ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ: ಅಪ್‌ಡೇಟ್ ಮಾಹಿತಿಗಳು
ಕಾರವಾರ, ಜುಲೈ 01: ಕರ್ನಾಟಕದ ಬಹು ನಿರೀಕ್ಷಿತ ರೈಲು ಮಾರ್ಗದಲ್ಲಿ ಒಂದು ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ. 1996-97ರಲ್ಲಿ ಅನುಮೋದನೆಗೊಂಡ ಯೋಜನೆ ವಿವಿಧ ಕಾರಣಗಳಿಂದಾಗಿ ಇನ್ನೂ ಸಹ ಪೂರ್ಣಗೊಂಡಿಲ್ಲ. ಈಗ ಯೋಜನೆ ಕುರಿತು ಹೊಸ ಅಪ್‌ಡೇಟ್ ಲಭ್ಯವಾಗಿದೆ.
ಉತ್ತರ ಕರ್ನಾಟಕವನ್ನು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾಕ್ಕೆ ಸಂಪರ್ಕಿಸುವ ಹುಬ್ಬಳ್ಳಿ-ಅಂಕೋಲಾ ಬ್ರಾಡ್ ಗೇಜ್ ರೈಲು ಮಾರ್ಗದ ಅಂತಿಮ ಸಮೀಕ್ಷೆ 2024ರ ಡಿಸೆಂಬರ್‌ನಲ್ಲಿ ಪೂರ್ಣಗೊಳ್ಳಲಿದೆ. ಸುಮಾರು 164 ಕಿ. ಮೀ. ಉದ್ದದ ರೈಲು ಮಾರ್ಗ ಇದಾಗಿದೆ.

ಈ ಮಾರ್ಗದಲ್ಲಿ ಬರುವ ರೈಲು ನಿಲ್ದಾಣಗಳ ಮರು ವಿನ್ಯಾಸ, ನಿರ್ಮಾಣ ಪ್ರಕ್ರಿಯೆ ಆರಂಭವಾಗಿದೆ. ಹುಬ್ಬಳ್ಳಿ ನೈಋತ್ಯ ರೈಲ್ವೆ ಪ್ರಧಾನ ಕಛೇರಿ ಇರುವ ಸ್ಥಳವಾದರೆ, ಅಂಕೋಲಾ ಕೊಂಕಣ ರೈಲ್ವೆಯ ಪ್ರಧಾನ ಜಂಕ್ಷನ್ ಆಗಿದೆ.
ಯೋಜನೆಯ ಮಾಹಿತಿ: ಯೋಜನೆಯಂತೆ ಹುಬ್ಬಳ್ಳಿಯಿಂದ ಹೊರಡುವ ರೈಲು ಕಲಘಟಗಿ, ಕಿರವತ್ತಿ, ಯಲ್ಲಾಪುರ, ಇಡಗುಂದಿ ಮೂಲಕ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾವನ್ನು ತಲುಪಲಿದೆ. ಈ ನಿಲ್ದಾಣಗಳಲ್ಲಿ ಅಂಕೋಲಾ ರೈಲು ನಿಲ್ದಾಣ ಕೊಂಕಣ ರೈಲು ನಿಗಮಕ್ಕೆ ಸೇರುತ್ತದೆ.
ಸದ್ಯ ಇರುವ ಕೊಂಕಣ ರೈಲು ಮಾರ್ಗಕ್ಕೆ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಸೇರುವುದರಿಂದ ಅಂಕೋಲಾ ರೈಲು ನಿಲ್ದಾಣದ ಹೊರ ಮತ್ತು ಒಳ ವಿನ್ಯಾಸ ಬದಲಾಗಲಿದೆ. ಇದಕ್ಕೆ ಪೂರಕವಾಗಿ ನೈಋತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗ ನಿಲ್ದಾಣದ ಮರು ನಿರ್ಮಾಣದ ನಕ್ಷೆಯನ್ನು ಸಿದ್ಧಪಡಿಸಿದೆ. ಇದಕ್ಕೆ ಒಪ್ಪಿಗೆ ನೀಡುವಂತೆ ಕೊಂಕಣ ರೈಲ್ವೆಗೆ ಪತ್ರವನ್ನು ಬರೆಯಲಾಗಿದೆ.
ಕೊಂಕಣ ರೈಲ್ವೆಗೆ ಜೂನ್ 20ರಂದು ನೂತನ ರೈಲು ನಿಲ್ದಾಣದ ನಕ್ಷೆ ಕಳಿಸಲಾಗಿದೆ. ರೈಲ್ವೆ ಅಂತಿಮ ಒಪ್ಪಿಗೆ ಕೊಟ್ಟು, ಅನುಮೋದನೆ ಪತ್ರವನ್ನು ನೀಡಿದ ಬಳಿಕ ಮುಂದಿನ ಪ್ರಕ್ರಿಯೆ ಕೈಗೊಳ್ಳಲು ನೈಋತ್ಯ ರೈಲ್ವೆ ತೀರ್ಮಾನಿಸಿದೆ. ಈ ಮಾರ್ಗದ ಎಲ್ಲಾ ನಿಲ್ದಾಣಗಳ ಕುರಿತು ನೈಋತ್ಯ ರೈಲ್ವೆಯೇ ಡಿಪಿಆರ್ ಸಿದ್ಧಪಡಿಸಲಿದೆ.
ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಅರಣ್ಯದ ಮೂಲಕ ಹಾದು ಹೋಗುತ್ತದೆ. ಆದ್ದರಿಂದ ಈ ಯೋಜನೆಗೆ ಕರ್ನಾಟಕ ವನ್ಯಜೀವಿ ಮಂಡಳಿ 2020ರ ಮಾರ್ಚ್‌ನಲ್ಲಿ ನೀಡಿದ್ದ ಅನುಮೋದನೆಯನ್ನು ಕರ್ನಾಟಕ ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಲಾಗಿತ್ತು.
ಅರ್ಜಿಯ ವಿಚಾರಣೆಯ ವೇಳೆ ನೈಋತ್ಯ ರೈಲ್ವೆ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ಪರಿಷ್ಕೃತ ಯೋಜನೆಯನ್ನು ಸಲ್ಲಿಸಲಾಗುತ್ತದೆ ಎಂದು ಹೈಕೋರ್ಟ್‌ಗೆ ಹೇಳಿತ್ತು. ಇದನ್ನು ಪರಿಗಣಿಸಿದ ಹೈಕೋರ್ಟ್ ಈ ಯೋಜನೆ ಕುರಿತು ದಾಖಲಾಗಿದ್ದ ಎಲ್ಲಾ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಲೇವಾರಿ ಮಾಡಿತ್ತು.
ಹುಬ್ಬಳ್ಳಿಯಿಂದ 34 ಕಿ. ಮೀ. ತನಕ ಅರಣ್ಯ ಪ್ರದೇಶವಿಲ್ಲದ ಜಾಗದಲ್ಲಿ ಯೋಜನೆ ಕಾರ್ಯಗತಗೊಳಿಸಲಾಗಿದೆ. ಆದರೆ ಉಳಿದ ಮಾರ್ಗ ಅರಣ್ಯದ ಮೂಲಕ ಹಾದು ಹೋಗಬೇಕಿದೆ. ಆದ್ದರಿಂದ ಯೋಜನೆಗೆ ಅನುಮೋದನೆ ಸಿಗುವುದು, ಅರಣ್ಯ ಇಲಾಖೆ ಒಪ್ಪಿಗೆ ಪಡೆಯುವುದು ಸೇರಿ ವಿವಿಧ ಕಾರಣಕ್ಕೆ ಯೋಜನೆ ವಿಳಂಬವಾಗಿದೆ.
2023ರ ಜೂನ್‌ನಲ್ಲಿ ನೈಋತ್ಯ ರೈಲ್ವೆ ಹುಬ್ಬಳ್ಳಿ-ಅಂಕೋಲಾ ನಡುವಿನ ರೈಲು ಮಾರ್ಗದ ಅಂತಿಮ ಸ್ಥಳ ಸಮೀಕ್ಷೆಗೆ ಟೆಂಡರ್ ಕರೆದಿತ್ತು. ಮಾರ್ಗ ಸಮೀಕ್ಷೆ, ಮಣ್ಣಿನ ಪರೀಕ್ಷೆ, ಯಾರ್ಡ್ ನಕ್ಷೆ, ಸೇತುವೆ ನಿರ್ಮಾಣ ಲೆಕ್ಕಾಚಾರ ಇತ್ಯಾದಿಗಳ ಕುರಿತು ಅಂತಿಮ ವರದಿ ತಯಾರು ಮಾಡಲು 13.48 ಕೋಟಿ ರೂ.ಗಳ ಟೆಂಡರ್ ನೀಡಿತ್ತು.
ಈಗ ಅಂತಿಮ ಸ್ಥಳ ಸಮೀಕ್ಷೆ ತಯಾರಿ ಅಂತಿಮ ಹಂತದಲ್ಲಿದೆ. ಡಿಸೆಂಬರ್‌ನಲ್ಲಿ ಅದು ಮುಕ್ತಾಯಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ. ಮರು ಸಮೀಕ್ಷೆಯ ಸಮಯದಲ್ಲಿ ಅಂಕೋಲಾ-ಗುತ್ತಿ ರಾಷ್ಟ್ರೀಯ ಹೆದ್ದಾರಿ ಎರಡು ಕಡೆಯಲ್ಲಿ ಹಳಿ ಜೋಡಣೆ ಸಾಧ್ಯವೇ? ಎಂಬ ಪರಿಶೀಲನೆ ಸಹ ನಡೆಯಲಿದೆ.
ಈ ರೈಲು ಮಾರ್ಗ ನಿರ್ಮಾಣಕ್ಕೆ 595.64 ಹೆಕ್ಟೇರ್ ಅರಣ್ಯ ಬಳಕೆಯಾಗಲಿದೆ ಎಂದು ಮೊದಲು ಅಂದಾಜಿಸಲಾಗಿತ್ತು. ಆದರೆ ಪರಿಷ್ಕೃತ ಯೋಜನೆಯಲ್ಲಿ ಯಾವ ರೀತಿ ಇರಲಿದೆ? ಎಂಬ ಮಾಹಿತಿ ಇಲ್ಲ. ಈ ಮಾರ್ಗ ಶರಾವತಿ ವನ್ಯಜೀವಿಧಾಮ, ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಮೂಲಕ ಹಾದು ಹೋಗಲಿದೆ ಎಂದು ಹಿಂದೆ ಉಲ್ಲೇಖ ಮಾಡಲಾಗಿತ್ತು.












Click it and Unblock the Notifications