ಶಿರಶಿಯಲ್ಲಿ ಜೀವಪರಿಸರ ವಿಶ್ವವಿದ್ಯಾಲಯ ಸ್ಥಾಪನೆ: ಬಸವರಾಜ ಬೊಮ್ಮಾಯಿ ಘೋಷಣೆ
ಕಾರವಾರ, ಜನವರಿ, 15: ಪರಿಸರ ಹಾಗೂ ತೋಟಗಾರಿಕಾ ಕಾಲೇಜುಗಳು ಜಿಲ್ಲೆಯಲ್ಲಿರುವ ಕಾರಣ ಎರಡನ್ನು ಸಂಯೋಜಿಸಲಾಗುವುದು. ಈ ಮೂಲಕ ರಾಜ್ಯದಲ್ಲಿಯೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಜೀವಪರಿಸರ ವಿಶ್ವವಿದ್ಯಾಲಯ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಶಿರಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪರಿಸರ, ತೋಟಗಾರಿಕೆ, ಕೃಷಿ, ಜೀವವೈವಿಧ್ಯ, ವನ್ಯಜೀವಿ ರಕ್ಷಣೆ, ಜನಾಭಿವೃದ್ಧಿ ಹಾಗೂ ಮತ್ತು ಆರ್ಥಿಕತೆಯ ಕುರಿತಾದ ಸಮಗ್ರ ಅಧ್ಯಯನಕ್ಕೆ ಜೀವಪರಿಸರ ವಿಶ್ವವಿದ್ಯಾಲಯವನ್ನು ರಾಜ್ಯದಲ್ಲಿಯೇ ಮೊದಲ ಬಾರಿಗೆ ಶಿರಸಿಯಲ್ಲಿ ಸ್ಥಾಪನೆ ಮಾಡಲಿದ್ದೇವೆ. ಈ ವಿಶ್ವವಿದ್ಯಾಲಯದ ಜೊತೆಗೆ ಸಾಂಪ್ರದಾಯಿಕ ಶಿಕ್ಷಣವಾದ ಕಲೆ, ವಾಣಿಜ್ಯ, ವಿಜ್ಞಾನ ಪದವಿ ಕೂಡ ಇರಲಿದೆ. ಕಾಂಪೋಸಿಟ್ ವಿಶ್ವವಿದ್ಯಾಲಯ ಸ್ಥಾಪನೆಗೆ ಈ ಬಾರಿಯ ಬಜೆಟ್‌ನಲ್ಲಿ ಅನುದಾನ ನೀಡಲಾಗುವುದು ಎಂದು ಘೋಷಿಸಿದರು.
ಇನ್ನು ಕಳಸಾ- ಬಂಡೂರಿ ಯೋಜನೆಗೆ ಸಂಬಂಧಿಸಿದಂತೆ ಗೋವಾದವರು ಎಲ್ಲಿಗೆ ಬೇಕಾದರೂ ಹೋಗಲಿ. ನಾವು ಸುಪ್ರೀಂ ಕೋರ್ಟ್ ನಿರ್ದೇಶಿತ ಪೀಠದ ವರದಿಯಂತೆ ಕಾಮಗಾರಿಗಳನ್ನು ನಡೆಸುತ್ತೇವೆ. ಗೋವಾದವರು ಈಗಾಗಲೇ ಸುಪ್ರೀಂ ಕೋರ್ಟ್‌ಗೆ ಹೋಗಿ ವಾಪಸ್ಸು ಬಂದಿದ್ದಾರೆ. ಸುಪ್ರೀಂಕೋರ್ಟ್ ನಿರ್ದೇಶಿತ ಪೀಠ ರಚನೆಯಾಗಿ, ಅದರ ವರದಿಯ ಆಧಾರದಲ್ಲಿ ನೋಟಿಫಿಕೇಶನ್ ಮಾಡಲಾಗಿದೆ. ಡಿಪಿಆರ್ ಒಪ್ಪಿಗೆ ನೀಡಿದೆ. ಹೀಗಾಗಿ ಸುಪ್ರೀಂ ಕೋರ್ಟ್‌ನ ಆದೇಶ ಹಾಗೂ ಪೀಠದ ವರದಿಯಂತೆ ಕಾಮಗಾರಿಗಳನ್ನು ನಡೆಸಲಿದ್ದೇವೆ ಎಂದು ತಿಳಿಸಿದರು.

ಅರಣ್ಯವಾಸಿಗಳಿಗೆ ಅಭಯ ನೀಡಿದ ಸಿಎಂ
ಇಡೀ ದೇಶದ ಎಲ್ಲಾ ರಾಜ್ಯಗಳು ಅರಣ್ಯ ಹಕ್ಕಿನ ಸಮಸ್ಯೆ ಎದುರಿಸುತ್ತಿದ್ದು, ಹೀಗಾಗಿ ಈ ವರದಿ ಸುಪ್ರೀಂ ಕೋರ್ಟ್‌ನಲ್ಲಿದೆ. ಕೇಂದ್ರ ಸರ್ಕಾರ ಕೂಡ ಈ ವಿಚಾರದ ಬಗ್ಗೆ ನಮ್ಮನ್ನು ಕೇಳಿದ್ದು, ಮೂರು ತಲೆಮಾರಿನ ಬದಲು ಒಂದು ತಲೆಮಾರಿನ ಆಧಾರ ಪರಿಗಣಿಸಿ ಅವರನ್ನು ಅರಣ್ಯವಾಸಿಗಳೆಂದು ಹಕ್ಕು ಪತ್ರ ವಿತರಿಸಬೇಕು ಎಂದು ರಾಜ್ಯದ ಸ್ಪಷ್ಟ ಅಭಿಪ್ರಾಯವನ್ನು ಕೇಂದ್ರಕ್ಕೆ ಕಳುಹಿಸಿದ್ದೇವೆ. ಅದು ಕೇಂದ್ರದಿಂದ ಸುಪ್ರೀಂ ಕೋರ್ಟ್‌ಗೆ ಮಂಡನೆಯಾಗಲಿದೆ ಎಂದರು

