AI ಯುಗಕ್ಕೆ ಯಕ್ಷಗಾನ: ತಂತ್ರಜ್ಞಾನ ಸಹಿತ ಜಾಗತಿಕ ಪಯಣಕ್ಕೆ ಸರ್ಕಾರ ಅಸ್ತು: ಪುರುಷೋತ್ತಮ ಬಿಳಿಮಲೆ
ಬೆಂಗಳೂರು: ಕರ್ನಾಟಕದ ಮಲೆನಾಡು ಮತ್ತು ಕರಾವಳಿ ಭಾಗದ ಸಾಂಪ್ರದಾಯಿಕ ಕಲೆಯಾಗಿರುವ 'ಯಕ್ಷಗಾನ'ವು ಮುಂದಿನ ತಲೆಮಾರುಗಳಿಗೆ AI ಜೊತೆಗೆ ತಲುಪಲಿದೆ. ಕೃತಕ ಬುದ್ಧಿಮತ್ತೆ (AI) ಯುಗಕ್ಕೆ ಯಕ್ಷಗಾನ ಕಾಲಿಡಲಿದೆ. ಸಾಂಸ್ಕೃತಿಕ ಅಸ್ಮಿತೆಯ ಪತ್ರೀಕವಾದ ಈ ಕಲೆಯ ಯುವ ಪೀಳಿಗೆಗೂ ಕೊಂಡೊಯ್ಯುವ ಉದ್ದೇಶದಿಂದ ಮಂಗಳೂರಿನಲ್ಲಿ ಯಕ್ಷಗಾನ ವಿದ್ಯುನ್ಮಾನ ದಾಖಲೆಗಳ ಸಂಗ್ರಹಾಲಯ(ಯಕ್ಷಗಾನ ಆರ್ಕೈವ್ಸ್) ಸ್ಥಾಪಿಸುವ ಪ್ರಸ್ತಾವನೆ ಇತ್ತು. ಅದಕ್ಕೀಗ ರಾಜ್ಯ ಸರ್ಕಾರ ಅಸ್ತು ಎಂದಿದೆ. ಎಐ ಯುಗಕ್ಕೆ ತಕ್ಕ ಡಿಜಿಟಲ್ ವೇದಿಕೆ ನಿರ್ಮಾಣವಾಗಲಿದೆ.
ಯೋಜನೆಯ ಅನುಷ್ಠಾನದ ಕುರಿತು ಸೋಮವಾರ (ಅಕ್ಟೋಬರ್ 5) ನಡೆದ ಇಲಾಖಾಧಿಕಾರಿಗಳ ಸಭೆಯ ನಂತರ ನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅವರು ಖುಷಿ ಸುದ್ದಿಯೊಂದನ್ನು ಹಂಚಿಕೊಂಡರು. ಯಕ್ಷಗಾನ ವಿದ್ಯುನ್ಮಾನ ದಾಖಲೆಗಳ ಸಂಗ್ರಹಾಲಯ (ಯಕ್ಷಗಾನ ಡಿಜಿಟಲ್ ಆರ್ಕೈವ್ಸ್) ಸ್ಥಾಪನೆಗೆ ತಾವು ಸಲ್ಲಿಸಿದ್ದ ಪ್ರಸ್ತಾವನೆಗೆ ಅನುಗುಣವಾಗಿ ಸರ್ಕಾರವು 9.5ಕೋಟಿ ರೂಪಾಯಿ ಅನುದಾನವನ್ನು ಮಂಜೂರು ಮಾಡಿದೆ. ಇದು ಯಕ್ಷಗಾನ ಕಲೆಯನ್ನು ಮುಂದಿನ ತಲೆಮಾರಿಗೆ ಸಮಗ್ರವಾಗಿ ತಲುಪಿಸುವ ಮಹತ್ವದ ಹೆಜ್ಜೆಯಾಗಿದೆ ಎಂದು ಬಿಳಿಮಲೆ ಅಭಿಪ್ರಾಯಪಟ್ಟರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನದಲ್ಲಿರುವ ಪತ್ರಾಗಾರ ಇಲಾಖೆಯು ಯೋಜನೆಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದು, ಅದಕ್ಕಾಗಿ ಅಗತ್ಯ ಸಂಖ್ಯೆಯ ಶೈಕ್ಷಣಿಕ ಪರಿಣಿತರು ಹಾಗೂ ಅನುಭವಿ ಅಧಿಕಾರಿಗಳನ್ನು ಒಳಗೊಂಡ ಪ್ರತ್ಯೇಕ ಘಟಕವೇ ಸ್ಥಾಪನೆಯಾಗಲಿದೆ ಎಂದು ಹೇಳಿದರು.
