ನರಕಚತುರ್ದಶಿಯ ಗೋಧೂಳಿ ಮುಹೂರ್ತದಲ್ಲಿ ಗಂಗೆಯ ವರಿಸಿದ ಶಿವ: ಈ ವಿವಾಹದ ಪೌರಾಣಿಕ ಹಿನ್ನೆಲೆ ಏನು..?
ಕಾರವಾರ, ನವೆಂಬರ್ 13: ಶ್ರೀಕ್ಷೇತ್ರ ಗೋಕರ್ಣದಲ್ಲಿ ದೀಪಾವಳಿಯ ನರಕಚತುರ್ದಶಿಯ ಗೋಧೂಳಿ ಮುಹೂರ್ತದಲ್ಲಿ ಶಿವಗಂಗಾ ವಿವಾಹ ಮಹೋತ್ಸವು ನಡೆಯಿತು. ಅನಾದಿಕಾಲದಿಂದ ನಡೆದುಬಂದ ಸಂಪ್ರದಾಯದಂತೆ ಭಾನುವಾರ ಬೇಲೆಹಿತ್ತಲಿನಲ್ಲಿ ಗಂಗಾವಳಿ ಸೀಮೆಯ ಅಂಬಿಗರು ಗಂಗಾಮಾತೆಯನ್ನು ಮತ್ತು ಗೋಕರ್ಣಸೀಮೇಯ ಹಾಲಕ್ಕಿ ಒಕ್ಕಲಿಗರು ಮಹಾಬಲೇಶ್ವರನನ್ನು ತಂದು ಅತಿ ವಿಜೃಂಭಣೆಯಿಂದ ಶಿವಗಂಗಾ ಮಹೋತ್ಸವವನ್ನು ನೆರವೇರಿಸಿದರು.
ಮಹಾಬಲೇಶ್ವರನಿಗೂ ಗಂಗೆಗೂ ನಿಶ್ಚಿತಾರ್ಥ ನವೆಂಬರ್ 5ರಂದು ನಡೆದಿತ್ತು. ಅದಾದ ವಾರದ ಬಳಿಕ, ಅಂದರೆ ಈ ಬಾರಿಯ ಭಾನುವಾರದ ನರಕ ಚತುರ್ದಶಿಯಂದು ಅವರಿಬ್ಬರಿಗೆ ವಿವಾಹ ಕಾರ್ಯವು ನೆರವೇರಿಸಲಾಯಿತು.

ತೋರಣಗಳಿಂದ ಶೃಂಗಾರಗೊಂಡ ಮಂಟಪ
ಗಂಗಾವಳಿ ಮತ್ತು ಗೋಕರ್ಣದ ಮಧ್ಯೆ ಕಪಿಲಾ ನದಿ ಸಮುದ್ರ ಸೇರುವ ಸ್ಥಳದಲ್ಲಿ ಮಾವಿನ ತೋರಣದಿಂದ ಮದುವೆಯ ಮಂಟಪ ನಿರ್ಮಿಸಲಾಗಿತ್ತು. ದಾರಿಯುದ್ದಕ್ಕೂ ಭಕ್ತರು ಹಾಕಿದ ತಳಿರು, ತೋರಣ ಆಕರ್ಷಕವಾಗಿ ಕಂಡುಬಂತು. ನೀಲಿ ಮತ್ತು ಬಿಳಿ ಬಣ್ಣದ ಶುಭ್ರ ಆಕಾಶ ಮದುವೆ ಮಂಟಪದ ಚಪ್ಪರದಂತೆ ಭಾಸವಾಗುತ್ತಿತ್ತು.
ಕಡಲಿನ ಅಬ್ಬರ, ವಾದ್ಯಘೋಷ, ವೇದಘೋಷ, ವಿಶಿಷ್ಟ ತೋರಣ, ಹಾಲಕ್ಕಿ ಸಮಾಜದವರು ಹಾಡುವ ಗುಮಟೆಪಾಂಗದ ಜಾನಪದ ಹಾಡುಗಳು ಉತ್ಸವಕ್ಕೆ ಮೆರುಗನ್ನು ನೀಡಿದವು. ಸಹಸ್ರಾರು ಜನರು ದೇವರ ಮದುವೆಗೆ ಸಾಕ್ಷಿಯಾದರು. ಭಕ್ತ ಜನರು ತೋರಣಕ್ಕೆ ಕಟ್ಟಿದ ಮಾವಿನ ಎಲೆಯನ್ನು ಪ್ರಸಾದದ ರೂಪದಲ್ಲಿ ಸ್ವೀಕರಿಸಿ ಕೃತಾರ್ಥರಾದರು.
