ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರ್ಷಾಂತ್ಯ ವಿಶೇಷ : ಜನವರಿಯಲ್ಲಿ ರಾಜ್ಯದಲ್ಲಿ ಏನೇನಾಯ್ತು?

|
Google Oneindia Kannada News

ಬೆಂಗಳೂರು, ಡಿಸೆಂಬರ್ 12 : ಕಾಲಚಕ್ರ ಒಂದು ಸುತ್ತು ತಿರುಗಿದೆ. ಹೊಸ ವರ್ಷವನ್ನು ಸ್ವಾಗತಿಸಲು ಎಲ್ಲರೂ ಸಜ್ಜಾಗುತ್ತಿದ್ದಾರೆ. ಹಳೆಯ ವರ್ಷದ ಕಹಿ ಘಟನೆಗಳನ್ನು ಮರೆತು ಮುಂದೆ ಸಾಗಬೇಕಾಗಿದೆ. ಹೊಸ ಕನಸುಗಳ ಜೊತೆ ಹೊಸ ವರ್ಷಕ್ಕೆ ಕಾಲಿಡಬೇಕಾಗಿದೆ.

2015ರಲ್ಲಿ ಬೀದರ್‌ನಿಂದ ಚಾಮರಾಜನಗರದ ತನಕ ಹಲವಾರು ಘಟನೆಗಳು ನಡೆದಿವೆ. ಇವುಗಳಲ್ಲಿ ಕಹಿ ಘಟನೆಗಳು ಇವೆ. ನಾವು ಕನ್ನಡಿಗರು ಎಂದು ಎದೆಯುಬ್ಬಿಸಿ ಹೇಳುವಂತಹ ಘಟನೆಗಳು ನಡೆದಿವೆ. ಜನವರಿಯಿಂದ ಡಿಸೆಂಬರ್ ತನಕ ನಡೆದ ಘಟನೆಗಳ ಹಿನ್ನೋಟ ಇಲ್ಲಿವೆ.

ಮಳೆಯ ಕೊರತೆ, ಬರ ಪರಿಸ್ಥಿತಿ, ರೈತ ಆತ್ಮಹತ್ಯೆ, ನೀರಾವರಿ ಹೋರಾಟಗಳು ಕರ್ನಾಟಕದಲ್ಲಿ ವರ್ಷದಲ್ಲಿ ಸುದ್ದಿ ಮಾಡಿದವು. ಡಿ.ಕೆ.ರವಿ ಸಾವು, ಎಂ.ಎಂ.ಕಲಬುರ್ಗಿ ಹತ್ಯೆ, ಪಿಎಸ್‌ಐ ಜಗದೀಶ್ ಹತ್ಯೆ, ರೈತರ ಸರಣಿ ಆತ್ಮಹತ್ಯೆ ಸೇರಿದಂತೆ ಹಲವು ಕಹಿ ಘಟನೆಗಳು ನಡೆದವು.

ಯದುವಂಶದ ಉತ್ತರಾಧಿಕಾರಿ ಪಟ್ಟಾಭಿಷೇಕ, ಇಸ್ರೋ ಮುಖ್ಯಸ್ಥರ ಸ್ಥಾನಕ್ಕೆ ಕನ್ನಡಿಗರ ಆಯ್ಕೆ, ಮೊಯ್ಲಿಗೆ ಸರಸ್ವತಿ ಸಮ್ಮಾನ್ ಗೌರವ ಹೀಗೆ ಹಲವಾರು ಘಟನೆಗಳನ್ನು ನಾವು ಹೆಮ್ಮೆಯಿಂದ ಹೇಳುತ್ತೇವೆ. ಹಾಗಾದರೆ ಜನವರಿಯಿಂದ ಡಿಸೆಂಬರ್ ತನಕ ಏನು ನಡೆಯಿತು? ಇಲ್ಲಿದೆ ವಿವರಗಳು.....

