾಟ: 5 ಕಿ.ಮೀ ಕಾಲ್ನಡಿಗೆಯಲ್ಲಿ ಶವ ಸಾಗಾಟ

By ಉತ್ತರ ಕನ್ನಡ ಪ್ರತಿನಿಧಿ
|
Google Oneindia Kannada News

ಕಾರವಾರ, ಜನವರಿ 12: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬೆರಡೆ ಗ್ರಾಮದಲ್ಲಿ ಆಕಸ್ಮಿಕವಾಗಿ ಸಾವನ್ನಪ್ಪಿದ್ದ ವ್ಯಕ್ತಿಯೋರ್ವರ ಶವವನ್ನು ಊರಿಗೆ ಸಾಗಿಸಲು ರಸ್ತೆ ಇಲ್ಲದ ಕಾರಣಕ್ಕೆ ಸ್ಥಳೀಯರೇ ಕಟ್ಟಿಗೆಯೊಂದರಲ್ಲಿ ಕಟ್ಟಿಕೊಂಡು ಸುಮಾರು 5 ಕಿ.ಮೀ ಕಾಲ್ನಡಿಗೆಯಲ್ಲಿ ಸಾಗಿ ಊರಿಗೆ ತಲುಪಿಸಿದ ಅಮಾನವೀಯ ಘಟನೆ ನಡೆದಿದೆ.

ಮಕರ ಸಂಕ್ರಾಂತಿ ವಿಶೇಷ ಪುಟ

ಬೆರಡೆ ಗ್ರಾಮದ ದಾಮು ನಾಯ್ಕ ಎನ್ನುವವರು ಆಕಸ್ಮಿಕವಾಗಿ ನಡೆದ ಅಗ್ನಿ ಅವಘಡದಲ್ಲಿ ಸಾವನ್ನಪ್ಪಿದ್ದರು. ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ಮನೆಗೆ ತರಲು ಹೆದ್ದಾರಿ ವರೆಗೆ ವಾಹನದಲ್ಲಿ ತಂದು ಬಳಿಕ ಅಲ್ಲಿಂದ ಕಟ್ಟಿಗೆಯೊಂದಕ್ಕೆ ಶವವನ್ನು ಕಟ್ಟಿಕೊಂಡು ಜೋಲಿಯಾಗಿ ಐದು ಕಿ.ಮೀ ನಡೆದುಕೊಂಡು ಊರು ಸೇರಿಸಲಾಗಿದೆ.

ಪ್ರತಿ ಹಳ್ಳಿ ಹಳ್ಳಿಗಳಲ್ಲಿ ರಸ್ತೆ, ಚರಂಡಿ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕಾರ್ಯ ಸರ್ಕಾರ ಮಾಡುವುದಾಗಿ ಜನಪ್ರತಿನಿಧಿಗಳು ಭಾಷಣ ಬಿಗಿಯುತ್ತಲೆ ಇರುತ್ತಾರೆ. ಆದರೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ಇಂದಿಗೂ ಅದೇಷ್ಟೋ ಹಳ್ಳಿಗಳಿಗೆ ಮೂಲಭೂತ ಸೌಕರ್ಯಗಳ ಕೊರತೆ ಇದೆ. ಇದೇ ರೀತಿ ಅಂಕೋಲಾದ ಬೆರಡೆ ಗ್ರಾಮದಲ್ಲಿಯೂ ರಸ್ತೆ ಸೌಕರ್ಯವೇ ಇಲ್ಲದೆ ಶವವನ್ನು ಕಟ್ಟಿಗೆಗೆ ಕಟ್ಟಿಕೊಂಡು ಕಿಲೋ ಮೀಟರ್ ದೂರವನ್ನು ಜನರೇ ಹೊತ್ತು ಸಾಗಿದ್ದಾರೆ.

