ಕೈಗಾ ಅಣು ವಿದ್ಯುತ್ ಸ್ಥಾವರ; ಐದು ಮತ್ತು ಆರನೇ ಘಟಕಕ್ಕೆ ಎನ್‌ಜಿಟಿ ತಡೆ
ಕಾರವಾರ, ಅಕ್ಟೋಬರ್, 14: ಕೈಗಾ ಅಣು ವಿದ್ಯುತ್ ಸ್ಥಾವರ ಐದು ಮತ್ತು ಆರನೇ ಘಟಕ ಪ್ರಾರಂಭಿಸಿದರೆ ನಮಗೆ ಅಪಾರವಾದ ತೊಂದರೆಗಳು ಆಗುತ್ತವೆ ಎಂದು ಜನರು ಆರೋಪ ಮಾಡಿದ್ದರು. ಇದೀಗ ಕೈಗಾದ ಅನುಮೋದನೆಯನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎಸ್‌ಜಿಟಿ) ಯ ದಕ್ಷಿಣ ವಲಯ ಪೀಠ ಅಮಾನತ್ತುಗೊಳಿಸಿದೆ. ಮಾರಕ ಯೋಜನೆ ಕೈಗಾ ಐದು ಮತ್ತು ಆರನೇ ಘಟಕ ಸ್ಥಾಪನೆಗೆ ತಡೆ ನೀಡಿರುವುದಕ್ಕೆ ಸ್ಥಳೀಯರು ಸಂತೋಷ ವ್ಯಕ್ತಪಡಿಸಿದ್ದಾರೆ.
ಕಾರವಾರ ತಾಲೂಕು ಪರಿಸರ ಸೂಕ್ಷ್ಮ ಪ್ರದೇಶವನ್ನೇ ಹೆಚ್ಚಾಗಿ ಹೊಂದಿದೆ. ಈ ಪ್ರದೇಶದಲ್ಲಿ ಸಾಕಷ್ಟು ವಿರೋಧದ ನಡುವೆಯೂ ಕೈಗಾ ಅಣು ವಿದ್ಯುತ್ ಸ್ಥಾವರವನ್ನು ನಿರ್ಮಾಣ ಮಾಡಿ ವಿದ್ಯುತ್ ಉತ್ಪಾದನೆ ಮಾಡಲಾಗುತಿತ್ತು. ಆದರೆ ಮತ್ತೆ ಹೆಚ್ಚುವರಿಯಾಗಿ ತಲಾ 700 ಮೆಗಾವಾಟ್ ಸಾಮರ್ಥ್ಯದ ಐದು ಮತ್ತು ಆರನೇ ಘಟಕಗಳ ಸ್ಥಾಪನೆಗೆ ಅಣುಶಕ್ತಿ ನಿಯಂತ್ರಣ ಮಂಡಳಿಯು ಅನುಮತಿ ನೀಡಿತ್ತು. ಅಲ್ಲದೆ ಕೇಂದ್ರ ಸಚಿವ ಸಂಪುಟವು 2017ರಲ್ಲೇ ಇದಕ್ಕೆ ಅನುಮೋದನೆ ನೀಡಿತ್ತು. ಇದರಿಂದ ಪರಿಸರ ಸೂಕಕ್ಷ್ಮ ವಲಯ ಹಾಗೂ ಜನರ ಆರೋಗ್ಯದ ಮೇಲೆ ಪರಿಣಾಮ ಬಿರುತ್ತಿತ್ತು. ಆದ್ದರಿಂದ ಈ ಯೋಜನೆ ವಿರುದ್ಧ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು.

