ಅಂಕೋಲಾದಲ್ಲಿ ಲೋಕಸಭಾ ಅಭ್ಯರ್ಥಿ ಆಯ್ಕೆ ಸಭೆ: ವೇದಿಕೆಯಲ್ಲೇ ಕಾಂಗ್ರೆಸ್ ಮುಖಂಡರ ಮಾತಿನ ಜಟಾಪಟಿ
ಕಾರವಾರ, ಅಕ್ಟೋಬರ್ 30: "ಕಾಂಗ್ರೆಸ್ ಪಕ್ಷದಲ್ಲಿ ಒಡಕಿನ ಪ್ರಶ್ನೆಯೇ ಇಲ್ಲ. ಈಗಾಗಲೇ 4 ಗ್ಯಾರಂಟಿಗಳ ಮೂಲಕ ಮತದಾರರ ಮನ ಗೆದ್ದಿರುವ ಕಾಂಗ್ರೆಸ್ ಪಕ್ಷ ಈ ಭಾರಿ ಲೋಕಸಭಾ ಚುನಾವಣೆಯಲ್ಲಿ 20ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದೆ" ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಹೇಳಿದರು.
ಅಂಕೋಲಾ ಪಟ್ಟಣದ ನಾಡವರ ಸಮುದಾಯ ಭವನದಲ್ಲಿ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ಲೋಕಸಭಾ ಅಭ್ಯರ್ಥಿಯ ಆಯ್ಕೆ ಕುರಿತು ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, "ಪಕ್ಷದ ಕಾರ್ಯಕರ್ತರು ತುಂಬಾ ಹುರುಪಿನಲ್ಲಿ ಲೋಕಸಭಾ ಚುನಾವಣೆಯತ್ತ ನೋಟ ಬೀರಿದ್ದಾರೆ. ಕಾಂಗ್ರೆಸ್ ಪಕ್ಷ ವಿಧಾನಸಭೆಯಲ್ಲಿ ನೀಡಿದ 5 ಗ್ಯಾರಂಟಿಗಳಲ್ಲಿ ಪೊರೈಸಿರುವ 4 ಗ್ಯಾರಂಟಿಯಿಂದ ಸಂತೃಪ್ತರಾಗಿದ್ದಾರೆ. ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಗೆ ಟಿಕೆಟ್ ನೀಡುವಂತೆ ಯಾರು ಬಂದಿಲ್ಲ. ಗೆಲ್ಲುವ ಸಾಮರ್ಥ್ಯ ಇರುವವರನ್ನು ಆಯ್ಕೆ ಮಾಡಿ ಟಿಕೆಟ್ ನೀಡಬೇಕು ಎಂಬುದು ಆಕಾಂಕ್ಷಿಗಳು ತಮ್ಮ ಬಳಿ ಹಂಚಿಕೊಂಡಿದ್ದಾರೆ" ಎಂದರು.

ಶಾಸಕ ಆರ್.ವಿ. ದೇಶಪಾಂಡೆ ಮಾತನಾಡಿ, "ಕಾಂಗ್ರಸ್ ಶಾಸಕರು ಬಿಜೆಪಿಗೆ ಹೋಗುವ ಹಾಗೂ ಬಿಜೆಪಿ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಪ್ರಶ್ನೆ ಅಥವಾ ಪ್ರಮೇಯವೇ ಇಲ್ಲ. ನಾಡಿನ ಜನತೆ ಬಹುಮತ ಕೊಟ್ಟಿರುವಾಗ ಇವೆಲ್ಲಾ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಬಿಜೆಪಿ ಅಧಿಕಾರಾವಧಿಯಲ್ಲಿ ಹದಗೆಟ್ಟ ಆರ್ಥಿಕ ವ್ಯವಸ್ಥೆಯನ್ನು ಸರಿ ದಾರಿಗೆ ತಂದು ಕೊಂಡಿರುವ ಕಾಂಗ್ರೆಸ್ ಪಕ್ಷ ಕೊಟ್ಟ ಮಾತಿನಂತೆ ನಡೆದುಕೊಂಡಿದೆ. ಚುನಾವಣೆ ಬರುತಿದ್ದಂತೆ ವೇದಿಕೆಯಲ್ಲಿ ಕಾಣಿಸಿಕೊಳ್ಳುವವರು ಚುನಾವಣೆ ಘೋಷಣೆಯಾಗುತ್ತಿದ್ದಂತೆ ನಾಪತ್ತೆಯಾಗಿ ಬಿಡುತ್ತಾರೆ" ಎಂದು ವೇದಿಕೆಯಲ್ಲಿ ಉಪಸ್ಥಿತರಿದ್ದ ಯೋಶೋಧರ ನಾಯ್ಕರತ್ತ ಬೆರಳು ತೋರಿಸಿ ಆಕ್ರೋಶ ಹೊರಹಾಕಿದರು.
ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, "ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ಮಾಡುವ ಕೆಲಸ ಮಾಡುತ್ತಿಲ್ಲ ಎನ್ನುವ ಆರೋಪವಿದೆ. ನಾನು ಹದಿಮೂರು ವರ್ಷ ಜಿಲ್ಲೆಯಲ್ಲಿ ಸಂಘಟನೆ ಮಾಡಿದ್ದೇನೆ. ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಎಲ್ಲರೂ ಸಂಘಟನೆ ಮಾಡಬೇಕು. ಪಕ್ಷ ಸಂಘಟನೆಯಲ್ಲಿ ಯಾರು ದೊಡ್ಡವರಲ್ಲ. ಯಾವ ಹುದ್ದೆಯೂ ದೊಡ್ಡದಲ್ಲ. ತಪ್ಪು ಮಾಡಿದವರ ಮೇಲೆ ಯಾರೇ ಆದರೂ ಶಿಸ್ತು ಕ್ರಮ ಕೈಗೊಳ್ಳಲು ಹೈ ಕಮಾಂಡ್‌ಗೆ ಸೂಚಿಸಬೇಕು. ಅಲ್ಲದೆ ಸಂಘಟನೆ ಇಲ್ಲದೆ ಚುನಾವಣೆಗೆ ಹೋದರೇ ಗೆಲ್ಲಲು ಸಾಧ್ಯವಿಲ್ಲ ಎಂಬುದನ್ನು ಎಲ್ಲರೂ ತಿಳಿದುಕೊಳ್ಳಬೇಕು" ಎಂದರು.
ಶಾಸಕ ಸತೀಶ ಸೈಲ್ ಮಾತನಾಡಿ, "ನೆರೆಯ ಗೋವಾ ಹಾಗೂ ದಕ್ಷಿಣಕನ್ನಡ ಜಿಲ್ಲೆಯನ್ನು ಹೋಲಿಸಿದರೆ ನಮ್ಮ ಜಿಲ್ಲೆ ಪ್ರವಾಸೋದ್ಯಮ ತುಂಬಾ ಅಭಿವೃದ್ಧಿಯಾಗಬೇಕಿದೆ. ಜಿಲ್ಲೆಯ 4,500 ಹೆಕ್ಟೇರ್ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡು ನಿರಾಶ್ರಿತರನ್ನಾಗಿಸಿರುವ ನೌಕಾನೆಲೆಯವರು 150 ಎಕರೆ ಪ್ರದೇಶದಲ್ಲಿ ಬೃಹತ್ ಆಟದ ಮೈದಾನ ನಿರ್ಮಿಸಿಕೊಂಡು ಐಷಾರಾಮಿ ಜೀವನ ಸಾಗಿಸುತ್ತಿದ್ದಾರೆ.
25 ವರ್ಷಗಳಿಂದ ನಿರಾಶ್ರಿತರಾಗಿದ್ದ ಕುಟುಂಬಗಳಿಗೆ ಸಿಗಬೇಕಿದ್ದ ನ್ಯಾಯಕ್ಕಾಗಿ ಹೋರಾಟ ನಡೆಸಿ, ಸುಪ್ರಿಂಕೋರ್ಟ ನೀಡಿದ ಆದೇಶದಂತೆ ಪರಿಹಾರ ವಿತರಿಸಿದ್ದನ್ನು ತಮ್ಮ ಸಾಧನೆ ಎಂದು ಬಿಜೆಪಿ ಪ್ರಚಾರ ಗಿಟ್ಟಿಸಿಕೊಂಡಿದೆ. ಪ್ರಧಾನಿ ಮೋದಿ ಬಂದರೂ ನನ್ನನ್ನು ಗೆಲ್ಲಿಸಿರುವ ಮತದಾರರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ" ಎಂದರು.