 ರಸ್ತೆ ನಿರ್ಮಾಣ ಮಾಡುವಂತೆ ಗ್ರಾಮಸ್ಥರ ಮನವಿ

ರಸ್ತೆ ನಿರ್ಮಾಣ ಮಾಡುವಂತೆ ಗ್ರಾಮಸ್ಥರ ಮನವಿ

ಇನ್ನು ಗ್ರಾಮದಲ್ಲಿ 10 ಮನೆ ಮಾತ್ರ ಇದೆ. ಆದರೆ ಇದೇ ಗ್ರಾಮದಲ್ಲಿ ನೂರಾರು ಕುಟುಂಬಗಳ ಜಮೀನು ಇಲ್ಲಿದೆ. ನಿತ್ಯವು ಬಂದು ಹೋಗುತ್ತಾರೆ. ಆದರೆ ಇಲ್ಲಿಯೇ ಮನೆಕಟ್ಟಿಕೊಂಡು ಬದುಕುತ್ತಿರುವ ಗ್ರಾಮಸ್ಥರು ರಸ್ತೆ ಇಲ್ಲದ ಕಾರಣ ಅನಾರೋಗ್ಯಕ್ಕೊಳಗಾದವರು ಅಲ್ಲವೇ ಯಾವುದೇ ಆಪತ್ತು ಎದುರಾದರು ಜೋಳಿಗೆ ಕಟ್ಟಿಹೊರಬೇಕಾಗಿದೆ. ಗುಡ್ಡದ ದಾರಿಯಲ್ಲಿ ಓಡಾಡುವುದಕ್ಕೂ ಕಷ್ಟದ ಪರಿಸ್ಥಿತಿ ಇದೆ. ನಮಗೆ ಒಂದು ರಸ್ತೆ ನಿರ್ಮಾಣ ಮಾಡಿಕೊಟ್ಟಲ್ಲಿ ಎಲ್ಲ ರೀತಿಯಿಂದಲೂ ಅನುಕೂಲವಾಗಲಿದೆ ಎಂದು ಸ್ಥಳೀಯರಾದ ಸಣ್ಣಪ್ಪ ನಾಯ್ಕ್‌ ಹೇಳಿದ್ದಾರೆ.

ರಸ್ತೆ ಇಲ್ಲದೆ ಕೃಷಿ ಚಟುವಟಿಗೂ ತೊಂದರೆ

ರಸ್ತೆ ಇಲ್ಲದೆ ಕೃಷಿ ಚಟುವಟಿಗೂ ತೊಂದರೆ

ಇನ್ನು ಬೆರಡೆ ಗ್ರಾಮವು ಐಎನ್ಎಸ್ ಕದಂಬ ನೌಕಾನೆಲೆಯ ಭೂಮಿಗೆ ಹೊಂದಿಕೊಂಡೇ ಇದ್ದು, ಗ್ರಾಮದ ಸುಮಾರು ಶೇಕಡಾ 50ರಷ್ಟು ಜಮೀನನ್ನು ನೌಕಾದಳದವರು ಈಗಾಗಲೇ ವಶಪಡಿಸಿಕೊಂಡಿದ್ದಾರೆ. ಇನ್ನು ಗ್ರಾಮಕ್ಕೆ ಸಾಗುವ ದಾರಿಯೂ ಈ ಹಿಂದೆಯೇ ನೌಕಾನೆಲೆಯ ವ್ಯಾಪ್ತಿಗೆ ಹೋಗಿದ್ದು, ಇದಾದ ನಂತರ ಗ್ರಾಮಕ್ಕೆ ರಸ್ತೆಯೇ ಇಲ್ಲದಂತಾಗಿದೆ. ಇನ್ನು ಸುಮಾರು 150 ಎಕರೆಗೂ ಅಧಿಕ ಭೂಮಿ ಇಂದಿಗೂ ರೈತರದ್ದೇ ಆಗಿದ್ದು ಕೃಷಿ ಚಟುವಟಿಕೆಯನ್ನು ಮಾಡುತ್ತಾ ಬಂದಿದ್ದಾರೆ.

