6 ವರ್ಷದಲ್ಲಿ ಕಾರವಾರ ಜಿಲ್ಲೆಯ 13 ಸರ್ಕಾರಿ ಶಾಲೆಗಳಿಗೆ ಬೀಗ, ಕಾರಣ ಏನು?, ಇಲ್ಲಿದೆ ವಿವರ
ಕಾರವಾರ, ಜುಲೈ, 21: ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರದಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕ್ಕೊಳ್ಳಲಾಗುತ್ತಿದೆ. ಆದರೆ ಗಡಿ ಜಿಲ್ಲೆ ಕಾರವಾರದಲ್ಲಿ ವರ್ಷದಿಂದ ವರ್ಷಕ್ಕೆ ಕನ್ನಡ ಶಾಲೆಗಳಿಗೆ ದಾಖಲಾಗುವವರ ಸಂಖ್ಯೆ ಕಡಿಮೆಯಾಗಿದ್ದು, ಪ್ರಸಕ್ತ ಸಾಲಿನಲ್ಲಿ 3 ಶಾಲೆ ಸೇರಿ ಕಳೆದ 6 ವರ್ಷದಲ್ಲಿ ಒಟ್ಟು 13 ಶಾಲೆಗಳಲ್ಲಿ ಮಕ್ಕಳಿಲ್ಲದೆ ಶಾಲೆಗಳನ್ನು ಬಂದ್ ಮಾಡಲಾಗಿದೆ.
ಕರ್ನಾಟಕ ಗೋವಾ ಗಡಿಭಾಗವಾದ ಕಾರವಾರದಲ್ಲಿ ಕನ್ನಡ, ಕೊಂಕಣಿ, ಮರಾಠಿ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಗಡಿಭಾಗದಲ್ಲಿ ಖಾಸಗಿ ಹಾಗೂ ಅನುದಾನಿತ ಶಾಲೆಗಳು ತಲೆ ಎತ್ತಿದ ಹಿನ್ನಲೆಯಲ್ಲಿ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳತ್ತ ತೆರಳುವ ವಿದ್ಯಾರ್ಥಿಗಳ ಸಂಖ್ಯೆ ಕೂಡ ಕಡಿಮೆಯಾಗತೊಡಗಿದೆ.

ಪ್ರಸಕ್ತ ಸಾಲಿನಲ್ಲಿ ದಾಖಲಾತಿ ಇಲ್ಲದೆ ಕಾರವಾರದ ಎಲ್‌ಪಿಎಸ್ ಸಕಲಬಾಳ್ನಿ ಹಾಗೂ ಗೋಪಿಶಿಟ್ಟಾ 2 ಶಾಲೆಗಳನ್ನು ಮುಚ್ಚಲಾಗಿದೆ. ಇನ್ನು ಸಂಕ್ರುವಾಡದಲ್ಲಿಯೂ ಕೇವಲ ಒಂದು ಮಗು ಮಾತ್ರ ದಾಖಲಾಗಿತ್ತಾದರೂ ಆ ಮಗು ಕೂಡ ಇದೀಗ ಬೇರೆ ಶಾಲೆಗೆ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಆ ಶಾಲೆಯನ್ನು ಕೂಡ ಮುಚ್ಚಲಾಗಿದೆ. ಅಲ್ಲದೆ ಇಲ್ಲಿನ ಶಿಕ್ಷಕರನ್ನು ಬೇರೆ ಕಡೆ ನೇಮಕ ಮಾಡಲಾಗಿದೆ ಎನ್ನುವ ಆತಂಕಕಾರಿ ಮಾಹಿತಿಯೊಂದು ಲಭ್ಯವಾಗಿದೆ.
ಇನ್ನು ಅಷ್ಟೇ ಅಲ್ಲದೆ 2017-18ನೇ ಸಾಲಿನಲ್ಲಿ 3 ಸರ್ಕಾರಿ ಶಾಲೆ, 2019-20ನೇ ಸಾಲಿನಲ್ಲಿ 2, 2020-21ನೇ ಸಾಲಿನಲ್ಲಿ 1, 2021-22ನೇ ಸಾಲಿನಲ್ಲಿ 2 ಹಾಗೂ 2022-23ನೇ ಸಾಲಿನಲ್ಲಿ 2 ಶಾಲೆಗಳು ವಿದ್ಯಾರ್ಥಿಗಳಿಲ್ಲದೇ ಬಂದ್ ಮಾಡಲಾಗಿತ್ತು. ಇನ್ನು ಹಣಕೋಣದ ಸಾತೇರಿ ಅನುದಾನಿತ ಪ್ರೌಢ ಶಾಲೆಯಲ್ಲಿ 10ನೇ ತರಗತಿಗೆ 14 ಹಾಗೂ 9ನೇ ತರಗತಿಗೆ ಓರ್ವ ವಿದ್ಯಾರ್ಥಿ ಮಾತ್ರ ಇದ್ದಾರೆ. ಇದರಿಂದ ಈ ಶಾಲೆ ಕೂಡ ಬಂದ್ ಆಗುವ ಹಂತಕ್ಕೆ ತಲುಪಿದೆ.