ಸಚಿವ ವೈದ್ಯ, ಶಾಸಕ ಸೈಲ್ ಅನುಪಸ್ಥಿತಿಯಲ್ಲಿ ಸಭೆ ಪ್ರಾರಂಭ
ಕಾಂಗ್ರೆಸ್ ಪಕ್ಷದ ಕ್ಷೇತ್ರದ ವೀಕ್ಷಕರಾಗಿರುವ ಸಚಿವ ಹೆಚ್.ಕೆ ಪಾಟೀಲ್ ನೇತೃತ್ವದಲ್ಲಿ ನಡೆದ ಲೋಕಸಭಾ ಚುನಾವಣೆ ಪೂರ್ವಭಾವಿ ಸಭೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹಾಗೂ ಕ್ಷೇತ್ರದ ಶಾಸಕ ಸತೀಶ್ ಸೈಲ್ ಅನುಪಸ್ಥಿತಿಯಲ್ಲಿ ಸಭೆ ಪ್ರಾರಂಭಿಸಲಾಯಿತು. ಇಬ್ಬರು ನಾಯಕರ ಅನುಪಸ್ಥಿತಿಯಲ್ಲಿ ಸಭೆಗೆ ಸಚಿವ ಹೆಚ್.ಕೆ. ಪಾಟೀಲ್ ಚಾಲನೆ ನೀಡಿದ್ದು, ಸತೀಶ್ ಸೈಲ್ ಖಾಸಗಿ ಕಾರ್ಯಕ್ರಮಕ್ಕೆ ತೆರಳಿದ ಕಾರಣ ತಡವಾಗಿ ಬಂದಿರುವುದಾಗಿ ತಿಳಿಸಿದರು. ಆದರೆ ಪ್ರಮುಖ ಸಭೆಯಾಗಿದ್ದರೂ ಇಬ್ಬರ ಅನುಪಸ್ಥಿತಿ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಕಾರ್ಯಕರ್ತರು ಮಾತಾಡಿಕೊಳ್ಳುವಂತಾಯಿತು.
ತಡವಾಗಿ ಬಂದ ಸೈಲ್ ಕಾಲೆಳೆದ ದೇಶಪಾಂಡೆ
ಲೋಕಸಭಾ ಪೂರ್ವಭಾವಿ ಸಭೆಗೆ ಒಂದು ಗಂಟೆ ತಡವಾಗಿ ಬಂದ ಶಾಸಕ ಸತೀಶ್ ಸೈಲ್ ಅವರನ್ನು ಸಭೆಗೆ ಬಹಳ ಬೇಗ ಬಂದ ಸೈಲ್‌ಗೆ ಸ್ವಾಗತ ಆರ್.ವಿ ದೇಶಪಾಂಡೆ ಹಾಸ್ಯವಾಗಿಯೇ ಕಾಲೆಳೆದರು. "ಸತೀಶ್ ಸೈಲ್ ಅವರಿಗೆ ಕರೆಯಿರಿ ಎಂದು ಶಂಭು ಶೆಟ್ಟಿ ಅವರಿಗೆ ಹೇಳಿದೆ. ಅವರು ಕೈಗಾದ ಕಾರ್ಯಾಕ್ರಮ ಒಂದಕ್ಕೆ ಹೋಗಿ ಬರಲಿದ್ದಾರೆ ಎಂದರು. ನಾನು ಹೇಳಿದೆ, ಅವರು ಮನೆಯಲ್ಲಿಯೇ ಇದ್ದಾರೆ, ಈಗ ರೆಡಿ ಆಗಿ ಬರುತ್ತಾರೆ ಎಂದಿದ್ದೆ.ಸೈಲ್ ಈಗ ಎದ್ದು ರೆಡಿ ಆಗಿ ಪೌಡರ್ ಹಚ್ಚಿಕೊಂಡು ಬಂದಿದ್ದಾರೆ, ಬೇಕಾದರೆ ನೋಡಿ ಎಂದು ಹಾಸ್ಯವಾಗಿ ಹೇಳಿದರು".
ಇನ್ನು ಸತೀಶ್ ಸೈಲ್ ಮಾತನಾಡುವ ವೇಳೆ "ಜಿಲ್ಲಾಧ್ಯಕ್ಷರು ಸತೀಶ್ ಸೈಲ್ ಯಾವಾಗಲೂ ಲೇಟಾಗಿ ಬರುತ್ತಾರೆ ಎಂದು ಶಿರಸಿ ಕಾರ್ಯಕ್ರಮದಲ್ಲಿ ಹೇಳಿದ್ದರು. ಅಧ್ಯಕ್ಷರ ಮಾತನ್ನು ಉಳಿಸಿಕೊಳ್ಳಲು ಲೇಟಾಗಿ ಬಂದಿದ್ದೇನೆ" ಎಂದು ಟಾಂಗ್ ನೀಡಿದರು.












Click it and Unblock the Notifications