ಮಳೆಗಾಲದಲ್ಲಿ ಹೆಚ್ಚುವ ಬೆರಡೆ ಗ್ರಾಮಸ್ಥರ ಪರದಾಟ

ಮಳೆಗಾಲದಲ್ಲಿ ಹೆಚ್ಚುವ ಬೆರಡೆ ಗ್ರಾಮಸ್ಥರ ಪರದಾಟ

ಗ್ರಾಮದಲ್ಲಿ ರಸ್ತೆ ಇಲ್ಲದೆ ಬಹುತೇಕ ಎಲ್ಲರೂ ಬೇರೆ ಬೇರೆ ಊರುಗಳಿಗೆ ಹೋಗಿ ನೆಲೆಸಿದ್ದಾರೆ. ಪ್ರತಿದಿನ ಜಮೀನಿಗೆ ಕಿರಿದಾದ ಕಾಲುದಾರಿಯಲ್ಲಿಯೇ ಕಷ್ಟಪಟ್ಟು ಓಡಾಟ ನಡೆಸುತ್ತಾರೆ. ಗ್ರಾಮದಲ್ಲಿನ ಜನರಿಗೆ ಹೊತ್ತಿನ ಊಟಕ್ಕೆ ಏನಾದರು ಬೇಕು ಎಂದರೂ ಕೂಡ ನಡೆದುಕೊಂಡೆ ದೂರಾದ ಐದಾರು ಕಿ.ಮೀ ಅಂಕೋಲಾಗೆ ತೆರಳಿ ತರಬೇಕು. ಅಲ್ಲದೇ ಹಳ್ಳ ಕೂಡ ಇರುವ ಕಾರಣ ಮಳೆಗಾಲದಲ್ಲಿ ಹಲವು ಮಂದಿ ಆಪತ್ತುತಂದುಕೊಂಡ ಘಟನೆ ಕೂಡ ನಡೆದಿದೆ. ನೌಕಾನೆಲೆ ಜಾಗ ಪಕ್ಕದಲ್ಲಿಯೇ ಇರುವ ಕಾರಣ ಅವರು ಕೂಡ ಹೆದರಿಸುತ್ತಾರೆ. ರಸ್ತೆ ನಿರ್ಮಿಸಿಕೊಡುವಂತೆ ಹಲವು ಬಾರಿ ಜನಪ್ರತಿನಿಧಿಗಳ ಬಳಿ ಮನವಿ ಮಾಡಿಕೊಂಡರು ಯಾರು ಸ್ಪಂದಿಸುತ್ತಿಲ್ಲ. ಪ್ರತಿ ಬಾರಿ ಯಾರೇ ಮೃತಪಟ್ಟರು ಈ ದುಸ್ಥಿತಿ ಇದೆ. ಕೂಡಲೇ ನಮಗೆ ಕನಿಷ್ಟ ಒಂದು ರಸ್ತೆ ನಿರ್ಮಾಣ ಮಾಡಿಕೊಟ್ಟಲ್ಲಿ ಹೆಚ್ಚು ಅನುಕೂಲವಾಗಲಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಇನ್ನೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು

ಇನ್ನೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು

ಇನ್ನು ಜಮೀನನ್ನು ನೌಕಾನೆಲೆಯವರೇ ಪೂರ್ಣ ತೆಗೆದುಕೊಳ್ಳಲಿ. ಇಲ್ಲದಿದ್ದರೇ ಇರುವ ಜಮೀನಿಗೆ ತೆರಳಿ ಕೃಷಿ ಮಾಡಲು, ಮನೆಗಳಿಗೆ ತೆರಳಲು ರಸ್ತೆಯನ್ನಾದರು ಸರ್ಕಾರ ನಿರ್ಮಿಸಿಕೊಡಲಿ. ಹೆದ್ದಾರಿ ಸಮೀಪದಲ್ಲೇ ಇರುವ ಗ್ರಾಮ ರಸ್ತೆ ಇಲ್ಲದೇ ಕುಗ್ರಾಮ ಆಗಿದೆ. ಕನಿಷ್ಟ ಮೂಲಭೂತ ಸೌಕರ್ಯವನ್ನಾದರು ಒದಗಿಸಿ ಎನ್ನುವುದು ಗ್ರಾಮಸ್ಥರ ಆಗ್ರಹವಾಗಿದೆ.

ಮೂಲಭೂತ ಸೌಕರ್ಯವಾದ ರಸ್ತೆ ಇಲ್ಲದೇ ಶವವನ್ನು ಕಟ್ಟಿಗೆಗೆ ಕಟ್ಟಿಕೊಂಡು ಸಾಗಾಟ ಮಾಡಿದ್ದು ನಿಜಕ್ಕೂ ದುರಂತವೇ. ಸಂಬಂಧ ಪಟ್ಟ ಅಧಿಕಾರಿಗಳು ಈ ಬಗ್ಗೆ ಎಚ್ಚೆತ್ತು ಗ್ರಾಮಕ್ಕೆ ರಸ್ತೆ ಸಂಪರ್ಕ ಮಾಡುವ ಕಾರ್ಯವನ್ನ ಮಾಡಬೇಕಾಗಿದೆ.

English summary
Ankola taluk Berdai villagers carrying dead body 5KM by walk due to lack of road access.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X