ಯಕ್ಷಗಾನ ದಾಖಲೀಕರಣಕ್ಕಷ್ಟೇ ಸೀಮಿತ ಅಲ್ಲ!
ಪತ್ರಾಗಾರ ಇಲಾಖೆಯು ಕೇವಲ ಯಕ್ಷಗಾನ ಕಲೆಯ ದಾಖಲೀಕರಣಕ್ಕೆ ಸೀಮಿತವಾಗದೇ ಅದರ ಮನರಂಜನಾ ಆಯಾಮವನ್ನೂ ಗಮನದಲ್ಲಿಟ್ಟುಕೊಂಡು ಯೋಜನೆಯನ್ನು ರೂಪಿಸಬೇಕೆಂದು ತಾವು ಸಭೆಯಲ್ಲಿ ಸಲಹೆ ನೀಡಿರುವುದಾಗಿ ತಿಳಿಸಿದ ಬಿಳಿಮಲೆ, ಇದು ಕೇವಲ ದಾಖಲೆಗಳ ಸಂಗ್ರಹಾಲಯವಾಗದೇ ಇಂದಿನ ಕೃತಕ ಬುದ್ಧಿಮತ್ತೆಯ ಯುಗಕ್ಕೆ ಸಂವಾದಿಯಾಗುವ, ಹೊಸ ತಲೆಮಾರನ್ನು ಆಕರ್ಷಿಸುವ ಹಾಗೂ ಯಕ್ಷಗಾನವನ್ನು ಜಾಗತಿಕ ಪ್ರೇಕ್ಷಕರಿಗೆ ಪರಿಚಯಿಸುವ ಡಿಜಿಟಲ್ ವೇದಿಕೆಯಾಗಿ ರೂಪುಗೊಳ್ಳಬೇಕಾದ ಅವಶ್ಯಕತೆ ಇದೆ. ಈ ದೃಷ್ಟಿಯಿಂದ ಸರ್ಕಾರವು ಸಮಗ್ರ ಕ್ರಿಯಾ ಯೋಜನೆಯನ್ನು ರೂಪಿಸಬೇಕೆಂದು ಮನವರಿಕೆ ಮಾಡಲಾಗಿದೆ ಎಂದು ತಿಳಿಸಿದರು.
ಒಪ್ಪಂದ, ತಂತ್ರಜ್ಞಾನ ಸಹಿತ ಪ್ರಸರಣದ ಅಗತ್ಯತೆ
ಕಲೆಯ ಉಳಿವು ಕೇವಲ ಪ್ರದರ್ಶನದಿಂದ ಸಾಧ್ಯವಿಲ್ಲ. ಅದರ ವೈಜ್ಞಾನಿಕ ದಾಖಲೀಕರಣ, ವ್ಯವಸ್ಥಿತ ಸಂಗ್ರಹ, ಬೌದ್ಧಿಕ ಹಕ್ಕುಗಳ ಕುರಿತಾದ ಕಾನೂನುಬದ್ಧ ಒಪ್ಪಂದಗಳು ಮತ್ತು ತಂತ್ರಜ್ಞಾನಾಧಾರಿತ ಪ್ರಸರಣದ ಅವಶ್ಯಕತೆಯನ್ನು ಸಭೆಯಲ್ಲಿ ತಾವು ಒತ್ತಿ ಹೇಳಿರುವುದಾಗಿ ತಿಳಿಸಿದ ಬಿಳಿಮಲೆ, ಇಂತಹ ಪ್ರಯತ್ನಗಳ ಮೂಲಕ ಸ್ಥಳೀಯ ಕಲಾ ಪರಂಪರೆಯನ್ನು ಮುಂದಿನ ತಲೆಮಾರಿಗೆ ಉಳಿಸುವುದರ ಜೊತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಪರಿಚಯಿಸಲು ಸಾಧ್ಯವಾಗಲಿದೆ ಎಂದು ವಿವರಿಸಿದರು.
ಇಂದಿನ ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಮಂಜುಶ್ರೀ.ಎನ್, ನಿರ್ದೇಶಕಿ ಡಾ.ಕೆ.ಎಂ.ವಸುಂಧರಾ ಪರಿಣಿತರಾದ ಸುಧನ್ವ ದೇರಾಜೆ, ಧನಂಜಯ ಕುಂಬ್ಲೆ ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.


Click it and Unblock the Notifications
