Karnataka elections: ಕಾಡು ಪ್ರಾಣಿಗಳ ಹಾವಳಿ ಭೀತಿ: ಮಂಗಳೂರಿನ ರೀತಿ ಉ.ಕನ್ನಡದಲ್ಲೂ ಬಂದೂಕಿಗೆ ವಿನಾಯಿತಿ ನೀಡಿ: ರೈತರ ಆಗ್ರಹ
ಕಾರವಾರ, ಏಪ್ರಿಲ್, 08: ಆಯುಧ ಪರವಾನಿಗೆದಾರರಿಗೆ ಬಂದೂಕುಗಳನ್ನು ಆಯಾ ಪೊಲೀಸ್ ಠಾಣೆಗಳಲ್ಲಿ ಠೇವಣಿ ಇಡುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿದ್ದಾರೆ. ಆದರೆ ಮಂಗಳೂರಿನಲ್ಲಿ ಬೆಳೆ ರಕ್ಷಣೆ ಸಂಬಂಧ ಪರವಾನಗಿ ನವೀಕರಿಸಿದ ರೈತರಿಗೆ ಇದರಿಂದ ವಿನಾಯಿತಿ ನೀಡಿದ್ದು, ಜಿಲ್ಲೆಯಲ್ಲಿಯೂ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರೈತರಿಗೆ ವಿನಾಯಿತಿ ನೀಡಬೇಕೆಂಬ ಒತ್ತಾಯ ಕೇಳಿಬಂದಿದೆ.
ವಿಧಾನಸಭಾ ಚುನಾವಣೆ ವೇಳೆ ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ತಡೆಯಲು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಸಂಬಂಧ ಜಿಲ್ಲಾಧಿಕಾರಿ ಬೆಳೆ ರಕ್ಷಣೆ, ಸ್ವಯಂ ರಕ್ಷಣೆ ಹಾಗೂ ಜಾನುವಾರುಗಳ ರಕ್ಷಣೆ ಸಂಬಂಧ ಪಡೆದ ಆಯುಧಗಳನ್ನು ಚುನಾವಣೆ ಮುಕ್ತಾಯವಾಗುವವರೆಗೆ ಪೊಲೀಸ್ ಠಾಣೆಯಲ್ಲಿ ಠೇವಣಿ ಇಡುವಂತೆ ಆದೇಶಿಸಿದ್ದಾರೆ.
ಆದರೆ ಇದೀಗ ಅತಿ ಹೆಚ್ಚು ಕಾಡುಪ್ರಾಣಿಗಳ ಹಾವಳಿ ಎದುರಿಸುತ್ತಿರುವ ಜಿಲ್ಲೆಯ ರೈತರಿಗೆ ಈ ಆದೇಶ ಸಂಕಷ್ಟ ತಂದೊಡ್ಡಿದೆ.

ಇನ್ನು ಕೂಡ ಜಮೀನುಗಳಲ್ಲಿ ಬೆಳೆ ಬೆಳೆಯಲಾಗುತ್ತಿದ್ದು, ಭತ್ತ, ಜೋಳ ಸೇರಿದಂತೆ ಇನ್ನಿತರ ಬೆಳೆಗಳನ್ನು ಹೊಲಗಳಲ್ಲಿ ರಾಶಿ ಹಾಕಲಾಗಿದೆ. ಅಲ್ಲದೆ ಇಲ್ಲಿ ಒಂಟಿ ಮನೆಗಳೇ ಹೆಚ್ಚಾಗಿದ್ದು, ಚಿರತೆ ಹಂದಿಗಳ ಹಾವಳಿಯೂ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಇದೀಗ ಆಯುಧಗಳನ್ನು ಠೇವಣಿ ಮಾಡಿದರೇ ನಮಗೆ ಆಯುಧ ಪಡೆದು ಯಾವುದೇ ಪ್ರಯೋಜನ ಇಲ್ಲದಂತಾಗುತ್ತದೆ. ಅಲ್ಲದೆ ವರ್ಷವಿಡಿ ಬೆಳೆದು ಸಂಗ್ರಹಿಸಿದ ಬೆಳೆ ಕೂಡ ಪ್ರಾಣಿಗಳ ಪಾಲಾಗುವ ಆತಂಕ ಇರುವ ಕಾರಣ ವಿನಾಯಿತಿ ನೀಡಬೇಕು ಎಂದರು.
ಆಯುಧ ಪಡೆದಿರುವವರ ವಿವರ
ಈ ಸಂಬಂಧ ಜಿಲ್ಲಾಧಿಕಾರಿಗೂ ಮನವಿ ನೀಡಿರುವುದಾಗಿ ಭಟ್ಕಳದ ಕೃಷಿಕ ಸಮಾಜದ ಅಧ್ಯಕ್ಷ ಶ್ರೀಧರ ಹೆಬ್ಬಾರ್ ಆಗ್ರಹಿಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 6,370 ಮಂದಿ ಆಯುಧಗಳನ್ನು ಪಡೆದಿದ್ದಾರೆ. ಅದರಲ್ಲಿ 5,672 ಮಂದಿ ಬೆಳೆ ರಕ್ಷಣೆಗೆ ಪಡೆದಿದ್ದು, ಇನ್ನು 698 ಮಂದಿ ಸ್ವ ರಕ್ಷಣೆಗೆ ಆಯುಧಗಳನ್ನು ಪಡೆದುಕೊಂಡಿದ್ದಾರೆ. ಇತರೆ ಜಿಲ್ಲೆಗಳಿಗೆ ಹೋಲಿಸಿದರೇ ಕಾರವಾರದಲ್ಲೇ ಅತಿ ಹೆಚ್ಚಿನ ಪ್ರಮಾಣದಲ್ಲಿ ಕಾಡು ಪ್ರಾಣಿಗಳ ಹಾವಳಿ ಇದೆ.