karnataka

ವಾಹನಗಳಿಗೆ ಶಿರಾಡಿ ಬಂದ್ : ಜನವರಿ 02 : 2015ರ ಆರಂಭದಲ್ಲಿಯೇ ಕರ್ನಾಟಕ ಸರ್ಕಾರ ಬೆಂಗಳೂರು-ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯನ್ನು ಕಾಂಕ್ರಿಟ್ ರಸ್ತೆಯಾಗಿ ಅಭಿವೃದ್ಧಿಪಡಿಸಲು ಬಂದ್ ಮಾಡಿತು. ಜ.2ರಿಂದಲೇ ಶಿರಾಡಿಘಾಟ್‌ನಲ್ಲಿ ವಾಹನ ಸಂಚಾರ ಬಂದ್ ಆಯಿತು. ಸುಮಾರು 69 ಕೋಟಿ ರೂ. ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ ಕಾಮಗಾರಿ ಪೂರ್ಣಗೊಂಡು ಆಗಸ್ಟ್‌ನಲ್ಲಿ ಪುನಃ ಸಂಚಾರ ಆರಂಭವಾಯಿತು.

ಜಯಲಲಿತಾ ಮೇಲ್ಮನವಿ ವಿಚಾರಣೆ : ಜನವರಿ 05 : ಜಯಲಲಿತಾ ಅವರ ಅಕ್ರಮ ಆಸ್ತಿಗಳಿಕೆ ಪ್ರಕರಣದ ತೀರ್ಪಿನ ವಿಚಾರಣೆಯ ಮೇಲ್ಮನವಿಯ ವಿಚಾರಣೆ ಕರ್ನಾಟಕ ಹೈಕೋರ್ಟ್ ವಿಶೇಷ ಪೀಠದಲ್ಲಿ ಆರಂಭವಾಯಿತು. ಸುಪ್ರೀಂಕೋರ್ಟ್ ಆದೇಶದದಂತೆ ಹೈಕೋರ್ಟ್ ನ್ಯಾಯಮೂರ್ತಿ ಸಿ.ಆರ್.ಕುಮಾರಸ್ವಾಮಿ ಅವರ ಏಕಸದಸ್ಯ ಪೀಠವನ್ನು ರಚನೆ ಮಾಡಿ, ರಜಾ ದಿನಗಳನ್ನು ಹೊರತುಪಡಿಸಿ ನಿತ್ಯವೂ ಅರ್ಜಿಯ ವಿಚಾರಣೆ ನಡೆಸಲು ಸೂಚಿಸಿತು.

ಬಸ್ ಪ್ರಯಾಣ ದರ ಕಡಿತ : ಜನವರಿ 08 : ಡೀಸೆಲ್ ಬೆಲೆ ನಿರಂತರವಾಗಿ ಕಡಿಮೆ ಆದರೂ ಬಸ್ ದರ ಇಳಿಕೆ ಮಾಡಿಲ್ಲ ಎಂಬ ಜನರ ಆಕ್ರೋಶಕ್ಕೆ ಮಣಿದ ಕರ್ನಾಟಕ ಸರ್ಕಾರ, ಕೆಎಸ್ಆರ್‌ಟಿಸಿ ಬಸ್ ಪ್ರಯಾಣ ದರವನ್ನು ನೆಪಮಾತ್ರಕ್ಕೆ ಕಡಿಮೆ ಮಾಡಿತು. ಮಾಸಿಕ, ವಿದ್ಯಾರ್ಥಿ ಬಸ್ ಪಾಸ್ ಮತ್ತು ಎಸಿ ಹಾಗೂ ವೋಲ್ವೋ ಬಸ್ ದರದಲ್ಲಿ ಯಾವುದೇ ಕಡಿತ ಮಾಡದೆ ಜಾಣ ನಡೆ ಅನುಸರಿಸಿತು.