ವಿವಾಹ ಮಹೋತ್ಸವಕ್ಕೆ ಪೌರಾಣಿಕ ಹಿನ್ನೆಲೆ
ವಿವಾಹ ಮಹೋತ್ಸವದ ಹಿಂದೊಂದು ಪುರಾಣ ಕಥೆಯಿದೆ. ಆದಿಯಲ್ಲಿ ಲಂಕಾಧಿಪತಿ ರಾವಣನು ಕೇವಲ ತನ್ನ ತಾಯಿಯ ಇಚ್ಛೆ ಪೂರೈಸಲು ಪರಶಿವನ ಆತ್ಮಲಿಂಗವನ್ನು ಪಡೆದು ಲಂಕೆಗೆ ಒಯ್ಯುವ ಸಮಯದಲ್ಲಿ ದೇವಾನುದೇವತೆಗಳ ಪ್ರಾರ್ಥನೆಯಂತೆ ವಿಘ್ನೇಶ್ವರನು ಶಿವಲಿಂಗವು ಗೋಕರ್ಣ ಸೀಮೆಯಲ್ಲಿ ಶ್ರೀಮಹಾಬಲೇಶ್ವರನಾಗಿ ನೆಲೆಸುವಂತೆ ಮಾಡುತ್ತಾನೆ. ಅದೇ ರೀತಿ ಶಿವನ ಶಿರದಲ್ಲಿರುವ ಗಂಗೆಯು ಶಿವನ ಸಾನ್ನಿಧ್ಯದಲ್ಲಿಯೇ ನೆಲೆಸಬೇಕು ಎಂದು, ಬಲೆ ಬೀಸಿ ಮೀನು ಹಿಡಿದು ಜೀವನ ನಡೆಸುವ ಅಂಬಿಗರ ಬಲೆಗೆ ಗಂಗಾವಳಿ ಸಮೀಪದ ಸಮುದ್ರದಲ್ಲಿ ಮೂರ್ತಿ ರೂಪದಲ್ಲಿ ಸಿಗುತ್ತಾಳೆ.

ಅಂಬಿಗರು ಮೂರ್ತಿಯನ್ನು ಭಕ್ತಿಯಿಂದ ಗೋಕರ್ಣ ಸಮೀಪದ ಗಂಗಾವಳಿಯಲ್ಲಿ ಪ್ರತಿಷ್ಠಾಪಿಸಿ ತಮ್ಮ ಕುಲದೇವತೆಯಾಗಿ ಪೂಜಿಸುತ್ತಾ ಬರುತ್ತಾರೆ. ಗೋಕರ್ಣದಲ್ಲಿ ನೆಲೆಸಿರುವ ಶ್ರೀಮಹಾಬಲೇಶ್ವರ ತನ್ನ ಪರಿವಾರದೊಂದಿಗೆ ದಸರಾ ಹಬ್ಬದ ಸಂದರ್ಭದಲ್ಲಿ ಮಾಸ್ಕೇರಿ ಸೀಮೆಗೆ ಬಂದಾಗ ಚೆಲುವೆಯೂ, ಸೌಂದರ್ಯವತಿಯೂ ಆದ ಗಂಗೆಯ ರೂಪ, ಲಾವಣ್ಯಕ್ಕೆ ಮನಸೋತು ಅವಳನ್ನು ಮದುವೆಯಾಗಲು ನಿಶ್ಚಿಯಿಸುತ್ತಾನೆ.
