ಅಂಕೋಲಾ ಡೋಂಗ್ರಿ ಗ್ರಾ.ಪಂನಲ್ಲಿ ಅಕ್ರಮ: ಕಾಮಗಾರಿ ನಡೆಸದೆ ಹಣ ಕಬಳಿಕೆ ಆರೋಪ!
ಕಾರವಾರ, ಜುಲೈ 13: ನೀರಿನ ಪೈಪ್‌ಲೈನ್ ರಿಪೇರಿ ಸೇರಿದಂತೆ ಇನ್ನಿತರ ಕಾಮಗಾರಿಗಳ ಹೆಸರಿನಲ್ಲಿ ಅಂಕೋಲಾ ತಾಲೂಕಿನ ಡೋಂಗ್ರಿ ಗ್ರಾಮ ಪಂಚಾಯಿತಿಯಲ್ಲಿ ಹಣದ ಅವ್ಯವಹಾರವಾಗಿರುವುದು ಆರ್‌ಟಿಇ ಅಡಿ ಪಡೆದ ದಾಖಲೆಗಳಲ್ಲಿ ಬಹಿರಂಗಗೊಂಡಿದ್ದು, ಇದೀಗ ಸ್ಥಳೀಯರು ತನಿಖೆಗೆ ಆಗ್ರಹಿಸಿದ್ದಾರೆ.
ಡೋಂಗ್ರಿ ಪಂಚಾಯಿತಿಯಲ್ಲಿ ನೀರಿನ ಪೈಪ್‌ಲೈನ್ ರಿಪೇರಿ ಹೆಸರಿನಲ್ಲಿ ಪೈಪ್‌ಗಳನ್ನು ಖರೀದಿಸಿದ್ದಾರೆ. ಅಲ್ಲದೇ ಕಾಮಗಾರಿ ಪೂರ್ಣಗೊಂಡಿರುವುದಾಗಿಯೂ ಪೂರ್ಣ ಹಣ ಪಾವತಿ ಮಾಡಲಾಗಿದೆ. ಆದರೆ ಸ್ಥಳ ಪರಿಶೀಲನೆ ಮಾಡಿದರೆ ಯಾವುದೇ ಪೈಪ್ ಇಲ್ಲ. ಅಲ್ಲದೆ ಪೈಪಗಳ ಖರೀದಿ ದರ ಕೂಡ ದುಪ್ಪಟ್ಟಾಗಿದ್ದು, ಇದರಿಂದ ಹಣ ದುರುಪಯೋಗವಾಗಿರುವ ಅನುಮಾನ ಮೂಡುತ್ತಿದೆ ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಶಿವರಾಮ ಗಾಂವಕರ್ ಆರೋಪಿಸಿದ್ದಾರೆ.

ವರ್ಷದ ಹಿಂದಿನ ಜೆಜೆಎಂ ಕಾಮಗಾರಿಗೂ ದುರಸ್ತಿ ಬಿಲ್
ವರ್ಷದ ಹಿಂದೆ ಜೆಜೆಎಂ ಯೋಜನೆಯಡಿ 14 ಲಕ್ಷ ವೆಚ್ಚದಲ್ಲಿ ಪಂಚಾಯಿತಿ ವ್ಯಾಪ್ತಿಯ ಹುಲಿದೇವರ ಬೇಣಕ್ಕೆ ನೀರಿನ ವ್ಯವಸ್ಥೆ ಮಾಡಲಾಗಿದೆ. ಆದರೆ ಇದೇ ಯೋಜನೆಗೆ ಮತ್ತೆ ಪೈಪ್ ರಿಪೇರಿಗೆ ಸುಳ್ಳು ಬಿಲ್ ಸೃಷ್ಟಿಸಿ ಹಣ ಬಿಡುಗಡೆ ಮಾಡಿದ್ದಾರೆ. ಜೆಜೆಎಂ ಯೋಜನೆ ಮಾಹಿತಿಯನ್ನು ಪಂಚಾಯಿತಿಯಲ್ಲಿ ಕೇಳಿದರೇ ಮಾಹಿತಿ ಇಲ್ಲ ಎನ್ನುತ್ತಾರೆ. ಆದರೆ ಇದೇ ಮಾಹಿತಿಯನ್ನು 2021ರಲ್ಲಿ ಪಂಚಾಯಿತಿಗೆ ಹಸ್ತಾಂತರ ಮಾಡಿದ್ದಾರೆ. ಆದರೆ ಮಾಹಿತಿ ಮುಚ್ಚಿಡಲಾಗುತ್ತಿದೆ. ಅಧಿಕಾರಿಗಳಿಗೆ ಪೈಪ್‌ಲೈನ್ ತೋರಿಸುವಂತೆ ಪತ್ರಬರೆದು ಕೇಳಿದರು ಈವರೆಗೂ ಯಾವುದೇ ಪ್ರತಿಕ್ರಿಯೇ ನೀಡಿ ಅನುಮಾನ ಹೆಚ್ಚಿಸಿದೆ ಎಂದು ಆರೋಪಿಸಿದರು.
