‘ನೆರೆ ಪರಿಹಾರದ ಅನುದಾನದಲ್ಲಿ ಶಾಸಕಿಗೆ ಕಮಿಷನ್’; ಆನಂದ್ ಅಸ್ನೋಟಿಕರ್ ಆರೋಪ
ಕಾರವಾರ, ನವೆಂಬರ್ 19: 'ಕ್ಷೇತ್ರದಲ್ಲಿ ನೆರೆ ಪ್ರವಾಹದಿಂದ ಮನೆ ಮಠ ಕಳೆದುಕೊಂಡ ಸಂತ್ರಸ್ತರಿಗೆ ನೆಲೆ ಕಲ್ಪಿಸಲು ಸರ್ಕಾರದಿಂದ ಬಂದ ಪ್ರವಾಹ ಪರಿಹಾರದ ಅನುದಾನದಲ್ಲಿ ಶಾಸಕಿ ರೂಪಾಲಿ ನಾಯ್ಕ ಹಾಗೂ ಅವರ ಬೆಂಬಲಿಗರು ಗುತ್ತಿಗೆದಾರರಿಂದ ಶೇ 25ರಷ್ಟು ಕಮಿಷನ್ ಪಡೆಯುತ್ತಿದ್ದಾರೆ' ಎಂದು ಮಾಜಿ ಸಚಿವ ಆನಂದ ಅಸ್ನೋಟಿಕರ್ ಗಂಭೀರ ಆರೋಪ ಮಾಡಿದ್ದಾರೆ.
ಜಿಲ್ಲಾ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 'ನೆರೆ ಪ್ರವಾಹದಲ್ಲಿ ಹಾನಿಗೊಳಗಾದ ಮನೆ, ಸೇತುವೆ, ರಸ್ತೆ, ಕಟ್ಟಡ ಸೇರಿದಂತೆ ಇನ್ನಿತರ ಕಾಮಗಾರಿಗಳಿಗೆ ಜಿಲ್ಲಾ ಪಂಚಾಯತ್, ಲೋಕೋಪಯೋಗಿ ಇಲಾಖೆಗೆ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಅನುದಾನ ಬಂದಿದೆ. ಅದನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ ರೀತಿ ನೆರೆ ಸಂತ್ರಸ್ತರ ಅನುದಾನದಲ್ಲಿ ಕಮಿಷನ್ ಪಡೆದು ಶಾಸಕಿ ಭ್ರಷ್ಟಾಚಾರ ನಡೆಸುತಿರುವುದು ಖಂಡನೀಯ' ಎಂದರು.
'ಸರಕಾರದಿಂದ ಸಂತ್ರಸ್ತರಿಗೆ ಮೂರೂವರೆ ಕೋಟಿ ರೂ.ನಷ್ಟು ಅನುದಾನ ಬಂದಿದ್ದು, ಅದು ಜಿಲ್ಲಾ ಪಂಚಾಯತ್ ಗೆ ನೀಡಲಾಗಿದೆ. ಇನ್ನೂ ಟೆಂಡರ್ ಕರೆಯದೆ ನೆರೆ ಪ್ರವಾಹದ ಕಾಮಗಾರಿಯನ್ನು ಲ್ಯಾಂಡ್ ಆರ್ಮಿಗೆ ನೀಡಿದ್ದು, ಈ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ. ಇದರ ಬಗ್ಗೆ ಸಂಪೂರ್ಣ ತನಿಖೆ ನಡೆಯಬೇಕು. ಈ ಅನುದಾನ ಸದ್ಬಳಕೆಯಾಗದೇ ಇದ್ದರೆ ಹೋರಾಟ ನಡೆಸಬೇಕಾಗುವುದು' ಎಂದು ಎಚ್ಚರಿಸಿದರು.

'ಶಾಸಕಿ ನಿಲುವು ಸ್ಪಷ್ಟಪಡಿಸಲಿ': ಕೈಗಾ ಅಣುವಿದ್ಯುತ್ ಸ್ಥಾವರ 5 ಮತ್ತು 6ನೇ ಘಟಕ ವಿಸ್ತರಣೆ ವಿರೋಧಿಸಿ ನಡೆದ ಬೃಹತ್ ಜನಜಾಗೃತಿ ಸಮಾವೇಶದಲ್ಲಿ ಸ್ಥಳೀಯ ಶಾಸಕಿ ಭಾಗವಹಿಸದೇ, ಕ್ಷೇತ್ರದ ಜನರ ಬಗ್ಗೆ ನಿಷ್ಕಾಳಜಿ ತೋರಿದ್ದಾರೆ. ಕೈಗಾದ ಬಗ್ಗೆ ಕೂಡಲೇ ಅವರು ತಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂದು ಆನಂದ್ ಅಸ್ನೋಟಿಕರ್ ಒತ್ತಾಯಿಸಿದರು. 'ಸಂಸದ ಅನಂತಕುಮಾರ ಹೆಗೆಡೆ ಭಾಷಣ ಬಿಗಿದು, ಯುವಕರ ಕೈಯಲ್ಲಿ ಕತ್ತಿ ನೀಡುವುದ ಬಿಟ್ಟರೆ ಬೇರೆ ಏನನ್ನೂ ಮಾಡಿಲ್ಲ. ಜಿಲ್ಲೆಯ ಯುವಕರಿಗೆ ಉದ್ಯೋಗವಕಾವಿಲ್ಲ. ಈ ಬಗ್ಗೆ ಸಂಸದರು ಗಮನ ಹರಿಸಲಿ' ಎಂದರು.












Click it and Unblock the Notifications