ಆದರೆ ಆಗಲೇ ಗೌರಿಯನ್ನು ಮದುವೆಯಾಗಿರುವ ಮಹಾಬಲೇಶ್ವರನು ಗಂಗೆಯನ್ನು ಬಿಡಲಾಗದೇ, ಗೌರಿಗೆ ತಿಳಿಯದ ರೀತಿಯಲ್ಲಿ ಗಂಗೆಯನ್ನು ಮದುವೆಯಾಗಲು ನಿಶ್ಚಯಿಸುತ್ತಾನೆ. ಗೌರಿಯು ಗಾಢ ನಿದ್ರೆಯಲ್ಲಿರುವಾಗ ಕೃಷ್ಣ ಪಕ್ಷ ಅಷ್ಠಮಿಯ ಮಧ್ಯರಾತ್ರಿ ಕತ್ತಲೆಯಲ್ಲಿ ಸಮುದ್ರ ದಂಡೆಯಲ್ಲಿ ಪರಿವಾರದೊಂದಿಗೆ ನಡೆದು ಬರುತ್ತಾನೆ. ಆ ವೇಳೆ ಗಂಗೆಕೊಳ್ಳದಲ್ಲಿ ಸ್ನಾನಾದಿ ಕಾರ್ಯಗಳನ್ನು ಪೂರೈಸಿ ಕತ್ತಲಿರುವಾಗಲೇ ಗಂಗಾದೇವಿ ನೆಲೆಸಿರುವ ದೇವಸ್ಥಾನಕ್ಕೆ ಬರುತ್ತಾನೆ.
ಮಾರುವೇಷದಲ್ಲಿದ್ದ ಶಿವನ ಬರುವಿಕೆಯನ್ನು ಅರಿತ ಗಂಗೆಯು ತಾನೊಬ್ಬಳೇ ಇರುವುದರಿಂದ ಪರಪುರುಷನು ಒಳ ಪ್ರವೇಶಿಸದಂತೆ ಬಾಗಿಲು ಹಾಕುತ್ತಾಳೆ. ಬಾಗಿಲು ತೆರೆಯುವಂತೆ ಶಿವನು ಪರಿಪರಿಯಾಗಿ ಬೇಡಿಕೊಂಡರೂ ಅವನ ಯಾವ ಮಾತಿಗೂ ಗಂಗೆಯು ಒಪ್ಪದಿರಲು ತಾನು ನಿಜವಾದ ಶಿವನೆಂದೂ, ಮಹಾಬಲೇಶ್ವರನಾಗಿ ಗೋಕರ್ಣದಲ್ಲಿ ನೆಲೆಸಿರುವ ಬಗ್ಗೆಯೂ ತಿಳಿಸುತ್ತಾನೆ.
ಶಿವ ಗಂಗೆಯರ ವಿವಾಹ ಮಹೋತ್ಸವ ಬಳಿಕ ಮಾರುವೇಷದಿಂದ ಮುಕ್ತಿ ಹೊಂದಿ, ತನ್ನ ನಿಜರೂಪವನ್ನು ಗಂಗೆಗೆ ತೋರಿಸುತ್ತಾನೆ. ಆಗ ಗಂಗೆ ಶಿವನೊಂದಿಗೆ ವಿವಾಹವಾಗಲು ಒಪ್ಪಿಗೆ ಸೂಚಿಸುತ್ತಾಳೆ. ಮುಂದೆ ಆಶ್ವೀಜ ಮಾಸ ಕೃಷ್ಣ ಪಕ್ಷ ಚತುರ್ದಶಿಯಂದು ಸಾಯಂಕಾಲ ಗೋಧೂಳಿ ಮುಹೂರ್ತದಲ್ಲಿ ಗೋಕರ್ಣ ಮತ್ತು ಗಂಗಾವಳಿ ಮಧ್ಯ ಸಮುದ್ರ ದಂಡೆಯ ಮೇಲೆ ಶಿವ ಗಂಗೆಯರ ವಿವಾಹ ನೆರವೇರುವುದೆಂದು ನಿಶ್ಚಯವಾಗುತ್ತದೆ. ಅದರಂತೆ ಪ್ರತೀ ವರ್ಷ ಊರಿನ ಜನರು ಇವರಿಬ್ಬರ ವಿವಾಹವನ್ನು ನೆರವೇರಿಸುತ್ತಾರೆ. ಗೋಕರ್ಣ ಸೀಮೆಯನ್ನು ಸಲಹುವಂತೆ ಪ್ರಾರ್ಥಿಸುತ್ತಾರೆ.












Click it and Unblock the Notifications