ತೊಂದರೆ ನೀಡದಂತೆ ನಿರ್ದೇಶನ
ರಾಜ್ಯದ ಎಲ್ಲೆಲ್ಲಿ ಅರಣ್ಯವಾಸಿಗಳಿದ್ದಾರೆಯೋ ಅವರನ್ನು ಯಾವ ಕಾರಣಕ್ಕೂ ನಮ್ಮ ರಾಜ್ಯ ಸರ್ಕಾರ ಒಕ್ಕಲೆಬ್ಬಿಸುವುದಿಲ್ಲ. ಈಗಾಗಲೇ ಅಧಿಕಾರಿಗಳ ಸಭೆಯನ್ನೂ ನಡೆಸಿದ್ದು, ಸುಪ್ರೀಂಕೋರ್ಟ್ ತೀರ್ಪಿನವರೆಗೂ ಅಧಿಕಾರಿಗಳು ಕೂಡ ಅರಣ್ಯವಾಸಿಗಳಿಗೆ ತೊಂದರೆ ನೀಡದಂತೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.

ಜಿಲ್ಲೆ ಮಾಡಲು ರಾಜ್ಯದ ಹಲವೆಡೆ ಬೇಡಿಕೆ
ಶಿರಸಿ ಜಿಲ್ಲೆ ಬೇಡಿಕೆಯ ಬಗ್ಗೆ ಹೋರಾಟ ಸಮಿತಿಯವರು ಮನವಿ ಸಲ್ಲಿಸಿದ್ದಾರೆ. ಈ ರಿತಿ ಬೇಡಿಕೆ ರಾಜ್ಯದ ಹಲವೆಡೆ ಇದೆ. ಹೀಗಾಗಿ ಸಚಿವ ಸಂಪುಟದಲ್ಲಿ ಈ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳುತ್ತೇವೆ ಎಂದರು. ಹಾಗೆಯೇ ಈಗಾಗಲೇ ರಾಮಕೃಷ್ಣ ಹೆಗಡೆಯವರ ಹೆಸರಿನಲ್ಲಿ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದಲ್ಲಿ ಪೀಠ ಮಾಡಲಾಗಿದೆ. ಹೆಗಡೆಯವರು ಕೇವಲ ಒಂದು ವಿಚಾರದಲ್ಲಿ ಅಲ್ಲ, ಹಲವು ಕ್ಷೇತ್ರಗಳಲ್ಲಿ ಪರಿಣಿತರು. ಹೀಗಾಗಿ ಸಮಗ್ರ ಅಧ್ಯಯನಕ್ಕಾಗಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅವರಿಗೆ ಒಂದು ಪೀಠ ಮಾಡಲಾಗುವುದು ಎಂದರು.

ಆಸ್ಪತ್ರೆ ನಿರ್ಮಾಣಕ್ಕೆ ತೀರ್ಮಾನ
ಕಾರವಾರದಲ್ಲಿ ವೈದ್ಯಕೀಯ ಕಾಲೇಜು ಈಗಾಗಲೇ ಇದೆ. ಘಟ್ಟದ ಭಾಗದ ಜನರಿಗೆ ಅನುಕೂಲವಾಗುವಂತೆ ಸಾರಿಗೆ ಸಂಪರ್ಕದ ಬಗ್ಗೆ ಪರಿಶೀಲನೆ ನಡೆಸಲಿದ್ದೇವೆ. ಜನಾಭಿಪ್ರಾಯದಂತೆ ಕುಮಟಾದಲ್ಲಿ ಆಸ್ಪತ್ರೆ ಮಾಡಲು ತೀರ್ಮಾನಿಸಲಾಗಿದ್ದು, ಆದಷ್ಟು ಬೇಗ ಆದೇಶಿಸಿ ನಾನೇ ಅದಕ್ಕೆ ಅಡಿಗಲ್ಲು ಹಾಕುತ್ತೇನೆ ಎಂದು ಭರವಸೆ ನೀಡಿದರು. ಇನ್ನು ಹೈಕಮಾಂಡ್ ಸೂಚನೆ ನೀಡುತ್ತಿದ್ದಂತೆಯೇ ಸಚಿವ ಸಂಪುಟ ವಿಸ್ತರಣೆ ಮಾಡುತ್ತೇವೆ. ಕೆಲವು ನಿಗಮಗಳ ಅವಧಿ ಮುಗಿದಿವೆ, ಕೆಲವರದ್ದು ಆಗಿಲ್ಲ. ಇವೆಲ್ಲವನ್ನೂ ಪರಿಶೀಲಿಸಿ ಅಧ್ಯಕ್ಷರು, ಸದಸ್ಯರ ನೇಮಕ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.












Click it and Unblock the Notifications