ಜನರ ವಿರೋಧದ ನಡುವೆಯೂ ಅನುಮತಿ
ಜನರ ಮನವಿಯನ್ನು ಲೆಕ್ಕಿಸದೇ ಐದು ಹಾಗೂ ಆರನೇ ಘಟಕಗಳಿಗೆ ಕೇಂದ್ರ ಸರ್ಕಾರದ ಅರಣ್ಯ ಮತ್ತು ಪರಿಸರ ಖಾತೆ ಸಚಿವಾಲಯ ಅನುಮೋದನೆಯನ್ನು ನೀಡಿತ್ತು. ಇದರಿಂದ ಆಕ್ರೋಶಗೊಂಡ ಜನರು ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಯೋಜನೆ ಅನುಷ್ಠಾನ ಮಾಡಲಾಗುತ್ತದೆ ಎಂದು ಆರೋಪಿಸಿದ್ದರು. ಕೈಗಾ ಅಣು ವಿದ್ಯುತ್ ಸ್ಥಾವರದ ಐದು ಹಾಗೂ ಆರನೇ ಘಟಕವನ್ನು ವಿರೋಧಿ ಹೋರಾಟ ಸಮಿತಿಯು ಎನ್‌ಜಿಟಿ ಮೆಟ್ಟಿಲೇರಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ರಾಮಕೃಷ್ಣನ್ ಹಾಗೂ ಡಾ.ಸತ್ಯಗೋಪಾಲ್ ಕೊರ್ಲಪಾಟಿ ಅವರನ್ನು ಒಳಗೊಂಡ ಪೀಠ ಕೈಗಾ ಅಣು ವಿದ್ಯುತ್ ಸ್ಥಾವರದ ಐದು ಹಾಗೂ ಆರನೇ ಘಟಕಗಳಿಗೆ ನೀಡಿರುವ ಅನುಮೋದನೆಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಈ ಎರಡು ಘಟಕಗಳ ಪ್ರದೇಶ ಪರಿಸರ ಸೂಕ್ಷ್ಮ ಪ್ರದೇಶದೊಳಗೆ ಬರುತ್ತದೆಯೇ ಎಂಬುದನ್ನು ಸಚಿವಾಲಯ ಪರಿಶೀಲನೆ ನಡೆಸಬೇಕು. ಜೊತೆಗೆ ಯೋಜನೆ ಅನುಷ್ಠಾನದಿಂದ ಕೈಗಾ ಗ್ರಾಮದ ಮೇಲೆ ಏನಾದರೂ ಪರಿಣಾಮ ಆಗಲಿದೆಯೇ ಎನ್ನುವ ಬಗ್ಗೆಯೂ ಪರಿಶೀಲಿಸಬೇಕು ಎಂದು ನ್ಯಾಯಪೀಠ ತಿಳಿಸಿದೆ.

ಕೈಗಾ ಘಟಕಗಳ ವಿರುದ್ದ ಸಿಡಿದೆದ್ದಿದ್ದ ಜನರು
ಘಟಕಗಳ ಆರಂಭದಿಂದ ಕಾಳಿ ನದಿ, ಅದರ ಅಣೆಕಟ್ಟಿನ ಮೇಲಾಗುವ ಪರಿಣಾಮ, ನೀರಿನ ಲಭ್ಯತೆ, ನದಿ ತೀರದ ಜನರ ಮೇಲಾಗುವ ಪರಿಣಾಮಗಳ ಕುರಿತ ಅಧ್ಯಯನ ವರದಿಯನ್ನು ಸಲ್ಲಿಸಬೇಕು. ಈ ಯೋಜನೆಯಿಂದ ಪರಿಸರ ಸೂಕ್ಷ್ಮ ಪ್ರದೇಶದ ಮೇಲಾಗುವ ತೊಂದರೆ, ಘಟಕಗಳಿಂದ ಬರುವ ಅಣು ವಿಕಿರಣಗಳಿಂದ ಜನರ ಆರೋಗ್ಯದ ಮೇಲಾಗುವ ಪರಿಣಾಮದ ಬಗ್ಗೆಯೂ ಅಧ್ಯಯನ ವರದಿ ಸಲ್ಲಿಸಬೇಕು. ಈ ಎಲ್ಲ ಪ್ರಕ್ರಿಯೆಗಳನ್ನು ಆರು ತಿಂಗಳ ಒಳಗೆ ಪೂರ್ಣಗೊಳಿಸಬೇಕು. ಬಳಿಕ ಒಂದು ತಿಂಗಳಿನಲ್ಲಿ ಪರಿಸರ ಅನುಮೋದನೆ ನೀಡಬೇಕೇ ಬೇಡವೇ ಎನ್ನುವ ಬಗ್ಗೆ ಕೇಂದ್ರ ಪರಿಸರ ಸಚಿವಾಲಯ ತೀರ್ಮಾನಿಸಬೇಕು ಎಂದು ಪೀಠ ತಿಳಿಸಿದೆ. ಇದರಿಂದಾಗಿ ಜಿಲ್ಲೆಯ ಜನರ ಹೋರಾಟಕ್ಕೆ ಇದೀಗ ಜಯ ಸಿಕ್ಕಂತಾಗಿದೆ ಎಂದು ವಕೀಲರು ಮತ್ತು ಪರಿಸರ ಹೋರಾಟ ಸಮಿತಿ ಸದಸ್ಯರಾದ ಕೆ.ಆರ್.ದೇಸಾಯಿ ಸಂತೋಷ ವ್ಯಕ್ತಪಡಿಸಿದ್ದಾರೆ.