ಇದಲ್ಲದೇ ಸುಮಾರು ಹತ್ತು ಶಾಲೆಗಳಲ್ಲಿ ಕೇವಲ ಎರಡೇ ವಿದ್ಯಾರ್ಥಿಗಳು ದಾಖಲಾಗಿವೆ. ಇಲ್ಲಿನ ಶಿಕ್ಷಕರನ್ನು ಬೇರೆಡೆಗೆ ನಿಯುಕ್ತಿಗೊಳಿಸಲಾಗಿದೆ ಎಂದು ಕಾರವಾರ ಬಿಇಓ ಚಂದ್ರಹಾಸ ರಾಯ್ಕರ ಮಾಹಿತಿ ನೀಡಿದ್ದಾರೆ. ಇನ್ನು ಈ ಹಿಂದೆ ಗಡಿ ಭಾಗವಾದರು ಕನ್ನಡ ಶಾಲೆಗಳಿಗೆ ಕೆಲ ವರ್ಷಗಳಿಂದ ಸಾಕಷ್ಟು ಬೇಡಿಕೆ ಇತ್ತು. ಆದರೆ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ, ಮೂಲಭೂತ ಸೌಕರ್ಯ ಹಾಗೂ ಇಂಗ್ಲೀಷ್ ವ್ಯಾಮೋಹದಿಂದಾಗಿ ಇಂತಹ ಸ್ಥಿತಿ ಬಂದಿದೆ.
ಆದ್ದರಿಂದ ಸರ್ಕಾರ ಗಡಿಭಾಗದ ಶಾಲೆಗಳಿಗೆ ವಿಶೇಷ ಒತ್ತು ನೀಡಿ ಸೌಲಭ್ಯ ಕಲ್ಪಿಸಬೇಕು. ಶಾಲೆಗಳಿಗೆ ಅವಶ್ಯವಿರುವಷ್ಟು ಶಿಕ್ಷಕರನ್ನು ನೇಮಿಸಬೇಕು. ಕಾರವಾರದಲ್ಲಿ ಎರಡು ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯಬೇಕು. ಇಲ್ಲಿ ಆಂಗ್ಲಭಾಷೆ ಶಿಕ್ಷಕರಿಲ್ಲ. ಇಂತಹ ಕಾರಣದಿಂದ ಪಾಲಕರು ಕೂಡ ಹಿಂದೇಟು ಹಾಕುತ್ತಿದ್ದಾರೆ ಎಂದು ಸ್ಥಳೀಯರಾದ ಕಿಶನ್ ಕಾಂಬಳೆ ಅವರು ಹೇಳಿದ್ದಾರೆ.
ಸೌಲಭ್ಯ ಒದಗಿಸಿ ಕನ್ನಡ ಶಾಲೆ ಉಳಿಸಿ
ಇನ್ನು ಗಡಿ ಜಿಲ್ಲೆ ಕಾರವಾರದಲ್ಲಿ ಕನ್ನಡ ಶಾಲೆಗಳನ್ನು ಮುಚ್ಚುತ್ತಿರುವುದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಖಂಡನೆ ವ್ಯಕ್ತಪಡಿಸಿದೆ. ಸಂಘದ ಜಿಲ್ಲಾಧ್ಯಕ್ಷ ಭಾಸ್ಕರ್ ಪಟಗಾರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿರುವ ಕಾರ್ಯಕರ್ತರು ಕನ್ನಡ ಉಳಿವಿಗೆ ಕನ್ನಡ ಶಾಲೆಗಳ ಪಾತ್ರ ಬಹು ಮುಖ್ಯವಾಗಿರುವುದರಿಂದ ಯಾವುದೇ ಕನ್ನಡ ಶಾಲೆಗಳು ಮುಚ್ಚದಂತೆ ಸರ್ಕಾರ ನೋಡಿಕೊಳ್ಳಬೇಕು. ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸಬೇಕು.
ಅಗತ್ಯವಿರುವಲ್ಲಿ ಕಟ್ಟಡ ಸರಿಮಾಡಿಸಬೇಕು. ಹಾಗೂ ಪೂರ್ಣ ಪ್ರಮಾಣದ ಶಿಕ್ಷಕರ ನೇಮಕ ಮಾಡಬೇಕು. ಸರ್ಕಾರಿ ನೇಮಕಾತಿಯಲ್ಲಿ ಇಂಜಿನಿಯರಿಂಗ್, ಮೆಡಿಕಲ್ ಸೀಟು ಹಂಚಿಕೆ ವೇಳೆ ಮೀಸಲಾತಿ ನಿಗದಿ ಮಾಡಬೇಕು. ಆಗ ಕನ್ನಡ ಶಾಲೆಗೆ ವಿದ್ಯಾರ್ಥಿಗಳು ಹೆಚ್ಚಾಗಿ ಬರಲು ಆಸಕ್ತಿ ವಹಿಸುತ್ತಾರೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಶೀಘ್ರದಲ್ಲೇ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.












Click it and Unblock the Notifications