ಬೆಂಗಳೂರು-ಮುರುಡೇಶ್ವರ ರೈಲು ಕಾರವಾರ ತನಕ ವಿಸ್ತರಿಸಿ
ಕಾರವಾರ, ಸೆಪ್ಟೆಂಬರ್ 29; ಬೆಂಗಳೂರು ಮತ್ತು ಕರಾವಳಿ ಸಂಪರ್ಕಿಸಲು ಹೊಸ ರೈಲುಗಳನ್ನು ಓಡಿಸಬೇಕು ಎಂಬ ಬೇಡಿಕೆ ಹಲವು ದಿನಗಳಿಂದಲೂ ಇದೆ. ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಮತ್ತು ಮುರುಡೇಶ್ವರ ರೈಲನ್ನು ಕಾರವಾರ ತನಕ ವಿಸ್ತರಣೆ ಮಾಡಿ ಎಂದು ಈಗ ಬೇಡಿಕೆ ಇಡಲಾಗಿದೆ.
ಕೆಲವು ದಿನಗಳ ಹಿಂದೆ ಬೆಂಗಳೂರು-ಮೈಸೂರು-ಮಂಗಳೂರು ರೈಲನ್ನು ಮುರುಡೇಶ್ವರ ತನಕ ವಿಸ್ತರಣೆ ಮಾಡಲಾಗಿತ್ತು. ಈ ರೈಲು ಸೇವೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಅಲ್ಲದೇ ಪ್ರಯಾಣಿಕರ ಬೇಡಿಕೆಯಂತೆ ವೇಳಾಪಟ್ಟಿ ಬದಲಾವಣೆ ಮಾಡಲಾಗಿದೆ. ರೈಲು ಈಗ 35 ನಿಮಿಷ ಮುಂಚಿತವಾಗಿ ಮುರುಡೇಶ್ವರ ತಲುಪುತ್ತದೆ.

ಕೊಂಕಣ ರೈಲ್ವೆ ಬಳಕೆದಾರರ ಸಲಹಾ ಸಮಿತಿಯ ಸದಸ್ಯರು ಸತೀಶ ಸೈಲ್ ಬೆಂಗಳೂರು-ಮುರುಡೇಶ್ವರ ರೈಲು ಕಾರವಾರ ತನಕ ವಿಸ್ತರಣೆ ಮಾಡಬೇಕು ಎಂದು ಕೊಂಕಣ ರೈಲ್ವೆ ಚೇರ್ಮನ್‌ಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಕಾರವಾರ ತನಕ ವಿಸ್ತರಣೆ ಮಾಡಿ; ರೈಲು ನಂಬರ್ 16585 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಮಂಗಳೂರು ರೈಲನ್ನು ಮುರುಡೇಶ್ವರ ತನಕ ವಿಸ್ತರಣೆ ಮಾಡಿರುವುದು ಸ್ವಾಗತಾರ್ಹ. ಆದರೆ ಉತ್ತರ ಕನ್ನಡದ ಹೆಚ್ಚಿನ ಜನರಿಗೆ ಅನುಕೂಲವಾಗುವಂತೆ ರೈಲನ್ನು ಕಾರವಾರ ತನಕ ವಿಸ್ತರಣೆ ಮಾಡಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಕೊಂಕಣ ರೈಲು ಯೋಜನೆಗಳಿಗಾಗಿ ಉತ್ತರ ಕನ್ನಡದ ಜನರು ಭೂಮಿ ನೀಡಿದ್ದಾರೆ. ಅವರಿಗೆ ರಾಜ್ಯ ಮತ್ತು ದೇಶಕ್ಕೆ ಸಂಪರ್ಕಿಸಲು ಅನುಕೂಲ ಮಾಡಿಕೊಡುವುದು ರೈಲ್ವೆಯ ಜವಾಬ್ದಾರಿಯಾಗಿದೆ ಎಂದು ಪತ್ರದಲ್ಲಿ ವಿವರಣೆ ನೀಡಿದ್ದಾರೆ.
ಬೆಂಗಳೂರು-ಕಾರವಾರ ನಡುವೆ ಸಂಚಾರ ನಡೆಸುವ ರೈಲುಗಳು ತುಂಬಿ ತುಳುಕುತ್ತವೆ. ಆದ್ದರಿಂದ ಹೆಚ್ಚುವರಿ ರೈಲುಗಳ ವ್ಯವಸ್ಥೆ ಅಗತ್ಯವಿದೆ. ಬೆಂಗಳೂರು-ಮುರುಡೇಶ್ವರ ರೈಲನ್ನು ಕಾರವಾರ ತನಕ ವಿಸ್ತರಣೆ ಮಾಡಲು ಅವಕಾಶವಿದೆ. ಆದ್ದರಿಂದ ರೈಲು ಸೇವೆ ವಿಸ್ತರಣೆ ಮಾಡಬೇಕು ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.
