ಮಕ್ಕಳನ್ನು ಬಸ್ ನಿಲ್ದಾಣದಲ್ಲಿ ಬಿಟ್ಟು ಮಹಿಳೆ ನಾಪತ್ತೆ: ಬಂದರು ಬಳಿ ಬೈಕ್, ಡೆತ್ ನೋಟ್ ಪತ್ತೆ!
ಕಾರವಾರ, ನವೆಂಬರ್ 27: ಮಕ್ಕಳನ್ನು ಬಸ್ ನಿಲ್ದಾಣದ ಬಳಿ ಬಿಟ್ಟು ನಾಪತ್ತೆಯಾಗಿದ್ದ ಮಹಿಳೆಯ ಬೈಕ್ ಕುಮಟಾದ ಹೆಡ್ ಬಂದರು ಬಳಿ ಪತ್ತೆಯಾಗಿದೆ. ಬೈಕ್‌ನಲ್ಲಿ ಮಹಿಳೆ ಬರೆದಿಟ್ಟಿದ್ದರು ಎನ್ನಲಾದ ಡೆತ್ ನೋಟ್ ಕೂಡ ಪತ್ತೆಯಾಗಿದೆ. ಇದೀಗ ಕಣ್ಮೆರೆಯಾಗಿರುವ ಮಹಿಳೆಗಾಗಿ ಸಮುದ್ರದಲ್ಲಿ ಹುಡುಕಾಟ ಮುಂದುವರೆದಿದೆ.
ಕುಮಟಾ ತಾಲೂಕಿನ ಸಾಂತಗಲ್ ಮೂಲದ ನಿವೇದಿತಾ ನಾಗರಾಜ ಭಂಡಾರಿ ನಾಪತ್ತೆಯಾದ ವಿವಾಹಿತೆ. ಶನಿವಾರ ಮನೆಯಿಂದ ಇಬ್ಬರು ಗಂಡು ಮಕ್ಕಳನ್ನು ಸ್ಕೂಟಿ ಮೇಲೆ ಕರೆತಂದಿದ್ದ ಈಕೆ, ಕುಮಟಾದ ಪಿಕ್ ಅಪ್ ಬಸ್ ನಿಲ್ದಾಣದ ಬಳಿ ಬಿಟ್ಟು ತೆರಳಿದ್ದಳು. ಗಂಟೆಗಟ್ಟಲೆ ಆಕೆ ಬಾರದೆ ಇದ್ದಾಗ ಮಹಿಳೆಗಾಗಿ ಹುಡುಕಾಟ ನಡೆದಿದ್ದು, ಈಕೆಯ ಬೈಕ್ ಕುಮಟಾದ ಹೆಡ್ ಬಂದರು ಬಳಿ ಪತ್ತೆಯಾಗಿದೆ.

ಕೊನೆಗೆ ಈ ಬಗ್ಗೆ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಹಾಗೂ ಲೈಫ್ ಗಾರ್ಡ್ ಸಿಬ್ಬಂದಿ ಮಹಿಳೆಗಾಗಿ ಹೆಡ್ ಬಂದರು ಬಳಿ ಹುಡುಕಾಟ ನಡೆಸಿದ್ದರು. ಆದರೆ ಸಮುದ್ರದಲ್ಲಿ ಮಹಿಳೆಯ ವೇಲ್ ಮಾತ್ರ ಸಿಕ್ಕಿದ್ದರಿಂದ ರಾತ್ರಿಯಾದ ಕಾರಣ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಮಹಿಳೆ ನಿಲ್ಲಿಸಿದ್ದ ಬೈಕ್‌ನಲ್ಲಿ ಆಕೆಯ ಮಾಂಗಲ್ಯ, ಕಾಲುಂಗುರ ಹಾಗೂ ಡೆತ್ ನೋಟ್ ಕೂಡ ಪತ್ತೆಯಾಗಿದೆ.
ಮಹಿಳೆ ಬರೆದಿದ್ದಾರೆ ಎನ್ನಲಾದ ಡೆತ್ ನೋಟ್‌ನಲ್ಲಿ 'ನನ್ನ ಸಾವಿಗೆ ನಾನೆ ಕಾರಣ. ನನ್ನ ಹೆಣ ನೋಡಲು ಇಷ್ಟಪಡಬಾರದು. ಸಿಗಲೆಬಾರದು ಅಂತಾ ಸಮುದ್ರದ ಮಡಲಿಗೆ ಹಾರುತ್ತಿದ್ದೇನೆ. ಯಾರು ಹುಡುಕುವುದು ಬೇಡ' ಎಂದು ಬರೆಯಲಾಗಿದೆ.
'ಏನೋ ಸಾಧನೆ ಮಾಡಬೇಕು ಎಂದುಕೊಂಡಿದ್ದೆ, ಜೀವನ ಸಾವಿನ ಅಂಚಿಗೆ ಬಂದು ನಿಂತಿದೆ. ಆತ್ಮಹತ್ಯೆ ಮಾಡಿಕೊಂಡವರು ಹೇಡಿಗಳು ಅಂತಾರೆ. ಆದರೆ ಸಂದರ್ಭ ಅವರನ್ನು ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡುತ್ತಿದೆ. ನನ್ನ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ' ಎಂದು ಬರೆಯಲಾಗಿದೆ.
ಇನ್ನು ಮಹಿಳೆಗಾಗಿ ಕುಮಟಾದ ಲೈಫ್ ಗಾರ್ಡ್ ಸಿಬ್ಬಂದಿಗಳಾದ ಉದಯ ಹರಿಕಂತ್ರ ಹಾಗೂ ಗಣೇಶ ಹುಡುಕಾಟ ನಡೆಸಿದ್ದರು. ಜೊತೆಗೆ ಪೊಲೀಸರು ಕೂಡ ಸ್ಥಳದಲ್ಲಿದ್ದು ಹುಡುಕಾಟ ನಡೆಸಿದ್ದಾರೆ. ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Helplines: COOJ Mental Health Foundation (COOJ)- 0832-2252525, ಪರಿವರ್ತನ್- +91 7676 602 602, Connecting Trust- +91 992 200 1122/+91-992 200 4305 or Sahai- 080-25497777/ [email protected]
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ ಸ್ನೇಹಾ ಫೌಂಡೇಷನ್ ಸಹಾಯವಾಣಿ ಇಂತಿದೆ: 04424640050, ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ 02225521111ಗೆ ಕರೆ ಮಾಡಬಹುದು.












Click it and Unblock the Notifications