ಉತ್ತರ ಕನ್ನಡಕ್ಕೆ ಇಂಗ್ಲೆಂಡ್‌ನಿಂದ 12 ಮಂದಿ ಆಗಮನ
ಕಾರವಾರ, ಡಿಸೆಂಬರ್ 24: ಬ್ರಿಟನ್‌ನಲ್ಲಿ ಕಂಡು ಬಂದಿರುವ ಹೊಸ ರೂಪಾಂತರ ಕೊರೋನಾ ಇದೀಗ ಮತ್ತೆ ಎಲ್ಲರಲ್ಲಿ ಆತಂಕ ಸೃಷ್ಟಿ ಮಾಡಿದೆ. ಇಂಗ್ಲೆಂಡ್‌ನಿಂದ 12 ಮಂದಿ ಉತ್ತರ ಕನ್ನಡಕ್ಕೆ ಬಂದಿರುವ ಬಗ್ಗೆ ಸರ್ಕಾರ ಜಿಲ್ಲಾಡಳಿತಕ್ಕೆ ಪಟ್ಟಿ ಕಳುಹಿಸಿದ್ದು, ಜಿಲ್ಲಾಡಳಿತ ಸಹ ಮುಂಜಾಗ್ರತೆ ಕ್ರಮಕ್ಕೆ ಮುಂದಾಗಿದೆ.
ಮುಂಡಗೋಡ ತಾಲೂಕಿನ ಟಿಬೇಟಿಯನ್ ಕ್ಯಾಂಪಿಗೆ 8, ದಾಂಡೇಲಿ ಹಾಗೂ ಕುಮಟಾ ತಾಲೂಕಿಗೆ ತಲಾ ಇಬ್ಬರು ಇಂಗ್ಲೆಂಡ್‌ನಿಂದ ಆಗಮಿಸಿರುವ ಮಾಹಿತಿ ದೊರಕಿದೆ. ಜಿಲ್ಲಾಡಳಿತ ಈಗಾಗಲೇ ಎಲ್ಲರನ್ನೂ ಸಂಪರ್ಕಿಸಿ ಕ್ವಾರಂಟೈನ್ ಆಗಲು ಸೂಚನೆ ನೀಡಿದೆ. ಪ್ರತ್ಯೇಕವಾಗಿ ಎಲ್ಲರೂ ಜಿಲ್ಲೆಗೆ ಆಗಮಿಸಿದ್ದು, ಈ ಪೈಕಿ ಕೆಲವರು ಈಗಾಗಲೇ 14 ದಿನಗಳ ಅವಧಿಯನ್ನು ಕಳೆದಿದ್ದಾರೆ. ಆದರೂ ಎಲ್ಲರ ಗಂಟಲು ದ್ರವವನ್ನು ತೆಗೆದು ಪರೀಕ್ಷೆಗೆ ಒಳಪಡಿಸಲಾಗಿದೆ.
"ಜಿಲ್ಲೆಯ ಜನರು ಆತಂಕ ಪಡುವ ಅಗತ್ಯವಿಲ್ಲ. ಜಿಲ್ಲಾಡಳಿತಕ್ಕೆ ಬಂದಿರುವ ಪಟ್ಟಿಯಲ್ಲಿರುವ ಎಲ್ಲರನ್ನೂ ಸಂಪರ್ಕಿಸಿ ಕ್ವಾರಂಟೈನ್ ಆಗಲು ಸೂಚನೆ ನೀಡಿದ್ದೇವೆ. ಯಾರಲ್ಲೂ ರೋಗ ಲಕ್ಷಣಗಳು ಕಂಡು ಬಂದಿಲ್ಲ. ಜಿಲ್ಲಾಡಳಿತ ಮುಂಜಾಗ್ರತೆ ವಹಿಸಿದೆ" ಎಂದು ಜಿಲ್ಲಾಧಿಕಾರಿ ಡಾ. ಕೆ. ಹರೀಶ ಕುಮಾರ್ ಹೇಳಿದ್ದಾರೆ.

ರಾತ್ರಿ ಕರ್ಫ್ಯೂ ಜಾರಿ; ಹೊಸ ರೂಪಾಂತರ ಕೊರೋನಾ ಹರಡುವಿಕೆ ತಡೆಗೆ ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ಜಾರಿ ಮಾಡಲು ಆದೇಶ ನೀಡಿದೆ. ಜಿಲ್ಲಾಧಿಕಾರಿ ಡಾ. ಕೆ. ಹರೀಶ ಕುಮಾರ್ ಗುರುವಾರ ರಾತ್ರಿಯಿಂದ ಜನವರಿ 2ರವರೆಗೆ ರಾತ್ರಿ 11 ಗಂಟೆಯಿಂದ ಬೆಳಗ್ಗೆ 5ರವರೆಗೆ ಕಲಂ 144 ಅಡಿಯಲ್ಲಿ ಕರ್ಫ್ಯೂ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ.
ನೈಟ್ ಕರ್ಫ್ಯೂ ಇರುವ ವೇಳೆಯಲ್ಲಿ ಜನರು ಅತ್ಯಾವಶ್ಯಕ ಕಾರಣ ಬಿಟ್ಟು ಬೇರೆ ಕಾರಣಕ್ಕೆ ಓಡಾಡದಂತೆ, ನಿಷೇಧಿತ ಅವಧಿಯಲ್ಲಿ ಕೆಲಸ ನಿರ್ವಹಿಸುವ ಕೈಗಾರಿಕೆ, ಕಂಪನಿ, ಸಂಘ- ಸಂಸ್ಥೆಗಳಲ್ಲಿ ಶೇಕಡಾ 50 ಸಿಬ್ಬಂದಿಗಳು ಮಾತ್ರ ಕರ್ತವ್ಯ ನಿರ್ವಹಿಸುವಂತೆ ಆದೇಶಿಸಲಾಗಿದೆ.
ಇನ್ನು ನಿಷೇಧಿತ ಅವಧಿಯಲ್ಲಿ ದೂರ ಪ್ರಯಾಣದ ಬಸ್, ರೈಲ್ವೆ, ವಿಮಾನ ಸಂಚಾರ ಮಾಡಬಹುದಾಗಿದ್ದು, ಅಧಿಕೃತ ಪ್ರಯಾಣ ಚೀಟಿ ಇರುವವರು ಓಡಾಡಲು ಅವಕಾಶ ನೀಡಲಾಗಿದೆ. ಅವರನ್ನು ಕರೆದುಕೊಂಡು ಹೋಗಿ ಬರಲು ಆಟೋ, ಟ್ಯಾಕ್ಸಿಗೆ ಸಹ ಅನುಮತಿ ನೀಡಲಾಗಿದೆ.
ಇದಲ್ಲದೇ ಅಗತ್ಯ ವಸ್ತುಗಳನ್ನು ಸಾಗಿಸುವ ವಾಹನಗಳ ಓಡಾಟಕ್ಕೆ ಅವಕಾಶ ಮಾಡಿಕೊಟ್ಟಿದ್ದು, ಕ್ರಿಸ್‌ಮಸ್ ಹಬ್ಬವನ್ನು ಕೋವಿಡ್ ನಿಯಮಾವಳಿಗಳ ಪ್ರಕಾರ ಕಟ್ಟುನಿಟ್ಟಾಗಿ ಆಚರಿಸುವಂತೆ ಆದೇಶಿಸಲಾಗಿದೆ.












Click it and Unblock the Notifications