ಕುಡಿಯುವ ನೀರು ಮಲೀನ, ಜನಾಕ್ರೋಶ
ಇನ್ನು ಕೈಗಾ ಅಣುಸ್ಥಾವರದಿಂದಾಗಿ ಕೈಗಾ ಸುತ್ತಮುತ್ತಲ ಪ್ರದೇಶದ ಗ್ರಾಮದ ಜನರಿಗೆ ಕ್ಯಾನ್ಸರ್ ರೋಗ ಹೆಚ್ಚಾಗಿದೆ. ಅಲ್ಲದೇ ಇಲ್ಲಿ ಹರಿಯುವ ಕಾಳಿ ನದಿ ನೀರು ವಿಕಿರಣದಿಂದ ಕುಡಿಯಲು ಸಹ ಯೋಗ್ಯವಾಗಿಲ್ಲ. ಜಲಚರಗಳ ಮೇಲೂ ಹೆಚ್ಚಾಗಿ ಪರಿಣಾಮ ಬೀರುತ್ತಿದೆ. ಹಾಗೂ ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯಗಳಲ್ಲಿ ವ್ಯಾಪಿಸಿರುವ ಪಶ್ಚಿಮ ಘಟ್ಟ ಪ್ರದೇಶದ 56,825 ಚದರ ಕಿಲೋ ಮೀಟರ್ ವಿಸ್ತೀರ್ಣವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಿ ಎಂದು ಅಧಿಸೂಚನೆ ಹೊರಡಿಸಿದೆ. ಈ ಬಗ್ಗೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಈಗಾಗಲೇ ಕರಡು ಅಧಿಸೂಚನೆ ಹೊರಡಿಸಿದೆ.
ಕರ್ನಾಟಕದಲ್ಲೇ 20,668 ಚದರ ಕಿಲೋ ಮೀಟರ್ ವಿಸ್ತೀರ್ಣವನ್ನು ಪರಿಸರ ಸೂಕ್ಷ್ಮವೆಂದು ಗುರುತಿಸಲಾಗಿದೆ. ಕೈಗಾ ಗ್ರಾಮ ಸಹ ಪರಿಸರ ಸೂಕ್ಷ್ಮ ಪ್ರದೇಶದೊಳಗೆ ಸೇರಿಕೊಂಡಿದೆ. ಇನ್ನು ಐದು ಆರನೇ ಘಟಕ ನಿರ್ಮಾಣ ಆದರೆ ಅಪಾರ ಪ್ರಮಾಣದ ಕಾಡು ನಾಶವಾಗುತ್ತದೆ. ಅಲ್ಲದೇ ಪ್ರಾಣಿ, ಪಕ್ಷಿಗಳಿಗೂ ಹಾನಿ ಆಗುತ್ತದೆ. ಈ ಯೋಜನೆಯಿಂದ ಕರ್ನಾಟಕದ ಜನರಿಗೆ ಉಪಯೋಗವಿಲ್ಲ. ಸ್ಥಳೀಯ ಜನರಿಗೂ ಉದ್ಯೋಗ ಸಿಗುತ್ತಿಲ್ಲ. ಪರಿಸರಕ್ಕೆ ಮಾರಕವಾದ ಈ ಯೋಜನೆಗೆ ಹಸಿರು ಪೀಠ ತಡೆ ನೀಡಿರುವುದು ಸ್ವಾಗತಾರ್ಹ ಎಂದು ಸ್ಥಳೀಯರಾದ ರವಿ ಕಸಬೇಕರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಅಣು ಸ್ಥಾವರದಿಂದ ಪರಿಸರಕ್ಕೆ ಮಾರಕ
ಕೈಗಾದಲ್ಲಿ ಒಟ್ಟು 21 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಆದ ಯೋಜನೆ ಇದಾಗಿದೆ. ಇಲ್ಲಿ ತಲಾ 700 ಮೆಗಾವಾಟ್ ಸಾಮರ್ಥ್ಯದ ಎರಡು ಘಟಕಗಳ ಸ್ಥಾಪನೆಗೆ ಅಣುಶಕ್ತಿ ನಿಯಂತ್ರಣ ಮಂಡಳಿಯು ಅನುಮತಿ ನೀಡಿದೆ. ಈ ಘಟಕಗಳ ನಿರ್ಮಾಣ ಪೂರ್ಣಗೊಂಡ ಬಳಿಕ ಕೈಗಾದಲ್ಲಿ ಒಟ್ಟು 2,280 ಮೆಗಾವಾಟ್ ವಿದ್ಯುತ್ ಉತ್ಪಾದನೆ ಆಗಲಿದೆ. ಪ್ರಸ್ತುತ ತಲಾ 220 ಮೆಗಾವಾಟ್ ಸಾಮರ್ಥ್ಯದ ನಾಲ್ಕು ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಹಾಗೂ 880 ಮೆಗಾವಾಟ್ ವಿದ್ಯುತ್ ಉತ್ಪಾದನೆ ಆಗುತ್ತಿದೆ. ಹೀಗಾಗಿ ಇದರಿಂದ ಹೆಚ್ಚಾಗಿ ಪರಿಸರಕ್ಕೆ ಮಾರಕವಾಗುತ್ತದೆ. ಈ ಯೋಜನೆಯನ್ನು ಮತ್ತೆ ಪ್ರಾರಂಭಿಸಬಾರದು ಎಂಬುದು ಸ್ಥಳೀಯರ ಆಗ್ರಹವಾಗಿದೆ.












Click it and Unblock the Notifications