ಕುಮಟಾದಲ್ಲಿ ಮಹಿಳೆಯನ್ನು ಬಲಿ ಪಡೆದ ಹಪ್ಪಳದ ಗಿರಣಿ
ಕಾರವಾರ, ಆಗಸ್ಟ್.05: ಹಪ್ಪಳದ ಹಿಟ್ಟು ಮಿಶ್ರಣ ಮಾಡುವ ಗಿರಣಿಯೊಂದು ಮಹಿಳೆಯೊಬ್ಬರನ್ನು ಬಲಿ ಪಡೆದಿರುವ ಹೃದಯ ವಿದ್ರಾವಕ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿ ನಡೆದಿದೆ.
ಕುಮಟಾದ ಮಿರ್ಜಾನ್ ರಾಮನಗರದ ಮಾಲಿನಿ ಮುತ್ತುರಾಜ (44) ಮೃತ ದುರ್ದೈವಿ.
ಹಪ್ಪಳ ತಯಾರಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದ ಮಾಲಿನಿ, ಭಾನುವಾರ ಬೆಳಗ್ಗೆ ಎಂದಿನಂತೆ ಕೆಲಸಕ್ಕೆಂದು ಲಕ್ಷ್ಮಣ ಪಟಗಾರ ಅವರ ಮನೆಯಲ್ಲಿದ್ದ ಲಿಜ್ಜತ್ ಹಪ್ಪಳದ ಫ್ಯಾಕ್ಟರಿಗೆ ಬಂದಿದ್ದಾರೆ.
ಈ ವೇಳೆ ವಿದ್ಯುತ್ ಇರಲಿಲ್ಲ. ಆದರೆ, ಹಪ್ಪಳದ ಹಿಟ್ಟು ಮಿಶ್ರಣ ಮಾಡುವ ಯಂತ್ರಕ್ಕೆ ಮೊದಲೇ ಹಿಟ್ಟನ್ನು ಹಾಕಿದ್ದ ಮಾಲಿನಿ ಅದನ್ನು ತೆಗೆಯಲೆಂದು ವಿದ್ಯುತ್ ಇಲ್ಲದ ಸಂದರ್ಭ ಕೈ ಹಾಕಿದ್ದಾರೆ.

ಅಷ್ಟರಲ್ಲೇ ವಿದ್ಯುತ್ ಬಂದ ಕಾರಣ ಯಂತ್ರ ಕಾರ್ಯಾರಂಭಿಸಿದೆ. ವಿಧಿಯಾಟ ಎಂಬಂತೆ ದುರದೃಷ್ಟವಶಾತ್ ಆಕೆ ಯಂತ್ರದ ಸ್ವಿಚ್ ಆಫ್ ಮಾಡಿರದ ಕಾರಣ ಮಾಲಿನಿಯ ಕೈಯನ್ನು ಯಂತ್ರ ಒಳ ಎಳೆದುಕೊಂಡಿದೆ. ಇದರಿಂದಾಗಿ ಅವರ ಎದೆಯವರೆಗಿನ ಭಾಗ ಯಂತ್ರದ ಪಾಲಾಗಿ ಸಾವನ್ನಪ್ಪಿದ್ದಾರೆ.
ಮಾಲಿನಿಯ ಪತಿ ಮಂಗಳೂರಿನಲ್ಲಿ ಪೇಂಟಿಂಗ್ ಉದ್ಯೋಗ ಮಾಡುತ್ತಿದ್ದಾರೆ. ಓರ್ವ ಗಂಡು ಹಾಗೂ ಹೆಣ್ಣು ಮಕ್ಕಳನ್ನು ಹೊಂದಿರುವ ಮಾಲಿನಿ ಇತರ ಮಹಿಳೆಯರೊಂದಿಗೆ ಈ ಹಪ್ಪಳ ತಯಾರಿಸುವ ಸಂಸ್ಥೆಯಲ್ಲಿ ಉದ್ಯೋಗ ಕಂಡುಕೊಂಡಿದ್ದರು.
ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications