ಕಾರವಾರ: ಮಗಳಿಗೆ ಹಿಗ್ಗಾ ಮುಗ್ಗಾ ಥಳಿಸಿದ ತಾಯಿ, ಅಸಲಿ ಕಾರಣವೇನು?
ಕಾರವಾರ, ಸೆಪ್ಟೆಂಬರ್.05: ತಾಯಿಯೇ ತನ್ನ ಮಗಳಿಗೆ ಹಿಗ್ಗಾಮುಗ್ಗ ಥಳಿಸಿ, ಅಮಾನುಷವಾಗಿ ವರ್ತಿಸಿದ ಘಟನೆ ನಗರದ ಪಿಂಗೆ ರಸ್ತೆಯಲ್ಲಿ ನಡೆದಿದೆ. ಪಿಂಗೆ ರಸ್ತೆಯ ರೇಣುಕಾ ಗೋಕರ್ಣ ತನ್ನ ಹನ್ನೆರಡು ವರ್ಷದ ಮಗಳ ಮೇಲೆ ಭಾನುವಾರ ಹಲ್ಲೆ ನಡೆಸಿದ್ದಾರೆ. ಇದರಿಂದಾಗಿ ಬಾಲಕಿಯ ದೇಹದ ಮೇಲೆ ಅಲ್ಲಲ್ಲಿ ಗಾಯಗಳಾಗಿವೆ.
ಹೀಗೆ ಯದ್ವಾ ತದ್ವಾ ಮಗಳಿಗೆ ಹೊಡೆದದ್ದು ಏಕೆ? ಎಂದು ರೇಣುಕಾಗೆ ಪ್ರಶ್ನಿಸಿದರೆ ಆಕೆಯಿಂದ ಬಂದ ಉತ್ತರ ಹೀಗಿತ್ತು...

"ಕಳೆದ ಆರು ತಿಂಗಳಿನಿಂದ ಪಿಂಗೆ ರಸ್ತೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇನೆ. ಎರಡು ತಿಂಗಳಿನಿಂದ ಕೆಲಸಕ್ಕೆ ಹೋಗಿರದ ಕಾರಣ ಎರಡು ತಿಂಗಳ ಬಾಡಿಗೆ ಕಟ್ಟಿರಲಿಲ್ಲ. ಇದೇ ಕಾರಣಕ್ಕೆ ವಿದ್ಯುತ್ ಕಡಿತಗೊಳಿಸಲಾಗಿದೆ.

ಇದರೊಂದಿಗೆ ಮಕ್ಕಳು ಅಂಗಳದಲ್ಲಿ ಆಟ ಆಡುವಾಗ ಆಡದಂತೆ ಆಕ್ಷೇಪ ಎತ್ತುತ್ತಾರೆ. ಮನೆಯಲ್ಲಿ ಕಳ್ಳತನ ಮಾಡುತ್ತಾರೆ ಎಂದು ಆರೋಪಿಸುತ್ತಾರೆ. ಇದರಿಂದಾಗಿ ಮಾಲೀಕರ ಮನೆಯಲ್ಲಿ ಆಟ ಆಡುತ್ತಿದ್ದಾಗ ಮಗಳಿಗೆ ಅಲ್ಲಿ ಹೋಗದಂತೆ ಆಕೆಗೆ ಹೊಡೆದಿದ್ದು ನಿಜ" ಎನ್ನುತ್ತಾಳೆ ರೇಣುಕಾ.

ಮದ್ಯ ಸೇವನೆ, ಅನೈತಿಕ ಸಂಬಂಧ?
ಅಸಲಿಗೆ ರೇಣುಕಾ ಮದ್ಯ ಸೇವನೆ ಮಾಡುತ್ತಾಳೆ. ಜತೆಗೆ, ಅನೈತಿಕ ಸಂಬಂಧವನ್ನು ಹೊಂದಿದ್ದಾಳೆ. ಹೀಗಾಗಿ ಈಕೆಯ ಮೊಬೈಲ್ ಗೆ ಅನೇಕರ ಕರೆಗಳು ಬರುತ್ತಿದ್ದವು. ಮಗಳು ಇದನ್ನು ಅನೇಕ ಬಾರಿ ಪ್ರಶ್ನಿಸಿದ್ದಳು ಎಂದು ಸ್ಥಳೀಯರು ಹೇಳುತ್ತಾರೆ.
ಇದೀಗ ಬಾಲಕಿಗೆ ಥಳಿಸಿದ ವೀಡಿಯೋವನ್ನು ಮನೆಯ ಮಾಲಕಿಯ ಮಗಳು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದು, ಇದೀಗ ಎಲ್ಲೆಡೆ ವೈರಲ್ ಆಗಿದೆ.












Click it and Unblock the Notifications