1.38 ಕೋಟಿ ತೆರಿಗೆ ಬಾಕಿ: ಪುರಾಣ ಪ್ರಸಿದ್ಧ ಗೋಕರ್ಣ ಮಹಾಬಲೇಶ್ವರ ದೇವಸ್ಥಾನಕ್ಕೆ ನೋಟಿಸ್!
ಕಾರವಾರ, ಆಗಸ್ಟ್ 16: ಪುರಾಣ ಪ್ರಸಿದ್ಧ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ಆಡಳಿತ ಮಂಡಳಿಗೆ ಭಾರತೀಯ ಆದಾಯ ತೆರಿಗೆ ಇಲಾಖೆ ಬಾಕಿ ಇರುವ 1.38 ಕೋಟಿ ರೂ ಆದಾಯ ತೆರಿಗೆ ಕಟ್ಟುವಂತೆ ನೋಟಿಸ್ ಜಾರಿ ಮಾಡಿದೆ.
ಜುಲೈ 14ರಂದು ಆದಾಯ ತೆರಿಗೆ ಇಲಾಖೆಯು ಮಹಾಬಲೇಶ್ವರ ದೇವಾಲಯಕ್ಕೆ ನೋಟಿಸ್ ಜಾರಿಗೊಳಿಸಿದ್ದು, 2015- 16ನೇ ಸಾಲಿನ ಆದಾಯ ತೆರಿಗೆ ಬಾಕಿ ಉಳಿದಿರುವುದಾಗಿ ತಿಳಿಸಿದೆ. ಈ ಬಗ್ಗೆ ದೇವಾಲಯದ ಆಡಳಿತ ಮಂಡಳಿ ಆದಾಯ ತೆರಿಗೆ ಆಯುಕ್ತರಿಗೆ ಮೇಲ್ಮನವಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಅದರಂತೆ ಶೇ 80ರಷ್ಟು (1,10,60,928) ತೆರಿಗೆಗೆ ನೀಡಿದ ತಡೆಯಂತೆ ಶೇ 20ರಷ್ಟನ್ನು ಪಾವತಿಸಿ ಐದು ದಿನಗಳೊಳಗೆ ಪಾವತಿ ಚಲನ್ ಸಲ್ಲಿಸಲು ಸೂಚಿಸಿದೆ. ಒಂದು ವೇಳೆ ಪಾವತಿಸದೇ ಇದ್ದಲ್ಲಿ ಆದಾಯ ತೆರಿಗೆ ಕಾಯ್ದೆ- 221ರ ಅನ್ವಯ ದಂಡ ಪಾವತಿಸಬೇಕಾಗುತ್ತದೆ ಎಂದು ನೋಟಿಸ್‌ನಲ್ಲಿ ತಿಳಿಸಿದೆ.

ಇನ್ನು ಈ ಹಿಂದೆ ಮುಜರಾಯಿ ಇಲಾಖೆ ನೋಡಿಕೊಳ್ಳುತ್ತಿದ್ದ ಆಡಳಿತವನ್ನು 2008ರಲ್ಲಿ ಸರ್ಕಾರ ರಾಮಚಂದ್ರಾಪುರ ಮಠಕ್ಕೆ ವಹಿಸಿತ್ತು. ಅಂದಿನಿಂದ ನ್ಯಾಯಾಲಯದಲ್ಲಿ ಮಠದ ವಿರೋಧಿ ಬಣಗಳ ಕೇಸು, ವಾದ- ವಿವಾದ ಇತ್ಯಾದಿಗಳು ನಡೆದು ಕೊನೆಗೆ 2018ರಲ್ಲಿ ಹೈಕೋರ್ಟ್ ವಿಭಾಗೀಯ ಪೀಠವು ದೇವಸ್ಥಾನದ ನಿರ್ವಹಣೆಯನ್ನು ಸರಕಾರದಿಂದ ನೇಮಕ ಮಾಡಲಾದ ಸಮಿತಿಗೆ ವಹಿಸುವಂತೆ ಆದೇಶ ನೀಡಿತ್ತು. ಅದರಂತೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ಎನ್.ಶ್ರೀಕೃಷ್ಣ ನೇತೃತ್ವದಲ್ಲಿ ಸಮಿತಿ ದೇವಸ್ಥಾನದ ಆಡಳಿತವನ್ನು ನೋಡಿಕೊಳ್ಳುತ್ತಿದೆ.
ಸದ್ಯ ಆದಾಯ ತೆರಿಗೆ ಇಲಾಖೆ ನೋಟಿಸ್‌ನಲ್ಲಿ ತಿಳಿಸಿರುವಂತೆ 2015-16ನೇ ಸಾಲಿನ ಅವಧಿಯಲ್ಲಿ ದೇವಸ್ಥಾನ ಶ್ರೀರಾಮಚಂದ್ರಾಪುರ ಮಠದ ಆಡಳಿತದಲ್ಲಿತ್ತು. ಹೀಗಾಗಿ ಒಂದು ವೇಳೆ ಆದಾಯ ತೆರಿಗೆ ಪಾವತಿಸಬೇಕೆಂದು ಬಂದಲ್ಲಿ ಅದನ್ನು ಶ್ರೀರಾಮಚಂದ್ರಾಪುರ ಮಠಕ್ಕೆ ನೀಡಬೇಕು ಹಾಗೂ ಅಂದಿನ ವ್ಯವಹಾರಗಳ ಬಗ್ಗೆ ತನಿಖೆ ನಡೆಸಬೇಕು ಎಂಬ ಆಗ್ರಹ ಇದೀಗ ಕೇಳಿಬಂದಿದೆ.

ಇನ್ನು ಈ ಬೆಳವಣಿಗೆ ಬೆನ್ನಲ್ಲೇ ಸೋಮವಾರ ನಿವೃತ್ತ ನ್ಯಾಯಮೂರ್ತಿ ಬಿ.ಎನ್.ಶ್ರೀಕೃಷ್ಣ ನೇತೃತ್ವದ ಸಮಿತಿ ಸಭೆ ನಡೆದಿದೆ. ಈ ಸಭೆಯಲ್ಲಿ 2008 ರಿಂದ ಪ್ರಸ್ತುತ ಹಣಕಾಸಿನ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಲೆಕ್ಕ ಪರಿಶೋಧಕರನ್ನು ನೇಮಿಸಲು ನಿರ್ಧರಿಸಲಾಗಿದೆ. ಅವರು ನೀಡಿದ ವರದಿಯಂತೆ ಮುಂದಿನ ಕ್ರಮ ಕೈಗೊಳ್ಳಬೇಕು ಎಂಬ ನಿರ್ಣಯ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಮಾಹಿತಿ ನೀಡಿದ್ದಾರೆ.












Click it and Unblock the Notifications