Yeshasvini Health Scheme: ಯಶಸ್ವಿನಿ ಆರೋಗ್ಯ ಯೋಜನೆಯ ಚಿಕಿತ್ಸೆ ದರಗಳ ಪರಿಷ್ಕರಣೆ
ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯನ್ನು ಪರಿಷ್ಕೃತವಾಗಿ ರಾಜ್ಯ ಸರ್ಕಾರವು 2022-23ನೇ ಸಾಲಿನಿಂದ ಮರುಜಾರಿಗೊಳಿಸಿದೆ. ಯಶಸ್ವಿನಿ ಯೋಜನೆಯಡಿ ಈಗಾಗಲೇ ನೀಡುತ್ತಿರುವ ಶಸ್ತ್ರ ಚಿಕಿತ್ಸೆಗಳ ದರ ಪರಿಷ್ಕರಣೆ ಕುರಿತು ಶಾಸಕರಾದ ಶ್ರೀನಿವಾಸ ಎನ್.ಟಿ ಅವರ ಅಧ್ಯಕ್ಷತೆಯಲ್ಲಿ ರಚಿಸಿರುವ ದರ ಪರಿಷ್ಕರಣೆ ಸಮಿತಿಯವರು ತಮ್ಮ ಶಿಫಾರಸ್ಸುಗಳನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದ್ದಾರೆ. ಅದರಂತೆ ಪ್ರಸ್ತುತ ಇರುವ ಚಿಕಿತ್ಸೆಗಳ ಪೈಕಿ 6 ಚಿಕಿತ್ಸೆಗಳನ್ನು ತಜ್ಞರ ಸಲಹೆಯಂತೆ ಕೈಬಿಡಲಾಗಿದೆ ಎಂದು ಸಿದ್ದರಾಮಯ್ಯ ಮಹತ್ವದ ಮಾಹಿತಿ ನೀಡಿದ್ದಾರೆ.
ಪ್ರಸ್ತುತ ಯಶಸ್ವಿನಿ ಯೋಜನೆಯಲ್ಲಿನ ಚಿಕಿತ್ಸಾ ದರಗಳು 2017-18ರ ಅವಧಿಯಲ್ಲಿ ನಿಗದಿ ಮಾಡಿದ ದರಗಳಾಗಿದ್ದು, ಪ್ರಸ್ತುತ ಮಾರುಕಟ್ಟೆ ದರಗಳಿಗೆ ಹೋಲಿಸಿದಲ್ಲಿ, ಅತ್ಯಂತ ಕಡಿಮೆ ಇರುವುದಾಗಿ ತಿಳಿಸಿ ಪ್ರಮುಖ ಆಸ್ಪತ್ರೆಗಳು ಯೋಜನೆಯಡಿ ನೆಟ್ ವರ್ಕ್ ಆಸ್ಪತ್ರೆಗಳಾಗಿ ಸೇರಿಕೊಳ್ಳಲು ಮುಂದೆ ಬರುತ್ತಿರಲಿಲ್ಲ. ಈ ಕಾರಣಕ್ಕಾಗಿ ಚಿಕಿತ್ಸೆಗಳ ದರಗಳನ್ನು ಪರಿಷ್ಕರಿಸಲು ಸರ್ಕಾರವು ಶಾಸಕರಾದ ಶ್ರೀನಿವಾಸ್ ಎನ್.ಟಿ ಅವರ ಅಧ್ಯಕ್ಷತೆಯಲ್ಲಿ ತಜ್ಞ ವೈದ್ಯರನ್ನೊಳಗೊಂಡ ದರ ಪರಿಷ್ಕರಣಾ ಸಮಿತಿ ರಚಿಸಿತ್ತು ಎಂದಿದ್ದಾರೆ.

ಸಮಿತಿಯು ಪ್ರಸ್ತುತ ಚಿಕಿತ್ಸಾ ದರಗಳನ್ನು ಪರಿಶೀಲಿಸಿದ್ದು, ಈಗಿನ ಪರಿಸ್ಥಿತಿಗೆ ಅನುಗುಣವಾಗಿ ಸಹಕಾರ ಸಂಸ್ಥೆಗಳ ಸದಸ್ಯರಿಗೆ ಅನುಕೂಲವಾಗುವಂತೆ ಅಗತ್ಯವಿದ್ದಲ್ಲಿ ಹೊಸ ಚಿಕಿತ್ಸೆಗಳನ್ನು ಸೇರಿಸುವುದಲ್ಲದೇ ಈಗಿನ ಸ್ಥಿತಿಗತಿಗಳಿಗೆ ಅನುಗುಣವಾಗಿ ಚಿಕಿತ್ಸಾ ದರಗಳನ್ನು ಪರಿಷ್ಕರಿಸಲು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿರುತ್ತದೆ. ಸಮಿತಿಯಲ್ಲಿ ಹೆಸರಾಂತ ಪ್ರತಿಷ್ಠಿತ ಆಸ್ಪತ್ರೆಗಳ 8 ತಜ್ಞ ವೈದ್ಯರ ಜೊತೆಗೆ ವಿವಿಧ ವೈದ್ಯಕೀಯ ವಿಭಾಗಗಳ 11 ವಿಶೇಷ ಆಹ್ವಾನಿತ ತಜ್ಞ ವೈದ್ಯರನ್ನು ಆಹ್ವಾನಿಸಿ 13 ಸಭೆಗಳನ್ನು ನಡೆಸಿ, ಅವರುಗಳ ಸಲಹೆ ಸೂಚನೆಗಳನ್ನು ಪಡೆದು ದರ ಪರಿಷ್ಕರಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.
69 ಹೊಸ ಚಿಕಿತ್ಸೆಗಳ ಸೇರ್ಪಡೆ
ಈಗಿನ ಯಶಸ್ವಿನಿ ಯೋಜನೆಯಲ್ಲಿ ಸುಮಾರು 2,128 ಚಿಕಿತ್ಸೆಗಳನ್ನು ಅಳವಡಿಸಿಕೊಂಡಿದ್ದು, ಪ್ರಸ್ತುತ ಇರುವ ಚಿಕಿತ್ಸೆಗಳ ಪೈಕಿ 6 ಚಿಕಿತ್ಸೆಗಳನ್ನು ತಜ್ಞರ ಸಲಹೆಯಂತೆ ಕೈಬಿಡಲಾಗಿದೆ. ಅದೇ ರೀತಿ ಇತ್ತೀಚಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಹೊಸದಾಗಿ ಪ್ರವರ್ಧಮಾನಕ್ಕೆ ಬಂದಿರುವ ಚಿಕಿತ್ಸೆಗಳ ಪೈಕಿ ಸಹಕಾರಿಗಳಿಗೆ, ರೈತಾಪಿ ವರ್ಗಕ್ಕೆ ಇಂಟರ್‌ವೆಂಷನಲ್ ರೇಡಿಯಾಲಜಿ, ಸಿಟಿವಿಎಸ್, ಕ್ಯಾನ್ಸರ್ ಕಾಯಿಲೆಗಳು ಮುಂತಾದ ವಿಭಾಗಗಳ ಒಟ್ಟು 69 ಹೊಸ ಚಿಕಿತ್ಸೆಗಳನ್ನು ತಜ್ಞರ ಸಲಹೆಯಂತೆ ಸೇರಿಸಲಾಗಿದೆ. ಇದರಿಂದಾಗಿ ಈ ಯೋಜನೆಯಡಿ ಒಟ್ಟು 2,191 ಚಿಕಿತ್ಸೆಗಳನ್ನು ಅಂತಿಮಗೊಳಿಸಲಾಗಿದೆ ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.

ಯಶಸ್ವಿನಿ ಯೋಜನೆಯಡಿ 2024-25ರಲ್ಲಿ 68,159 ಫಲಾನುಭವಿಗಳು 117.79 ಕೋಟಿ ರೂಪಾಯಿ ಮೊತ್ತದ ಚಿಕಿತ್ಸೆಯನ್ನು ಪಡೆದಿದ್ದು ಸರಾಸರಿ ಒಂದು ಚಿಕಿತ್ಸಾ ವೆಚ್ಚ 17,000 ರೂಪಾಯಿ ಆಗಿದೆ. ಮುಂದಿನ ಸಾಲಿನಲ್ಲಿ ಸುಮಾರು 75,000 ಫಲಾನುಭವಿಗಳು ಚಿಕಿತ್ಸೆ ಪಡೆಯುವ ಅಂದಾಜಿದ್ದು, ಅದರಂತೆ ಸುಮಾರು 127.50 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ವಿವರಿಸಿದ್ದಾರೆ.
ಆರೋಗ್ಯ ಸೇವೆಯಲ್ಲಿ ಹೊಸ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಉನ್ನತ ಮಟ್ಟದ ಚಿಕಿತ್ಸೆಗಳನ್ನು ಹೊಸದಾಗಿ ಸೇರಿಸುವುದರಿಂದ ಸರಾಸರಿ ಚಿಕಿತ್ಸಾ ದರದಲ್ಲಿ ಶೇ50 ರಿಂದ ಶೇ 55ವರೆಗೆ ದರ ಹೆಚ್ಚಳವಾಗುವ ಅಂದಾಜಿದ್ದು, ಅದರಂತೆ ಸುಮಾರು 70.00 ಕೋಟಿ ರೂಪಾಯಿವರೆಗೆ ದರ ಹೆಚ್ಚಳವಾಗುವ ಅಂದಾಜು ಇದ್ದು, ಇದರಿಂದ ರೂ.62.50 ಕೋಟಿಯಿಂದ 68.75 ಕೋಟಿ ಹೆಚ್ಚಿನ ಹೊರೆ ಬೀಳುವ ಸಂಭವವಿರುತ್ತದೆ ಎಂದಿದ್ದಾರೆ.
ಈ ಹೆಚ್ಚಳವಾಗುವ ಸುಮಾರು 70.00 ಕೋಟಿ ರೂಪಾಯಿ ಅಧಿಕ ಆರ್ಥಿಕ ಹೊರೆಯನ್ನು ಸರ್ಕಾರದಿಂದ 40.00 ಕೋಟಿ ರೂಪಾಯಿ ಹೆಚ್ಚುವರಿ ಅನುದಾನವನ್ನು ಒದಗಿಸುವ ಮೂಲಕ ಮತ್ತು ಸದಸ್ಯರು ಪಾವತಿಸುವ ವಂತಿಗೆ ಮೊತ್ತದಿಂದ 30.00 ಕೋಟಿ ರೂಪಾಯಿಯನ್ನು ಭರಿಸುವ ಮೂಲಕ ಯೋಜನೆಯನ್ನು ಅನುಷ್ಠಾನಗೊಳಿಸಬಹುದೆಂದು ವರದಿ ತಿಳಿಸಿದೆ ಎಂದು ಮಾಹಿತಿ ನೀಡಿದ್ದಾರೆ.












Click it and Unblock the Notifications