ಸೆ.24ರಿಂದ ವೇಳಾಪಟ್ಟಿ ಬದಲು; ನೈಋತ್ಯ ರೈಲ್ವೆ ಕೆಲವು ದಿನಗಳ ಹಿಂದೆ ಬೆಂಗಳೂರು-ಮಂಗಳೂರು ವಯಾ ಮೈಸೂರು ರೈಲನ್ನು ಮುರುಡೇಶ್ವರ ತನಕ ವಿಸ್ತರಣೆ ಮಾಡಿತ್ತು. ಇದರಿಂದ ರಾಜಧಾನಿ ಬೆಂಗಳೂರು ಮತ್ತು ಕರಾವಳಿ ಕರ್ನಾಟಕದ ನಡುವೆ ಸಂಚಾರ ನಡೆಸುವ ಜನರಿಗೆ ಅನುಕೂಲವಾಗಿತ್ತು. ಆದರೆ ಈ ರೈಲಿನ ವೇಳಾಪಟ್ಟಿ ಬದಲಾವಣೆ ಮಾಡಬೇಕು ಎಂದು ಪ್ರಯಾಣಿಕರು ಬೇಡಿಕೆ ಇಟ್ಟಿದ್ದರು.
ನೈಋತ್ಯ ರೈಲ್ವೆ ಸೆಪ್ಟೆಂಬರ್ 24ರಿಂದಲೇ ಜಾರಿಗೆ ಬರುವಂತೆ ಬೆಂಗಳೂರು-ಮುರುಡೇಶ್ವರ ನಡುವಿನ ರೈಲು ನಂಬರ್ 16585 ವೇಳಾಪಟ್ಟಿ ಬದಲಾವಣೆ ಮಾಡಿತ್ತು. ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಮಂಗಳೂರು ನಡುವಿನ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ರೈಲು ಸುರತ್ಕಲ್ ಮತ್ತು ಮುರುಡೇಶ್ವರ ನಡುವಿನ ಸಂಚಾರ ನಡೆಸುವ ವೇಳಾಪಟ್ಟಿಯನ್ನು ಮಾತ್ರ ಪರಿಷ್ಕರಣೆ ಮಾಡಲಾಗಿತ್ತು.
ಈ ರೈಲಿನ ವೇಳಾಪಟ್ಟಿ ಬದಲಾವಣೆ ಬಳಿಕ ರೈಲಿನ ವೇಗವನ್ನು 35 ನಿಮಿಷಗಳಷ್ಟು ಕಾಲ ಹೆಚ್ಚಾಗಿತ್ತು. ರೈಲು 1.35ರ ಬದಲು 12.55ಕ್ಕೆ ಮುರುಡೇಶ್ವರ ನಿಲ್ದಾಣ ತಲುಪುತ್ತಿತ್ತು. ಈಗ ಈ ರೈಲನ್ನು ಕಾರವಾರ ತನಕ ವಿಸ್ತರಣೆ ಮಾಡಿ ಎಂದು ಬೇಡಿಕೆ ಇಡಲಾಗಿದೆ.
ವೇಳಾಪಟ್ಟಿ ಪರಿಷ್ಕರಣೆ ಮಾಡುವ ಮೊದಲು ಬೆಂಗಳೂರು-ಮುರುಡೇಶ್ವರ ರೈಲಿನ ವೇಳಾಪಟ್ಟಿ ಅವೈಜ್ಞಾನಿಕವಾಗಿದೆ. ಈ ಅವೈಜ್ಞಾನಿಕ ವೇಳಾಪಟ್ಟಿ ಸರಿ ಪಡಿಸಿದರೆ ರೈಲನ್ನು ಗೋಕರ್ಣ, ಕಾರವಾರ ತನಕ ವಿಸ್ತರಣೆ ಮಾಡಬಹುದು ಎಂಬುದು ಪ್ರಯಾಣಿಕರ ಹೇಳಿದ್ದರು. ಈಗ ವೇಳಾಪಟ್ಟಿ ಬದಲಾವಣೆ ಮಾಡಿದರೂ ಸಹ ಕಾರವಾರ ತನಕ ವಿಸ್ತರಣೆ ಮಾಡುವ ಕುರಿತು ಯಾವುದೇ ಘೋಷಣೆಯಾಗಿಲ್ಲ.












Click it and Unblock the Notifications