ಮಂಗಳೂರಿನಲ್ಲಿ ಬಂದೂಕಿಗೆ ವಿನಾಯಿತಿ
ಕಳೆದ 2018ರ ಚುನಾವಣೆ ವೇಳೆ ಇದೇ ಸಂಬಂಧ ವಿನಾಯಿತಿ ಕೂಡ ನೀಡಲಾಗಿತ್ತು. ಆದರೆ ಈ ಬಾರಿ ಮಂಗಳೂರು ಭಾಗದಲ್ಲಿ ಅಲ್ಲಿನ ರೈತರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಅನುಮತಿಯಂತೆ ವಿನಾಯಿತಿ ನೀಡಲಾಗಿದೆ. ಅದರಂತೆಯೇ ಜಿಲ್ಲೆಯಲ್ಲಿಯೂ ಪರವಾನಗಿ ನವೀಕರಿಸಿಕೊಂಡ ರೈತರಿಗೆ ಬೆಳೆ ರಕ್ಷಣೆ ಸಂಬಂಧ ವಿನಾಯಿತಿ ನೀಡಬೇಕು ಎಂದು ರೈತಪರ ಹೋರಾಟಗಾರ ಶಿವರಾಮ್ ಹೆಬ್ಬಾರ್ ಆಗ್ರಹಿಸಿದ್ದಾರೆ.
ಅಕ್ರಮ ಪ್ರಕರಣಗಳ ತಡೆಗೆ ಪ್ಲಾನ್
ಚುನಾವಣೆ ವೇಳೆ ಪಡೆಯಲೇಬೇಕಾದ ಅನುಮತಿಗಳಿಗೆ ಅನಗತ್ಯ ಓಡಾಟ ತಪ್ಪಿಸುವ ಮತ್ತು ಅಕ್ರಮ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಸುವಿಧಾ ಮತ್ತು ಸಿ-ವಿಜಿಲ್ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದೆ. ಸಾರ್ವಜನಿಕರು ಹಾಗೂ ರಾಜಕೀಯ ಪಕ್ಷಗಳು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
ರಾಜ್ಯದಲ್ಲಿ ಚುನಾವಣೆ ಘೋಷಣೆಯಾದ ಬೆನ್ನಲ್ಲೆ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ವಿವಿಧ ಪಕ್ಷಗಳು ಪ್ರಚಾರ ಸಭೆಗಳನ್ನು ನಡೆಸಿ ಮತದಾರರ ಓಲೈಕೆಯಲ್ಲಿ ತೊಡಗಿವೆ. ಅಲ್ಲದೆ ಪ್ರಚಾರ, ಮೆರವಣಿಗೆ, ಸಭೆ ಸಮಾರಂಭಗಳ ಆಯೋಜನೆಗೆ ಪ್ಲ್ಯಾನ್ ರೂಪಿಸಿತ್ತಿದ್ದು, ಈ ಎಲ್ಲ ಕಾರ್ಯಗಳಿಗೂ ರಾಜಕೀಯ ಪಕ್ಷಗಳು, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಇಚ್ಛಿಸುವವರು ಚುನಾವಣಾ ಆಯೋಗದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಅಲ್ಲದೆ ಜಾತ್ರೆ, ಸಾರ್ವಜನಿಕವಾಗಿ ನಡೆಯುವ ಇತರೆ ಸಮಾರಂಭಗಳಿಗೂ ಈ ಅನುಮತಿ ಕಡ್ಡಾಯವಾಗಿದೆ.












Click it and Unblock the Notifications