ಸಿದ್ದರಾಮಯ್ಯ ಹೆಲಿಕಾಪ್ಟರ್‌ನಲ್ಲಿ ಬೆಂಕಿ : ಜನವರಿ 10 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಯಾಣಿಸಬೇಕಿದ್ದ ಹೆಲಿಕಾಪ್ಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಭದ್ರತಾ ಸಿಬ್ಬಂದಿ ಸಿದ್ದರಾಮಯ್ಯ ಅವರನ್ನು ಹೆಲಿಕಾಪ್ಟರ್‌ನಿಂದ ಕೆಳಗಿಳಿಸಿ ಅನಾಹುತ ತಪ್ಪಿಸಿದರು. ಮೈಸೂರಿಗೆ ಹೋಗಲು ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಸಿದ್ದರಾಮಯ್ಯ ಹೆಲಿಕಾಪ್ಟರ್ ಏರಿದ್ದರು. ಸಚಿವ ಕೆಜೆ ಜಾರ್ಜ್, ಎಚ್.ಸಿ.ಮಹದೇವಪ್ಪ ಮುಂತಾದವರು ಸಿದ್ದರಾಮಯ್ಯ ಜೊತೆಗಿದ್ದರು. [ಹೆಲಿಕಾಪ್ಟರ್ ನಲ್ಲಿ ಬೆಂಕಿ : ಸಿದ್ದರಾಮಯ್ಯ ಪಾರು]

siddaramaiah

ಬೆಂಗಳೂರಲ್ಲಿ ಕೇಜ್ರಿವಾಲ್ ಊಟ : ಜನವರಿ 11 : ದೆಹಲಿ ವಿಧಾನಸಭೆ ಚುನಾವಣೆಗೆ ದೇಣಿಗೆ ಸಂಗ್ರಹಿಸಲು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಬೆಂಗಳೂರಿಗೆ ಆಗಮಿಸಿದ್ದರು. ಸುಮಾರು 200 ಜನರು ಕೇಜ್ರಿವಾಲ್ ಜೊತೆ ಭೋಜನ ಸವಿದವರು, ಸೆಲ್ಫೀ ತೆಗೆಸಿಕೊಂಡರು. ಕೇಜ್ರಿವಾಲ್ ಜತೆ ಭೋಜನ ಸವಿದವರು ಪಕ್ಷಕ್ಕೆ 20 ಸಾವಿರ ರೂ. ದೇಣಿಗೆ ನೀಡಿದರು.

ಇಸ್ರೋ ಅಧ್ಯಕ್ಷ ಸ್ಥಾನಕ್ಕೆ ಕನ್ನಡಿಗನ ಆಯ್ಕೆ : ಜನವರಿ 12 : ಕೆ.ರಾಧಾಕೃಷ್ಣನ್ ಅವರ ನಿವೃತ್ತಿಯಿಂದ ತೆರವಾಗಿದ್ದ ಇಸ್ರೋ ಅಧ್ಯಕ್ಷ ಸ್ಥಾನಕ್ಕೆ ಕನ್ನಡಿರನ್ನು ಆಯ್ಕೆ ಮಾಡಲಾಯಿತು. ಹಿರಿಯ ವಿಜ್ಞಾನಿ ಎ.ಎಸ್. ಕಿರಣ್ ಕುಮಾರ್ ಅವರನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಮುಖ್ಯಸ್ಥರನ್ನಾಗಿ ಕೇಂದ್ರ ಸರ್ಕಾರ ನೇಮಕ ಮಾಡಿತು. [ಇಸ್ರೋ ಅಧ್ಯಕ್ಷ ಸ್ಥಾನಕ್ಕೆ ಕನ್ನಡಿಗ]

ಎಲ್ಲಾ ಕಾನೂನು ಹೋರಾಟ ಅಂತ್ಯ : ಜನವರಿ 16 : ಬೆಂಗಳೂರಿನ ರೇಸ್‌ಕೋರ್ಸ್ ರಸ್ತೆಯಲ್ಲಿನ ಜೆಡಿಎಸ್ ಕೇಂದ್ರ ಕಚೇರಿಯನ್ನು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟುಕೊಡಬೇಕು ಎಂದು ಸುಪ್ರೀಂಕೋರ್ಟ್ ನೀಡಿದ್ದ ಆದೇಶವನ್ನು ಪುನರ್ ಪರಿಶೀಲಿಸಬೇಕು ಎಂದು ಜೆಡಿಎಸ್ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿತು. ಇದರಿಂದ ಕಚೇರಿ ಉಳಿಸಿಕೊಳ್ಳಲು ಪಕ್ಷ ನಡೆಸಿದ ಎಲ್ಲಾ ಹೋರಾಟಗಳು ಅಂತ್ಯಗೊಂಡವು.

ಜನಾರ್ದನ ರೆಡ್ಡಿಗೆ ಜಾಮೀನು : ಜನವರಿ 20 : ಸುಮಾರು ಮೂರುವರೆವರ್ಷ ಗಳಿಂದ ಜೈಲುವಾಸ ಅನುಭವಿಸುತ್ತಿದ್ದ ಗಣಿಧಣಿ ಗಾಲಿ ಜನಾರ್ದನ ರೆಡ್ಡಿಯವರಿಗೆ ಸುಪ್ರೀಂಕೊರ್ಟ್ ಜಾಮೀನು ಮಂಜೂರು ಮಾಡಿತು. ಓಬಳಾಪುರಂ ಮೈನಿಂಗ್‌ ಕಂಪನಿಯ (ಒಎಂಸಿ) ಅಕ್ರಮ ಗಣಿಗಾರಿಕೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೆಡ್ಡಿಗೆ ಷರತ್ತು ಬದ್ಧ ಜಾಮೀನು ನೀಡಿತು. ತವರು ಜಿಲ್ಲೆ ಬಳ್ಳಾರಿಗೆ ಹೋಗುವಂತಿಲ್ಲ ಎಂದು ಷರತ್ತು ಹಾಕಿತು. [ಜಾಮೀನು ಪಡೆದ ಗಣಿಧಣಿ]

janardhan reddy

ಆನಂದ್‌ ಸಿಂಗ್‌ಗೆ ಜಾಮೀನು : ಜನವರಿ 23 : ಬೇಲೇಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಹೊಸಪೇಟೆಯ ವಿಜಯನಗರ ಕ್ಷೇತ್ರದ ಬಿಜೆಪಿ ಶಾಸಕ ಆನಂದ್‌ ಸಿಂಗ್‌ಗೆ ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿತು. 2013ರಿಂದ ಆನಂದ್ ಸಿಂಗ್ ಜೈಲಿನಲ್ಲಿದ್ದರು.

ಸಚಿವ ಜಾರಕಿಹೊಳಿ ರಾಜೀನಾಮೆ : ಜನವರಿ 27 : ಅಬಕಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜಾರಕಿಹೊಳಿ ಅವರು ರಾಜೀನಾಮೆ ಪತ್ರವನ್ನು ಕಳುಹಿಸಿದರು. ತಮಗೆ ಅಬಕಾರಿ ಖಾತೆ ಬೇಡ, ಅಬಕಾರಿ ಖಾತೆಯಿಂದ ಮುಕ್ತಿ ನೀಡಿ, ಜನರ ಬಳಿ ಹೋಗುವಂತಹ ಖಾತೆ ನೀಡಿ ಎಂದು ಮುಖ್ಯಮಂತ್ರಿ ಪದೇ ಪದೇ ಮನವಿ ಮಾಡಿದ್ದ ಸತೀಶ್ ಜಾರಕಿಹೊಳಿ, ಅದು ಈಡೇರದಿದ್ದಾಗ ರಾಜೀನಾಮೆ ಕೊಟ್ಟರು.

ಚನ್ನಪಟ್ಟಣದ ಗೊಂಬೆಗೆ ಪ್ರಶಸ್ತಿ : ಜನವರಿ 30 : ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಿದ್ದ ಕರ್ನಾಟಕದ ಚನ್ನಪಟ್ಟಣ ಗೊಂಬೆಗಳ ಕುರಿತ ಸ್ತಬ್ಧಚಿತ್ರಕ್ಕೆ ಮೂರನೇ ಬಹುಮಾನ ಬಂತು. ಸ್ತಬ್ಧಚಿತ್ರದಲ್ಲಿ 4ರಿಂದ 10 ಅಡಿಗಳ ಎತ್ತರದ ಒಟ್ಟು 42 ಬೊಂಬೆಗಳು ಮತ್ತು ಆಟಿಕೆಗಳನ್ನು ಅಳವಡಿಸಲಾಗಿತ್ತು. 4 ಬೊಂಬೆಗಳು ಬ್ಯಾಟರಿ ನೆರವಿನಿಂದ ತಿರುಗುತ್ತಿದ್ದವು.

channapatna
English summary
Karnataka Year end special : What happened in Karnataka January 2015. Here is a list of main events.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X