ಸದಸ್ಯರ ಕುಟುಂಬಸ್ಥರ ಹೆಸರಿಗೂ ಚೆಕ್
ಇನ್ನು ಕಾನೂನಿನಲ್ಲಿ ಪಂಚಾಯತ್‌ದ ಸದಸ್ಯರು ಹಾಗೂ ಹತ್ತಿರದ ಸಂಬಂಧಿಗಳು ಪಂಚಾಯತಿಯ ಅನುದಾನವನ್ನು ಮತ್ತು ಕಾಮಗಾರಿಯನ್ನು ಪಡೆಯುವಂತಿಲ್ಲ. ಆದರೆ ಪಂಚಾಯತ್‌ದಲ್ಲಿ ಮೂರು ಜನ ಸದಸ್ಯರು ಪಂಚಾಯತ್ ಅನುದಾನ ಮತ್ತು ಕಾಮಗಾರಿ ಮಾಡಿದ್ದು, ಅಧಿಕೃತ ದಾಖಲೆಯಾಗಿ ಚೆಕ್ ಹಾಗೂ ಕಾಮಗಾರಿ ನಡೆಸಿರುವ ಬಗ್ಗೆ ಅವರೇ ಸಲ್ಲಿಕೆ ಮಾಡಿದ ವಿವರಗಳು ಇದೆ ಎಂದು ದೂರಿದ್ದಾರೆ.

ಇನ್ನು ಪಂಚಾಯತಿಯಲ್ಲಿ ಅವ್ಯವಹಾರವಾಗುತ್ತಿರುವ ಬಗ್ಗೆ ಜಿಲ್ಲಾ ಪಂಚಾಯಿತಿ ಸಿಇಓ ಅವರಿಗೆ ಜನವರಿ 30ರಂದು ದೂರು ನೀಡಲಾಗಿತ್ತು. ಆದರೆ ಈವರೆಗೂ ವಿಚಾರಣೆ ನಡೆಸಿಲ್ಲ. ಅಂದು ಕೇಳಿದಾಗ ಚುನಾವಣೆ ಎಂದಿದ್ದರು. ಕಳೆದ ಕೆಲ ದಿನಗಳ ಹಿಂದೆ ಮತ್ತೆ ಕೇಳಿದಾಗ ನೆರೆ ಕೆಲಸದಲ್ಲಿರುವುದಾಗಿ ತಿಳಿಸಿದರು. ಆದರೆ ಪಂಚಾಯಿತಿಯಲ್ಲಿ ಭ್ರಷ್ಟಾಚಾರ ಆರೋಪ ಇದ್ದರೂ ಇವರೆಗೂ ಯಾವುದೇ ತನಿಖೆ ನಡೆದ ಬಗ್ಗೆ ಮಾಹಿತಿ ಇಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ತಪ್ಪಿತಸ್ಥರ ವಿರುದ್ಧ ಜಿಲ್ಲಾಧಿಕಾರಿಗಳಿಗೆ ದೂರು
ಡೋಂಗ್ರಿ ಗ್ರಾಮ ಪಂಚಾಯಿತಿಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಮಾಹಿತಿ ಹಕ್ಕಿನಡಿ ಲಭ್ಯವಾದ ದಾಖಲೆಯಿಂದ ಬಯಲಾಗಿದೆ. ಈಗಾಗಲೇ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ತನಿಖೆಯಾಗಿಲ್ಲ. ಇನ್ನು ಅಕ್ರಮದ ಬಗ್ಗೆ ಅಗತ್ಯ ತನಿಖೆ ಮಾಡುವುದರ ಜೊತೆಗೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಊರಿನ ಗ್ರಾಮಸ್ಥರು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರನ್ನು ಭೇಟಿಯಾಗಿ ದೂರು ಸಲ್ಲಿಸಿದ್ದಾರೆ. ಸೂಕ್ತ ತನಿಖೆ ನಡೆಯದಿದ್ದರೆ ಕಾನೂನಾತ್ಮಕ ಹಾಗೂ ರಾಜ್ಯಮಟ್ಟದ ಹೋರಾಟ ಮಾಡುವುದಾಗಿಯೂ ಸಹ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications